ಆ್ಯಪ್ನಗರ

ಗಣಿಗಾರಿಕೆ ಮುಕ್ತಗೊಳಿಸಿ ಐತಿಹಾಸಿಕ ಬೇಬಿಬೆಟ್ಟ ಸಂರಕ್ಷಿಸಿ

*ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ *ಬಿಜೆಪಿ ರಾಜ್ಯ ರೈತಮೋರ್ಚ ಅಧ್ಯಕ್ಷ ವಿಜಯಶಂಕರ್‌ ಎಚ್ಚರಿಕೆ ಕೋಟ್‌ ಬೇಬಿಬೆಟ್ಟದ ಕಲ್ಲಿನ ಸೆಲೆ ಕೆಆರ್‌ಎಸ್‌ ...

Vijaya Karnataka 15 Sep 2017, 5:00 am

*ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ

*ಬಿಜೆಪಿ ರಾಜ್ಯ ರೈತಮೋರ್ಚ ಅಧ್ಯಕ್ಷ ವಿಜಯಶಂಕರ್‌ ಎಚ್ಚರಿಕೆ

ಪಾಂಡವಪುರ: ಗಣಿಗಾರಿಕೆಯಿಂದ ಮುಂದೊಂದು ದಿನ ಬೇಬಿಬೆಟ್ಟವೇ ಸಂಪೂರ್ಣ ನಾಶವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ರೈತಮೋರ್ಚ ಅಧ್ಯಕ್ಷ , ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಹೇಳಿದರು.

ತಾಲೂಕಿನ ಬೇಬಿಬೆಟ್ಟದ ಅಮೃತ ಮಹಲ್‌ ಕಾವಲಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಬಿಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಜತೆಗೆ ಬೆಟ್ಟದ ಸುತ್ತಮತ್ತಲಿನ ಅಮೃತಮಹಲ್‌ ಕಾವಲು ಮೈಸೂರು ಮಹಾರಾಜರ ಒಡೆತನಕ್ಕೆ ಸೇರಿದಾಗಿದೆ. ಇಂತಹ ಐತಿಹಾಸಿಕ ಪ್ರದೇಶವನ್ನು ಸಂರಕ್ಷ ಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಸರಕಾರಗಳ ಮೇಲೆ. ಆದರೆ ಇಲ್ಲಿ ಸಾಕಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿದೆ ಎಂದರು.

ನಿತ್ಯ ಸಾವಿರಾರು ಲೂಡ್‌ ಕಲ್ಲು ಬೆಟ್ಟದಿಂದ ಹೊರ ಹೋಗುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ತೆರಿಗೆ ವಂಚನೆಯಾಗುತ್ತಿದೆ. ಬೇಬಿಬೆಟ್ಟದಲ್ಲಿ ಇಷ್ಟೊಂದು ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ನಿಲ್ಲಿಸಲು ಸಾಧ್ಯವಾಗದಿರುವುದನ್ನು ನೋಡಿದರೆ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡದೇ ಇರದು ಎಂದು ಅವರು ಆರೋಪಿಸಿದರು.

ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಸ್ಥಗಿತಗೊಳಿಸಲು ಅಧಿಕಾರಿಗಳು ಮುಂದಾಗಬೇಕು, ಸಕ್ರಮವಾಗಿ ನಡೆಯುತ್ತಿರುವ ಗಣಿಗಳನ್ನು ಸಹ ಬೇಬಿಬೆಟ್ಟ ಉಳಿಸುವ ಉದ್ದೇಶದಿಂದ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬೇಬಿಬೆಟ್ಟದ ಕಲ್ಲುಗಣಿಗಾರಿಕೆ ಸಂಬಂಧ ಸಂಬಂಧಪಟ್ಟ ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಚರ್ಚಿಸುತ್ತೇನೆ. ಒಂದು ವೇಳೆ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.

ಮಠದ ಕಟ್ಟಡ ಬಿರುಕು: ಮಧ್ಯಾಹ್ನ 12ರ ಸುಮಾರಿಗೆ ಕಟ್ಟೇರಿಗೆ ಆಗಮಿಸಿದ ಅವರು, ತಾಲೂಕಿನ ಬಿಜೆಪಿ ಮುಖಂಡರು, ಕಾರ‍್ಯಕರ್ತರ ನೇತೃತ್ವದಲ್ಲಿ ಬೇಬಿಬೆಟ್ಟಕ್ಕೆ ತೆರಳಿದರು. ಮೊದಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಪೂರೈಸುವ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಂತರ ಬೇಬಿಬೆಟ್ಟದ ತಪ್ಪಲಿನಲ್ಲಿರುವ ಶ್ರೀರಾಮಯೋಗಿ ಮಠಕ್ಕೆ ತೆರಳಿ ಪರಿಶೀಲಿಸಿದರು. ಕಲ್ಲುಗಣಿಗಾರಿಕೆಯಿಂದ ಮಠ ಬಿರುಕುಬಿಟ್ಟಿರುವುದು, ನೆಲೆಹಾಸಿಗೆ ದುರಸ್ತಿಗೊಂಡಿರುವುದನ್ನು ವೀಕ್ಷಿಸಿ ನಂತರ ಮಠದ ಆವರಣದಲ್ಲೇ ಸುದ್ದಿಗೋಷ್ಠಿ ನಡೆಸಿದರು. ಬೇಬಿಬೆಟ್ಟದಲ್ಲಿ ನಡೆಯತ್ತಿರುವ ಅಕ್ರಮ ಗಣಿಗಾರಿಕೆ, ಬ್ಲಾಸ್ಟಿಂಗ್‌ನಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಬಿರುಕುಬಿಡುತ್ತಿವೆ, ಕ್ರಷರ್‌ ಧೂಳಿನಿಂದ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ನನ್ನ ಬಳಿ ದೂರು ಹೇಳಿಕೊಂಡ ಹಿನ್ನೆಲೆಯಲ್ಲಿ ನಾನು ಬೇಬಿಬೆಟ್ಟಕ್ಕೆ ಭೇಟಿಕೊಟ್ಟು ವೀಕ್ಷ ಣೆ ಮಾಡಿದ್ದೇನೆ ಎಂದು ಹೇಳದರು.

ಬಿಜೆಪಿ ತಾಲೂಕು ಅಧ್ಯಕ್ಷ ಪ.ಮಾ.ರಮೇಶ್‌, ತಾ.ಪಂ.ಸದಸ್ಯೆ ಮಂಗಳನವೀನ್‌ಕುಮಾರ್‌, ಮುಖಂಡರಾದ ಸಿದ್ದರಾಜು, ಮಂಡಿಬೆಟ್ಟಹಳ್ಳಿ ಮಂಜುನಾಥ್‌, ನವೀನ್‌ಕುಮಾರ್‌, ಶ್ರೀನಿವಾಸ್‌ನಾಯ್ಕ, ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ