ಆ್ಯಪ್ನಗರ

ವಿಕಲಚೇತನ ಆದ್ರೂ ಸಾಮಾಜಿಕ ಕಳಕಳಿಗೇನು ಕಮ್ಮಿ ಇಲ್ಲ, ಸ್ವತಃ ಮಾಸ್ಕ್‌ ಹೊಲಿದು ಉಚಿತ ವಿತರಣೆ

ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನು ನರಕಕ್ಕೆ ದೂಡಿದೆ ಎಂದರೆ ತಪ್ಪಾಗಲ್ಲ. ಆದರೆ, ಕೊರೊನಾ ವೈರಸ್‌ನಿಂದಾಗಿ ನಮ್ಮ ನಡುವೆಯಿದ್ದ ಹಲವು ಸ್ಪೂರ್ತಿದಾಯಕ ಕತೆಗಳು ಬೆಳಕಿಗೆ ಬರುತ್ತಿವೆ. ಪರಿಸ್ಥಿತಿಯ ಲಾಭ ಪಡೆಯಲು ಹಲವರು ಹವಣಿಸುತ್ತಿದ್ದು, ಮಾಸ್ಕ್‌ಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಮಂಡ್ಯದ ವಿಕಲಚೇತನ ಟೈಲರ್‌ ಒಬ್ಬ ಉಚಿತವಾಗಿ ಮಾಸ್ಕ್‌ಗಳನ್ನು ಹೊಲಿದು ವಿತರಿಸುತ್ತಿದ್ದಾರೆ.

Vijaya Karnataka Web 30 Mar 2020, 12:48 pm
ಮಂಡ್ಯ: ಸದ್ಯ ಎಲ್ಲೆಲ್ಲೂ ಕೊರೊನಾದ್ದೇ ಮಾತು, ಸೋಂಕಿನಿಂದ ರಕ್ಷಿಸಿಕೊಳ್ಳಲು ಜನ ಈಗ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಒಂದಿಷ್ಟು ಜನ ಸರಕಾರದ ಸೂಚನೆ ಧಿಕ್ಕರಿಸಿ ಮಾಸ್ಕ್‌ಗಳನ್ನು ದುಪ್ಪಟ್ಟಿಗಿಂತ ದುಪ್ಪಟ್ಟು ಬೆಲೆಯಲ್ಲಿ ಮಾರುತ್ತಿದ್ದಾರೆ. ಆದರೆ, ಇಲ್ಲೊಬ್ಬ ಟೈಲರ್‌, ವಿಕಲಚೇತನ ಆಗಿದ್ರೂ ತಾನೇ ಮಾಸ್ಕ್‌ ಹೊಲಿದು ಗ್ರಾಮೀಣ ಜನತೆಗೆ ಉಚಿತವಾಗಿ ವಿತರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
Vijaya Karnataka Web MANDYA TILOR


ಹೌದು, ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಮಂಜುನಾಥ್‌ ಉಚಿತವಾಗಿ ಮಾಸ್ಕ್‌ ಹೊಲಿದು ಗ್ರಾಮದ ಜನತೆಗೆ ವಿತರಣೆ ಮಾಡುತ್ತಿದ್ದಾರೆ. ಆದರೆ, ಇವರಿಗೆ ಒಂದು ಕಾಲು ಇಲ್ಲ. ಕೃತಕ ಕಾಲು ಜೋಡಣೆ ಮಾಡಲಾಗಿದ್ದು, ಕಳೆದ 12 ವರ್ಷಗಳಿಂದ ಟೈಲರಿಂಗ್‌ ಕೆಲಸ ಮಾಡುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಮಾಸ್ಕ್‌ಗಳ ಅಗತ್ಯವಿದೆ. ಆದರೆ, ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಅಭಾವ ಉಂಟಾಗಿರುವುದನ್ನು ತಿಳಿದ ಟೈಲರ್‌ ಮಂಜುನಾಥ್‌, ಸ್ವತಃ ತಾವೇ ಮಾಸ್ಕ್‌ಗಳನ್ನು ತಯಾರಿಸಿ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ನೀಡಲು ನಿರ್ಧರಿಸಿದರು. ಈ ಮೂಲಕ ಸಮಾಜಕ್ಕೆ ಮಂಜುನಾಥ್‌ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಬಟ್ಟೆಯಿಂದ ಮಾಸ್ಕ್‌ಗಳನ್ನು ಹೊಲಿದು ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಜನತೆಗೆ ಉಚಿತವಾಗಿ ವಿತರಿಸುತ್ತಿದ್ದಾರೆ. ಕೆಲವರು ಮಾಸ್ಕ್‌ಗಳನ್ನು ಉಚಿತವಾಗಿ ಸ್ವೀಕರಿಸದೆ, ಮಂಜುನಾಥ್‌ ಅವರಿಗೆ ಸ್ವಯಂ ಪ್ರೇರಿತರಾಗಿ ಕೈಲಾದಷ್ಟು ಹಣ ನೀಡುತ್ತಿದ್ದಾರೆ. ದೇಶವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಆಗುವವರೆವಿಗೂ ಶಕ್ತಿ ಮೀರಿ ಮಾಸ್ಕ್‌ಗಳನ್ನು ಹೊಲಿದು ವಿತರಿಸುತ್ತೇನೆ ಎನ್ನುತ್ತಾರೆ ವಿಕಲಚೇತನ ಟೈಲರ್ ಮಂಜುನಾಥ್.

ರೈತರಿಗೆ ಲಾಕ್‌ಡೌನ್‌ ಭಯ ಬೇಡ, ತರಕಾರಿ, ಆಹಾರ ಪದಾರ್ಥ ಸಾಗಣೆಗೆ ನಿರ್ಬಂಧ ಇಲ್ಲ: ಮಂಡ್ಯ ಡಿಸಿ

ಕೆ.ಆರ್‌.ಪೇಟೆ ತಾಲೂಕು ಬೊಮ್ಮೇನಹಳ್ಳಿಯ ನಾಗರಾಜೇಗೌಡ ಮತ್ತು ಸಾಕಮ್ಮ ದಂಪತಿಯ ಪುತ್ರ ಮಂಜುನಾಥ್, ಒಂದು ಕಾಲು ಇಲ್ಲದಿದ್ದರೂ ಕೃತಕ ಕಾಲು ಜೋಡಣೆ ಮೂಲಕ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದಾರೆ. 25 ವರ್ಷಗಳ ಹಿಂದೆ ತಂದೆ ಮನೆ ಬಿಟ್ಟು ಹೋಗಿದ್ದರಿಂದ ತಾಯಿ ಸಾಕಮ್ಮ, ಅಜ್ಜಿ ಬೋರಮ್ಮ ಅವರನ್ನು ಸಾಕುವ ಹೊಣೆ ಮಂಜುನಾಥ್‌ ಮೇಲೆ ಬಿದ್ದಿದೆ.

ಮಂಡ್ಯದಲ್ಲಿ 9 ಫೀವರ್ ಕ್ಲಿನಿಕ್‍ ನಿರ್ಮಾಣ, ಕೊರೊನಾ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳಿ: ಜಿಲ್ಲಾಧಿಕಾರಿ

ಜೀವನ ನಿರ್ವಹಣೆಗೂ ಕಷ್ಟ ಇರುವಾಗ ಉಚಿತ ಮಾಸ್ಕ್‌ ಹೊಲಿದು ವಿತರಣೆ ಮಾಡುತ್ತಿರುವ ವಿಕಲಚೇತನ ಟೈಲರ್‌ ಮಂಜುನಾಥ್ ಅವರಿಗೆ ಸಹಾಯ ಮಾಡಲು ಬಯಸುವವರು ಮಂಜುನಾಥ್ ಅವರ ಮೊಬೈಲ್ ಸಂಖ್ಯೆ: 9632361864 ಸಂಪರ್ಕಿಸಬಹುದು. ಅಥವಾ ಮಂಜುನಾಥ್ ಅವರ ಬ್ಯಾಂಕ್‌ ಖಾತೆ ನಂ: 64121129759 ಐಎಫ್ಸಿಕೋಡ್: SBI SBIN0040039 ಕೆ.ಆರ್.ಪೇಟೆ ಶಾಖೆ ಇಲ್ಲಿ ಸಂಪರ್ಕಿಸಬಹುದು.

ಮಂಡ್ಯದಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ, ಮೆಕ್ಕಾದಿಂದ ಬಂದಿದ್ದ ಮಹಿಳೆ ಜಿಲ್ಲಾಸ್ಪತ್ರೆಗೆ ಶಿಫ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ