ಆ್ಯಪ್ನಗರ

ಸಾಹಿತ್ಯ ಸಮ್ಮೇಳನ: ಹಾಸ್ಯದ ರಸದೌತಣ

ಬೆಳ್ಳಂಬೆಳಗ್ಗೆ ಜಾನಪದ ಸಿರಿಯ ಸಿಂಚನ. ಸೂರ್ಯ ನೆತ್ತಿ ಮೇಲೆ ಬರುವ ಹೊತ್ತಿಗೆ ಕವನಗಳ ವಾಚನ. ನಡುವೆ ಎರಡು ಗೋಷ್ಠಿಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಚಿಂತನ-ಮಂಥನ. ಮುಸ್ಸಂಜೆಯಲ್ಲಿ ಹಾಸ್ಯದ ರಸದೌತಣ. ಚಂದಮಾಮನ ತಿಂಗಳ ಬೆಳಕಲ್ಲಿ ನಾಟಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳ ಪ್ರದರ್ಶನ.

ವಿಕ ಸುದ್ದಿಲೋಕ 19 Feb 2017, 9:07 pm

* ನವೀನ್‌ ಮಂಡ್ಯ

ಬೆಳ್ಳಂಬೆಳಗ್ಗೆ ಜಾನಪದ ಸಿರಿಯ ಸಿಂಚನ. ಸೂರ್ಯ ನೆತ್ತಿ ಮೇಲೆ ಬರುವ ಹೊತ್ತಿಗೆ ಕವನಗಳ ವಾಚನ. ನಡುವೆ ಎರಡು ಗೋಷ್ಠಿಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಚಿಂತನ-ಮಂಥನ. ಮುಸ್ಸಂಜೆಯಲ್ಲಿ ಹಾಸ್ಯದ ರಸದೌತಣ. ಚಂದಮಾಮನ ತಿಂಗಳ ಬೆಳಕಲ್ಲಿ ನಾಟಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳ ಪ್ರದರ್ಶನ.

14ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎರಡನೇ ದಿನವಾದ ಶನಿವಾರ ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ವಿಭಿನ್ನ ವಾತಾವರಣವಿತ್ತು. ಮೈಮನಸ್ಸುಗಳನ್ನು ತಣಿಸುವ ಹಾಡು, ನೃತ್ಯ, ಸಂಗೀತ ಒಂದೆಡೆಯಾದರೆ ಮತ್ತೊಂದೆಡೆ ಚಿಂತನೆಗಳ ಹಚ್ಚುವ ವಸ್ತುವಿಷಯಗಳ ಬಗೆಗಿನ ಗಂಭೀರ ಚರ್ಚೆಗಳು ನಡೆದವು. ಕನ್ನಡ ಹಬ್ಬದ ವಾತಾವರಣಕ್ಕೆ ಪ್ರೇಕ್ಷಕರ ಕೊರತೆಯು ಒಂದಷ್ಟು ಮಬ್ಬು ಕವಿಯುವಂತೆ ಮಾಡಿತ್ತು.

ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನೋಡಿ, ಭಾಷಣ ಕೇಳಿದ್ದ ಜನರು ಎರಡನೇ ದಿನದಂದು ನಾನಾ ಬಗೆಯ ಕಾರ‍್ಯಕ್ರಮಗಳನ್ನು ನೋಡಿ ಆನಂದಿಸಿದರು. ಬೆಳಗ್ಗೆಯೇ ಸ್ವರಸಿರಿ ಜಾನಪದ ತಂಡದ ಕಲಾವಿದರು ಹಾಗೂ ಮಹಿಳಾ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು 'ಧಿಜಾನಪದ ಗಾನ ಸಿರಿ' ಕಾರ‍್ಯಕ್ರಮದೊಂದಿಗೆ ಎರಡನೇ ದಿನದ ಚಟುವಟಿಕೆಗಳಿಗೆ ನಾಂದಿಯಾಡಿದರು. ಹತ್ತು ಹಲವು ಜನಪದ ಹಾಡುಗಳನ್ನು ಹಾಡುವ ಮೂಲಕ ಜನಪದ ಸೊಗಡನ್ನು ಕ್ರೀಡಾಂಗಣದ ತುಂಬೆಲ್ಲಾ ಪಸರಿಸಿದರು.

ಬೆನ್ನಲ್ಲೇ ಸಾಹಿತಿ ಮೈಸೂರಿನ ಡಾ.ಕಬ್ಬಿನಾಲೆ ಭಾರದ್ವಾಜ್‌ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಯುವ ಕವಿಗಳು, ಕವಯಿತ್ರಿಯರು ಕವನಗಳನ್ನು ವಾಚಿಸಿ ಗಮನ ಸೆಳೆದರು. ಕವಿತೆಗಳ ಮೂಲಕ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಿ, ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಿದರು. ಪ್ರೇಮದ ಕಡಲಲ್ಲಿ ತೇಲುತ್ತಾ ಪ್ರೀತಿಯ ಸಿಂಚನ ಮಾಡಿಸಿದರು. ಸಾಹಿತಿ ಡಾ.ಮಳಲಿ ವಸಂತಕುಮಾರ್‌ ಅವರು ಗೋಷ್ಠಿಗೆ ಚಾಲನೆ ನೀಡಿದರೆ, ಹಾಸ್ಯನಟ ಮಂಡ್ಯ ರಮೇಶ್‌ ಕವಿಗಳಿಗೆ ಕಿವಿಮಾತು ಹೇಳಿದರು. ಹಸನ್ಮುಖಿಯಾಗಿ ಕುಳಿತಿದ್ದ ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಅವರು ಕವಿಗಳ ಕವಿತೆಗಳಿಗೆ ಕಿವಿಯಾದರು.

ಕೆಲವು ಕವಿತೆಗಳಿಗೆ ಪ್ರತಿಭಾಂಜಲಿಯ ಡೇವಿಡ್‌ ಸಂಗೀತ ಸಂಯೋಜನೆ ಮಾಡಿ ಸ್ಥಳದಲ್ಲೇ ಅವುಗಳನ್ನು ಗಾಯಕರಿಂದ ಹಾಡಿಸಿದರು. ಗಾಯಕರಾದ ಡೇವಿಡ್‌, ಗಾನಶ್ರೀ, ಪೂಜಾ, ರೋಹನ್‌, ದಿಶಾಜೈನ್‌, ಧನಂಜಯ ಅವರ ಕಂಠಸಿರಿಯಲ್ಲಿ ಕವಿತೆಗಳು ಹಾಡಾದವು. ಕವನಗಳನ್ನು ಕೇಳಿ ಉಲ್ಲಸಿತಗೊಂಡಿದ್ದ ಮನಸ್ಸುಗಳು ಕವಿಗೋಷ್ಠಿ ಬೆನ್ನಲ್ಲೇ 'ಧಿಮಾಧ್ಯಮ ಗೋಷ್ಠಿ'ಗೆ ಕಿವಿಗೊಟ್ಟು ದೃಶ್ಯಮಾಧ್ಯಮ, ಪತ್ರಿಕೋದ್ಯಮದಲ್ಲಿ ಸಾಹಿತ್ಯ ಮತ್ತು ಭಾಷೆಯ ಬಳಕೆ ಬಗ್ಗೆ ವಿಷಯ ಅರಿತರು.

ಬಳಿಕ ಸಂಕೀರ್ಣ ಗೋಷ್ಠಿಯಲ್ಲಿ ಯುವಜನತೆ, ದಲಿತ ಪ್ರಜ್ಞೆ, ಮಹಿಳೆ ಕುರಿತಾದ ವಿಷಯಗಳು ನೆರೆದಿದ್ದವರನ್ನು ಚಿಂತನೆಗೆ ಹಚ್ಚಿದವು. ನಂತರ ನಡೆದ 'ಧಿಹಾಸ್ಯಲಾಸ್ಯ' ಕಾರ‍್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಎಂ.ಎಸ್‌.ನರಸಿಂಹಮೂರ್ತಿ, ರಿಚರ್ಡ್‌ ಲೂಯಿಸ್‌, ಡಾ.ಬಸವರಾಜು ಬೆಣ್ಣೆ, ವೈ.ವಿ.ಗುಂಡುರಾವ್‌, ಕಿಲ್ಕೋರ್‍ಸ್ಕರ್‌ ಸತ್ಯ ಅವರು ನೆರೆದಿದ್ದ ಜನರನ್ನು ನಗೆಗೆಡಲಲ್ಲಿ ತೇಲಿಸಿದರು. ಬೆಳಗ್ಗೆ ನಡೆದ ಕವಿಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಸಂಕೀರ್ಣ ಗೋಷ್ಠಿಗಳಿಗೆ ಪ್ರೇಕ್ಷಕರ ಕೊರತೆ ಕಂಡು ಬಂದಿತ್ತಾದರೂ ಸಂಜೆ ನಡೆದ ಹಾಸ್ಯಲಾಸ್ಯದ ವೇಳೆ ವೇದಿಕೆ ಎದುರಿನ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದವು.

ಎಂ.ಎಸ್‌.ನರಸಿಂಹಮೂರ್ತಿ, ರಿಚರ್ಡ್‌ ಲೂಯಿಸ್‌ ಅವರು ತಮ್ಮ ವಿಶಿಷ್ಟ ಆಂಗಿಕ ಅಭಿನಯದೊಂದಿಗೆ ತಮ್ಮದೇ ಮಾತುಗಳಲ್ಲಿ ಜನರಿಗೆ ಕಚಗುಳಿ ಇಟ್ಟರು. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಕಿಚಾಯಿಸಿದರು. ಇದರೊಂದಿಗೆ ಜನರನ್ನು ಹಾಸ್ಯದ ರಸದಲ್ಲಿ ಮಿಂದೇಳುವಂತೆ ಮಾಡಿದರು. ನಂತರ 'ಧಿತ್ರಿವೇಣಿ ಸಂಗಮ' ಧಾರಾವಾಹಿಯ ತಂಡದ ಕಲಾವಿದರು ವೇದಿಕೆ ಮೇಲೇರಿ ಕಾರ‍್ಯಕ್ರಮಕ್ಕೆ ತಾರಾ ಮೆರುಗು ನೀಡಿದರು.

ಇದಿಷ್ಟು ಮುಗಿಯುವ ಹೊತ್ತಿಗೆ ಸೂರ್ಯ ಪಡುವಣದಲ್ಲಿ ಅಸ್ತಂಗತನಾಗಿ ಆಗಸದಲ್ಲಿ ಅರ್ಧ ಚಂದ್ರ ಗೋಚರಿಸುತ್ತಿದ್ದನು. ಈ ವೇಳೆಯಲ್ಲಿ ಮಂಡ್ಯದ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿಗಳು ಕುವೆಂಪು ವಿರಚಿಸಿ 'ಧಿಜಲಗಾರ' ನಾಟಕ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಗುರುದೇವ ಲಲಿತಕಲಾ ಅಕಾಡೆಮಿಯ ಮಕ್ಕಳು ನೃತ್ಯ ರೂಪಕ ಪ್ರದರ್ಶಿಸಿ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ