ಆ್ಯಪ್ನಗರ

ಮಂಡ್ಯದಲ್ಲಿ ಸಂಭ್ರಮದ ಸಂಕ್ರಾಂತಿ: ಹಬ್ಬದ ದಿನವೇ ಕೊರೊನಾ ಲಸಿಕೆ ಆಗಮನ

ಕೊರೊನಾ ಅಬ್ಬರದ ಕಡಿಮೆಯಾದ ಸಂದರ್ಭದಲ್ಲಿ ಬಂದ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಗುರುವಾರ ರೈತರು ಮತ್ತು ಸಾರ್ವಜನಿಕರು ಸಂಭ್ರಮ, ಸಡಗರದಿಂದ ಆಚರಿಸಿದರು. ಸಂಕ್ರಾಂತಿ ದಿನವೇ ಕೊರೊನಾ ಲಸಿಕೆಯು ಜಿಲ್ಲೆಗೆ ಬಂದದಿರುವುದು ಕಾಕತಾಳೀಯ.

Vijaya Karnataka Web 14 Jan 2021, 5:15 pm
ಮಂಡ್ಯ: ಕೊರೊನಾ ಅಬ್ಬರದ ಕಡಿಮೆಯಾದ ಸಂದರ್ಭದಲ್ಲಿ ಬಂದ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಗುರುವಾರ ರೈತರು ಮತ್ತು ಸಾರ್ವಜನಿಕರು ಸಂಭ್ರಮ, ಸಡಗರದಿಂದ ಆಚರಿಸಿದರು. ಸಂಕ್ರಾಂತಿ ದಿನವೇ ಕೊರೊನಾ ಲಸಿಕೆಯು ಜಿಲ್ಲೆಗೆ ಬಂದದಿರುವುದು ಕಾಕತಾಳೀಯ.
Vijaya Karnataka Web ellu bella


ರೈತರು ಸಂಜೆ ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ನಾನಾ ಪೂಜೆಗಳು ನಡೆಯುತ್ತಿದ್ದು, ಬುಧವಾರ ಧರ್ನುಮಾಸದ ಕೊನೆಯ ದಿನ ಎಳ್ಳುಅಮಾವಾಸ್ಯೆ ಪೂಜೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಮಾಘಮಾಸ ಆರಂಭದ ದಿನವಾದ ಗುರುವಾರ ಮಕರ ಸಂಕ್ರಾಂತಿ ಅಂಗವಾಗಿ ಎಲ್ಲ ಗ್ರಾಮಗಳಲ್ಲೂ ಜನರು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿ ಅಕ್ಕಿ, ಬೆಲ್ಲ, ಬೇಳೆಕಾಳು ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ದೇವಾಲಯಗಳಲ್ಲಿ ಭಕ್ತರಿಗೆ ಬಿಸಿಬಿಸಿ ಪೊಂಗಲ್ ಅ‌ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿತ್ತು. ಸುಗ್ಗಿ ಹಬ್ಬ ಸಂಕ್ರಾಂತಿ ಅಂಗವಾಗಿ ಮಹಿಳೆಯರು, ಮಕ್ಕಳು ತಮ್ಮ ನೆರೆಹೊರೆಯ ಹಾಗೂ ಸಂಬಂಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಬೀರಿ ಸಂತಸ ಹಂಚಿಕೊಂಡರು.

ಮಂಡ್ಯ: ಲಸಿಕೆ ಪಡೆಯುವವರ ಮೇಲೆ ನಿಗಾ ವಹಿಸಿ ಎಂದ ಜಿಲ್ಲಾಧಿಕಾರಿ

ಮಂಗಳವಾರವೇ ಆರಂಭಗೊಂಡಿದ್ದ ಹಬ್ಬದ ವಸ್ತುಗಳ ಖರೀದಿ ಭರಾಟೆ ಗುರುವಾರ ಮಧ್ಯಾಹ್ನದವರೆಗೆ ಸಾಗಿತ್ತು. ಹಬ್ಬದ ಪ್ರಯುಕ್ತ ನಗರದ ಬಹುತೇಕ ಎಲ್ಲ ರಸ್ತೆಗಳು ಬ್ಯುಸಿ. ಟ್ರಾಫಿಕ್‌ ಜಾಮ್‌. ಪೇಟೆಬೀದಿ, ಜೈನರ ಬೀದಿ, ವಿ.ವಿ. ರಸ್ತೆಗಳಲ್ಲಿ ಜನರು ಮತ್ತು ವಾಹನಗಳ ದಟ್ಟಣೆ ಅಕವಾಗಿತ್ತು. ಸಂಜೆಯ ವೇಳೆಗೆ ನಗರವಾಸಿಗಳು ತಮ್ಮ ಮನೆಗಳಿಗೆ ಹಾಗೂ ರೈತರು ಸ್ವಗ್ರಾಮಗಳಿಗೆ ತೆರಳಿದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶ, ಪೇಟೆ ಬೀದಿಯಲ್ಲಿ ಜನಸಂದಣಿ ಸ್ವಲ್ಪ ಕಡಿಮೆಯಾಯಿತು. ನಗರ ಪ್ರದೇಶಗಳಲ್ಲಿ ಖರೀದಿಸಿ ತಂದ ರಾಸುಗಳ ಅಲಂಕಾರಿಕ ವಸ್ತುಗಳಿಂದ ನಗರವೂ ಸೇರಿದಂತೆ ಗ್ರಾಮೀಣ ಭಾಗದ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಸಂಜೆ 5ರ ನಂತರ ಕಿಚ್ಚು ಹಾಯಿಸಿ ಸಂಭ್ರಮಿಸಿದರು.

ಕಿಚ್ಚು ಹಾಯಿಸುವಿಕೆ
ಸುಗ್ಗಿಯ ಹಿಗ್ಗಿನೊಂದಿಗೆ ರಾಸುಗಳಿಗೆ ಕಿಚ್ಚು ಹಾಯಿಸುವುದು ಸಂಕ್ರಾಂತಿ ವಿಶೇಷ. ಹೀಗಾಗಿ ಇದಕ್ಕೂ ಮುನ್ನ ಬೆಳಗ್ಗೆಯಿಂದಲೇ ರಾಸುಗಳನ್ನು ತೊಳೆದು ಸಿಂಗರಿಸುವ ಕಾಯಕದಲ್ಲಿ ರೈತರು ತೊಡಗಿದ್ದರು. ಆಕರ್ಷಕ ಬಣ್ಣಗಳು, ಕಳಸ, ಟೇಪು, ಥರ್ಮಾಕೋಲ್‌, ಹೂವು, ಹಾರ, ನಿಂಬೆಹಣ್ಣು, ಜವನದ ಕಡ್ಡಿಗಳಿಂದ ರಾಸುಗಳನ್ನು ಅಲಂಕರಿಸುತ್ತಿದ್ದರು. ಅನುಕೂಲಸ್ಥ ರೈತರು ತಮ್ಮ ರಾಸುಗಳಿಗೆ ಅಲಂಕಾರಿಕ ಹೊದಿಕೆ(ಗೌಸ) ಹಾಕಿ ಮತ್ತಷ್ಟು ಆಕರ್ಷಣೆ ನೀಡುತ್ತಿದ್ದರು.

ಸಂಜೆ ಎಲ್ಲ ಗ್ರಾಮಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವಿಕೆ ನಡೆಯಿತು. ಕೆಲವೆಡೆ ರಾಸುಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಉತ್ತಮ ರಾಸುಗಳು ಹಾಗೂ ಅವುಗಳ ಅಲಂಕಾರಕ್ಕಾಗಿ ಬಹುಮಾನವನ್ನು ನೀಡಲಾಯಿತು. ಕಿಚ್ಚು ಹಾಯಿಸುವಾಗಿ ಮೊದಲು ಬಂದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಕಿಚ್ಚು ಹಾಯುವ ವೇಳೆ ಕೆಲವೆಡೆ ರಾಸುಗಳು ಹಾಗೂ ವ್ಯಕ್ತಿಗಳಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ.

ಮಂಡ್ಯ: ಹಕ್ಕಿ ಜ್ವರ ಭೀತಿ ನಡುವೆ, ಕೊಟ್ಟಿಗೆಯಲ್ಲಿ 3 ಹಸುಗಳು 2 ಟಗರುಗಳು ಏಕಾಏಕಿ ಸಾವು!

ಶ್ರೀಶಂಕರ ರಮಣ ಪೂಜೆ
ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಮುನ್ನ ತೋಟವೊಂದರಲ್ಲಿ ಶ್ರೀ ಶಂಕರ ರಮಣ ದೇವರನ್ನು ಪೂಜಿಸಲಾಯಿತು. ಈ ಸಂದರ್ಭದಲ್ಲಿ ಕುರಿಯೊಂದರ ಕಿವಿಯನ್ನು ಕೊಯ್ದು ದೇವರಿಗೆ ರಕ್ತತರ್ಪಣೆ ಮಾಡುವ ಮೂಲಕ ಶಾಂತಿ ಮಾಡಲಾಯಿತು. ಕಿಚ್ಚು ಹಾಯಿಸಿದ ನಂತರ ಪ್ರತಿ ಮನೆಗಳಲ್ಲೂ ರಾಸುಗಳನ್ನು ಪೂಜಿಸಲಾಯಿತು.

ಗೋವುಗಳಿಗೆ ಗೋಗ್ರಾಸ
ಮಂಡ್ಯ ತಾಲೂಕು ಪಣಕನಹಳ್ಳಿ ಗ್ರಾಮದಲ್ಲಿ ಶ್ರೀಭೈರವೇಶ್ವರ ದೇವಾಲಯ ಆವರಣದಲ್ಲಿ ಕಿಚ್ಚು ಹಾಯಿಸುವುದಕ್ಕೆ ಮುಂಚಿತವಾಗಿ ಶ್ರೀಭೈರವೇಶ್ವರ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ನೂರಾರು ರಾಸುಗಳಿಗೆ ಸಾಮೂಹಿಕವಾಗಿ ಗೋಗ್ರಾಸ (ಎಳ್ಳು, ಬೆಲ್ಲ, ಕಾಯಿ, ಇಂಡಿ-ಬೂಸಾ, ರವೆ) ನೀಡಲಾಯಿತು. ಆಕರ್ಷಕವಾದ ಜೋಡೆತ್ತುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ರಸ್ತೆಯನ್ನು ರಂಗೋಲಿ ಇಟ್ಟು, ತಳಿರು-ತೋರಣಗಳನ್ನು ಕಟ್ಟಿ ಸಂಗ್ರಹಿಸಲಾಯಿತು.

ಬಸವಗಳನ್ನು ಹಿಡಿದ ಯುವಜನರು
ಜನರು ಹರಕೆ ಮಾಡಿಕೊಂಡು ಬಿಟ್ಟಿರುವ ಬಸವ/ಗೂಳಿಗಳನ್ನು ಯುವಜನರು ಹಿಡಿದು, ಹಬ್ಬದ ಹಿನ್ನೆಲೆಯಲ್ಲಿ ಅವುಗಳನ್ನೂ ಕಿಚ್ಚು ಹಾಯಿಸಿದರು. ಆದರೆ, ಗೂಳಿಗಳನ್ನು ಹಿಡಿಯುವುದೇ ಯುವಜನರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ದೊಡ್ಡ ಕಾಯಕವಾಗಿತ್ತು. ಪೊಗದಸ್ತಾದ, ಆಳೆತ್ತರದ ಈ ಬಸವಗಳನ್ನು ಹಿಡಿಯುವ ಕಾರ‍್ಯದಲ್ಲಿ ಯುವಜನರು ಎರಡು ದಿನಗಳಿಂದಲೇ ಸಂಭ್ರಮದಿಂದ ನಿರತರಾಗಿದ್ದರು. ಗುರುವಾರ ಬೆಳಗ್ಗೆ ಅವುಗಳಿಗೆ ಆರೈಕೆ, ಸಂಜೆ ಅಲಂಕಾರ ಮಾಡಿ ಕಿಚ್ಚು ಹಾಯಿಸಿದರು. ಬಳಿಕ ಮನೆಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ ಬಳಿಕ ಪುನಃ ಅವುಗಳನ್ನು ಬೀದಿಗೆ ಬಿಟ್ಟರು.

ರಾಸುಗಳ ಮೆರವಣಿಗೆ
ಮಂಡ್ಯ ನಗರದ ಹೊಸಹಳ್ಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಜೋಡೆತ್ತುಗಳನ್ನು ಗ್ರಾಮಸ್ಥರು ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಮಂಗಳವಾದ್ಯ ಮತ್ತು ತಮಟೆ ಸದ್ದಿನೊಂದಿಗೆ ಜೋಡೆತ್ತುಗಳು ಹೆಜ್ಜೆ ಹಾಕುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ನೋಡುತ್ತಿದ್ದ ದೃಶ್ಯಗಳು ಕಂಡುಬಂದವು. ಬಳಿಕ ಗೂಳಿಗಳನ್ನೂ ಮೆರವಣಿಗೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ