ಆ್ಯಪ್ನಗರ

ಚುನಾವಣಾ ಅಕ್ರಮ ತಡೆಗೆ ವಿಜಿಲ್‌ !

ಚುನಾವಣಾ ಅಕ್ರಮ ತಡೆಗೆ ಮೊಬೈಲ್‌ ಆ್ಯಪ್‌ ನವೀನ್‌ ಮಂಡ್ಯ ಲೋಕಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತವರ ಬೆಂಬಲಿಗರಿಂದ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ...

Vijaya Karnataka 16 Mar 2019, 5:00 am
ಚುನಾವಣಾ ಅಕ್ರಮ ತಡೆಗೆ ಮೊಬೈಲ್‌ ಆ್ಯಪ್‌
Vijaya Karnataka Web c vigil app for lok sabha polss 2019
ಚುನಾವಣಾ ಅಕ್ರಮ ತಡೆಗೆ ವಿಜಿಲ್‌ !

ನವೀನ್‌ ಮಂಡ್ಯ
ಲೋಕಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತವರ ಬೆಂಬಲಿಗರಿಂದ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ಕಂಡು ಬಂದರೆ ತಕ್ಷಣ ವಿಜಿಲ್‌ ಮಾಡಿ !

ಚುನಾವಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಅವುಗಳನ್ನು ತಡೆಯಲು ಭಾರತ ಚುನಾವಣಾ ಆಯೋಗವು ಈ ಬಾರಿ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಪ್ರಸಕ್ತ ಚುನಾವಣೆಯಲ್ಲಿ ಇದನ್ನು ಬಳಸಲಾಗುತ್ತಿದೆ. 2018ರಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ವೇಳೆ ಅದು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗದ ಕಾರಣ ಪ್ರಾಯೋಗಿಕವಾಗಿ ಮಾತ್ರ ಅಧಿಕಾರಿಗಳ ಹಂತದಲ್ಲಿ ಬಳಕೆ ಮಾಡಲಾಗಿತ್ತು. ಆದರೀಗ ಸಾರ್ವಜನಿಕರು ಬಳಸಿ, ಆ್ಯಪ್‌ ಮೂಲಕವೇ ದೂರು ನೀಡಲು ಅವಕಾಶ ಕಲ್ಪಿಸಿ ಸಾರ್ವತ್ರೀಕರಣಗೊಳಿಸಲಾಗಿದೆ.

ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿನ ಪ್ಲೇ ಸ್ಟೋರ್‌ನಲ್ಲಿ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಲಭ್ಯವಿದೆ. ಸದ್ಯಕ್ಕೆ ಈ ಆ್ಯಪ್‌ ಡೌನ್‌ಲೋಡ್‌ ಆಗುತ್ತಿಲ್ಲವಾಗಿದ್ದು, ನಾಮಪತ್ರ ಸಲ್ಲಿಕೆ ಶುರುವಾಗುವ ಮಾ.19ರಿಂದ ಡೌನ್‌ಲೋಡ್‌ ಆಗಲಿದೆ. ಐಫೋನ್‌(ಐಒಎಸ್‌)ಗಳಲ್ಲೂ ಈ ಅ್ಯಪ್‌ ಲಭ್ಯವಿದೆ. ಕೇವಲ ದೂರು ನೀಡಲಷ್ಟೇ ಈ ಅ್ಯಪ್‌ನ್ನು ರೂಪಿಸಿರುವುದರಿಂದ ಇದರ ಗಾತ್ರ ಕೇವಲ 11 ಎಂಬಿ ಇದೆ. ಅಕ್ರಮ ಚಟುವಟಿಕೆಗಳ ತಡೆಗೆ ಈ ಅ್ಯಪ್‌ ರಾಮಬಾಣದಂತಿದೆ.

ಯಾವುದೇ ಚುನಾವಣಾ ಅಕ್ರಮಗಳನ್ನು ಕಂಡ ಜನರು ಆ ಬಗ್ಗೆ ದೂರು ನೀಡಲು ಮೊದಲೆಲ್ಲಾ ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಇಲ್ಲವೇ ಚುನಾವಣಾ ಉದ್ದೇಶಕ್ಕಾಗಿ ಸ್ಥಾಪಿಸಿರುವ ಕಂಟ್ರೋಲ್‌ ರೂಂಗೆ ಕರೆ ಮಾಡಬೇಕಿತ್ತು. ಆದರೀಗ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಇರುವುದರಿಂದ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ದೂರು ನೀಡಬಹುದಾಗಿದೆ.

ದೂರಿಗೆ ಪೂರಕವಾದ ಫೋಟೋ ಮತ್ತು ವೀಡಿಯೋಗಳನ್ನು ಅ್ಯಪ್‌ನಲ್ಲೇ ಅಪ್‌ಲೋಡ್‌ ಮಾಡಿ, ಪುರಾವೆ ನೀಡಬಹುದಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಕೇವಲ 100 ನಿಮಿಷಗಳಲ್ಲಿ ಕೈಗೊಂಡ ಕ್ರಮದ ಬಗ್ಗೆ ದೂರುದಾರ ವ್ಯಕ್ತಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪ್ರತಿಕ್ರಿಯೆ ಬರಲಿದೆ. ಜತೆಗೆ, ದೂರುದಾರರು ತಾವು ನೀಡಿದ ದೂರಿನ ಪ್ರತಿ ಹಂತವನ್ನೂ(ಕಂಪ್ಲೇಂಟ್‌ ಸ್ಟೇಟಸ್‌) ಆ್ಯಪ್‌ನಲ್ಲೇ ಪರಿಶೀಲಿಸಬಹುದಾಗಿದೆ.

ಈ ಮೊದಲು ಜನರು ಚುನಾವಣಾ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ದೂರು ಕೊಡಬಹುದಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಬಂದಿದೆ. ಜನರು ತಾವು ಕುಳಿತ ಸ್ಥಳದಲ್ಲೇ ಆ್ಯಪ್‌ ಮೂಲಕ ಚುನಾವಣಾ ಅಕ್ರಮಗಳ ಬಗ್ಗೆ ದೂರು ಕೊಡಬಹುದಾಗಿರುವುದರಿಂದ ಚುನಾವಣಾ ಅಕ್ರಮಗಳ ತಡೆಗಾಗಿ ನಿಯೋಜಿಲ್ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಾ 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಹಿಂದೆ ಬೀಳಬೇಕಾಗುತ್ತದೆ.

ಚುನಾವಣಾ ವೇಳಾಪಟ್ಟಿ ಪ್ರಕಟವಗುತ್ತಿದ್ದರಿಂದ ಜನರು ಸೋಷಿಯಲ್‌ ಮೀಡಿಯಾಗಳ ಹಿಂದೆ ಬಿದ್ದಿದ್ದಾರೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪರವಾಗಿ ಸೋಷಿಯಲ್‌ ಮೀಡಿಯಾ ಮೂಲಕವೇ ಹೆಚ್ಚು ಪ್ರಚಾರ ನಡೆಯುತ್ತಿದೆ. ಹೀಗಾಗಿ ಚುನಾವಣಾ ಆಯೋಗವು ಸೋಷಿಯಲ್‌ ಮೀಡಿಯಾಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ. ಒಂದೆಡೆ ಸಾಮಾಜಿಕ ತಾಲತಾಣಗಳು, ಅ್ಯಪ್‌ಗಳು ಚುನಾವಣಾ ಪ್ರಚಾರಕ್ಕೆ ಬಳಕೆಯಾಗುತ್ತಿದ್ದರೆ, ಮತ್ತೆಂದೆಡೆ ಆ್ಯಪ್‌ಗಳ ಮೂಲಕವೇ ಚುನಾವಣಾ ಅಕ್ರಮಗಳ ತಡೆಗೆ ಆಯೋಗ ಮುಂದಾಗಿದೆ.

ಜಾಲತಾಣಗಳಲ್ಲಿ ಚುನಾವಾಣೆ ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರತಿಯೊಂದು ಪ್ರಚಾರದ ವಿಡಿಯೋ, ಪೋಟೊ ಶೇರ್‌ ಮಾಡುವುದನ್ನು ಲೆಕ್ಕ ಹಾಕಲಿದ್ದು, ಅದೆಲ್ಲರ ಖರ್ಚನ್ನು ಅಭ್ಯರ್ಥಿಯ ಚುನಾವಣಾ ವೆಚ್ಚದ ಲೆಕ್ಕಕ್ಕೇ ಸೇರಿಸಲಾಗುತ್ತಿದೆ. ಸಿನಿಮಾ ಹಾಡುಗಳಿಗೆ ಅಭ್ಯರ್ಥಿಯ ಪೋಟೊ, ವಿಡಿಯೋಗಳನ್ನು ಮಿಕ್ಸ್‌ ಮಾಡಿ, ಹೀರೊ ರೀತಿಯಲ್ಲಿ ಪ್ರಚಾರ ನೀಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ವಾಟ್ಸಪ್‌ ಗ್ರೂಪ್‌ಗಳಲ್ಲಿ ನಡೆಯುವ ಚರ್ಚೆಗಳಲ್ಲಿ ರಾಜಕೀಯದ ಕೆಸೆರೆರೆಚಾಟದ ಬಗ್ಗೆ ದೂರು ನೀಡಿದರೂ, ಆಯೋಗ ಕ್ರಮ ಕೈಗೊಳ್ಳಲಿದೆ.

ಮೊಬೈಲ್‌ಗಳು ಅಂಗೈನಲ್ಲೇ ವಿಶ್ವವನ್ನು ತೋರಿಸುತ್ತವೆ. ಹೀಗಾಗಿ ಅಂತಹುದೇ ಮೊಬೈಲ್‌ಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮಗಳ ಬಗ್ಗೆ ಜನರು ದೂರು ಕೊಡಲು ಅನುಕೂಲವಾಗುವಂತೆ ಚುನಾವಣಾ ಆಯೋಗವು 'ಧಿಸಿ-ವಿಜಿಲ್‌' ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿದೆ. ಜನರು ಈ ಆ್ಯಪ್‌ ಮೂಲಕವೇ ದೂರು ನೀಡಬಹುದು. ದೂರು ನೀಡಿದ 100 ನಿಮಿಷಗಳಲ್ಲಿ ದೂರುದಾರರಿಗೆ ಪ್ರತಿಕ್ರಿಯೆ ಬರಲಿದೆ.
- ಎನ್‌.ಮಂಜುಶ್ರೀ, ಜಿಲ್ಲಾಧಿಕಾರಿ, ಮಂಡ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ