ಆ್ಯಪ್ನಗರ

ಹುಚ್ಚ ವೆಂಕಟ್‌ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ಎಫ್‌ಐಆರ್, ಮಂಡ್ಯ ಎಸ್‌ಪಿಗೆ ಚಿತ್ರನಟ ಜಗ್ಗೇಶ್‌ ಧನ್ಯವಾದ

ಕಳೆದೊಂದು ವಾರದಿಂದ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ತಿರುಗಾಡುತ್ತಾ ವೆಂಕಟ್ ಹುಚ್ಚಾಟ ಪ್ರದರ್ಶಿಸುತ್ತಿದ್ದರು. ತಮ್ಮ ಪಾಡಿಗೆ ತಾವು ಓಡಾಡಿಕೊಂಡು ಕೆಲವರನ್ನು ನಿಂದಿಸುತ್ತಿದ್ದರು. ಶ್ರೀರಂಗಪಟ್ಟಣ ಮತ್ತು ನಾಗಮಂಗಲದಲ್ಲಿ ಇವರು ನಡೆಸಿದ ಹುಚ್ಚಾಟದ ವರ್ತನೆಯ ವಿಡಿಯೋ ವೈರಲ್ ಆಗಿತ್ತು.

Vijaya Karnataka Web 14 Jun 2020, 12:57 am
ಮಂಡ್ಯ: ನಗರದ ಹೊರವಲಯದ ಉಮ್ಮಡಹಳ್ಳಿ ಗೇಟ್ ನಲ್ಲಿ ಚಿತ್ರನಟ ಹುಚ್ಚ ವೆಂಕಟ್‌ ಮೇಲೆ ನಡೆದಿದ್ದ ಹಲ್ಲೆ ಸಂಬಂಧ ಎಫ್ಐಆರ್ ದಾಖಲಿಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web ಹುಚ್ಚ ವೆಂಕಟ್‌
ಹುಚ್ಚ ವೆಂಕಟ್‌


ಪೊಲೀಸರ ಕ್ರಮವನ್ನು ಸ್ವಾಗತಿಸಿರುವ ಚಿತ್ರ ನಟ ಜಗ್ಗೇಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ತಿರುಗಾಡುತ್ತಾ ವೆಂಕಟ್ ಹುಚ್ಚಾಟ ಪ್ರದರ್ಶಿಸುತ್ತಿದ್ದರು. ತಮ್ಮ ಪಾಡಿಗೆ ತಾವು ಓಡಾಡಿಕೊಂಡು ಕೆಲವರನ್ನು ನಿಂದಿಸುತ್ತಿದ್ದರು. ಶ್ರೀರಂಗಪಟ್ಟಣ ಮತ್ತು ನಾಗಮಂಗಲದಲ್ಲಿ ಇವರು ನಡೆಸಿದ ಹುಚ್ಚಾಟದ ವರ್ತನೆಯ ವಿಡಿಯೋ ವೈರಲ್ ಆಗಿತ್ತು.

ನಾಗಮಂಗಲದಲ್ಲಿ ತಮ್ಮ ಕಾರಿಗೆ ಉಚಿತವಾಗಿ ಪೆಟ್ರೋಲ್ ಹಾಕುವಂತೆ ಬಂಕ್ ಸಿಬ್ಬಂದಿಯನ್ನು ಒತ್ತಾಯಿಸುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಅದೇ ರೀತಿ ಜೂನ್ 10ರಂದು ರಾತ್ರಿ 7 ಸಮಯದಲ್ಲಿ ಮಂಡ್ಯ ನಗರದ ಹೊರವಲಯದ ಉಮ್ಮಡಹಳ್ಳಿ ಗೆಟ್ ನಲ್ಲಿನ ಟೀಸ್ಟಾಲ್ ವೊಂದರಲ್ಲಿ ಹುಚ್ಚ ವೆಂಕಟ್ ಟೀ ಕುಡಿಯುತ್ತಿದ್ದರು.

ಈ ಸಂದರ್ಭದಲ್ಲಿ ಟೀ ಕುಡಿಯುವ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವೆಂಕಟ್‌ರನ್ನು ಯುವಕರ ಗುಂಪೊಂದು ಕಿಚಾಯಿಸಿದೆ. ಈ ವೇಳೆ ಯುವಕನೊಬ್ಬನಿಗೆ ವೆಂಕಟ್‌ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕೆಲವು ಯುವಕರು ನಡುಬೀದಿಯಲ್ಲಿ ಹುಚ್ಚ ವೆಂಕಟ್ ಅವರನ್ನು ಥಳಿಸಿದ್ದರು. ಈ ವಿಡಿಯೋ ಕೂಡ ಒಂದು ದಿನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದರ ಆಧಾರದ ಮೇಲೆ ಮಂಡ್ಯ ಗ್ರಾಮಾಂತರ ಪೊಲೀಸರು ಟೀ ಅಂಗಡಿ ಮಾಲೀಕ ಅಕ್ರಂ ಪಾಷಾ ಅವರಿಂದ ದೂರ ಪಡೆದು ಜೂನ್ 12 ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದ ಅಪರಿಚಿತ ಯುವಕರ ಮೇಲೆ ಐಪಿಸಿ ಸೆಕ್ಷನ್ 143, 147, 149, 323, 504 ಹಾಗೂ 506 ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸುತ್ತಿದ್ದ ವಿಡಿಯೋದಲ್ಲಿ ಸಿಕ್ಕ ಚಹರೆ ಆಧರಿಸಿ ಪ್ರಶಾಂತ್ ಹಾಗೂ ಆತನ ಸ್ನೇಹಿತನನ್ನು ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಎಸ್‌ಪಿಗೆ ಧನ್ಯವಾದ ತಿಳಿಸಿದ ಜಗ್ಗೇಶ್

ಇನ್ನು ಹುಚ್ಚ ವೆಂಕಟ್ ಮೇಲಿನ ಹಲ್ಲೆಗೆ ನಟ ದುನಿಯಾ ವಿಜಯ್‌, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ವೆಂಕಟ್ ಮೇಲೆ ಕೈಮಾಡಿದವರ ಮೇಲೆ ಎಫ್‌ಐಆರ್‌ ದಾಖಲು ಮಾಡಿದ್ದಕ್ಕಾಗಿ ನಟ ಜಗ್ಗೇಶ್ ಅವರು ಮಂಡ್ಯ ಎಸ್‌ಪಿಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ