ಆ್ಯಪ್ನಗರ

ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆಗೆ ಸರಕಾರ ನಿರಾಸಕ್ತಿ: ತಿಮ್ಮಕ್ಕ ಬೇಸರ

'ಹಸಿರೇ ನಮ್ಮ ನಿಮ್ಮ ಉಸಿರು' ಘೋಷಣೆಯೊಂದಿಗೆ ಸಸಿ ನೆಟ್ಟು ನೀರೆರೆಯುವ ಮೂಲಕ ಉಸಿರು ನೀಡುವ ಗಿಡ-ಮರಗಳಿಗೆ ಉಸಿರು ನೀಡುವ ಕಾರ‍್ಯ ಮಾಡಬೇಕೆಂಬ ಸಂದೇಶವನ್ನು ಸಾಲುಮರದ ತಿಮ್ಮಕ್ಕ ಸಾರಿದರು.

Vijaya Karnataka 6 May 2019, 5:00 am
ಮಂಡ್ಯ : 'ಹಸಿರೇ ನಮ್ಮ ನಿಮ್ಮ ಉಸಿರು' ಘೋಷಣೆಯೊಂದಿಗೆ ಸಸಿ ನೆಟ್ಟು ನೀರೆರೆಯುವ ಮೂಲಕ ಉಸಿರು ನೀಡುವ ಗಿಡ-ಮರಗಳಿಗೆ ಉಸಿರು ನೀಡುವ ಕಾರ‍್ಯ ಮಾಡಬೇಕೆಂಬ ಸಂದೇಶವನ್ನು ಸಾಲುಮರದ ತಿಮ್ಮಕ್ಕ ಸಾರಿದರು.
Vijaya Karnataka Web hulikalnalli herige aspatrege sarakara nirasakti timmakka besara
ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆಗೆ ಸರಕಾರ ನಿರಾಸಕ್ತಿ: ತಿಮ್ಮಕ್ಕ ಬೇಸರ


ತಾಲೂಕಿನ ಯಲಿಯೂರು ಗ್ರಾಮದಲ್ಲಿ ಪರಿಸರ ಮಿತ್ರ ಬಳಗ ಆಯೋಜಿಸಿದ್ದ ಸಸಿ ನೆಡುವ ಕಾರ‍್ಯಕ್ರಮದಲ್ಲಿ ಗಿಡ ನೆಟ್ಟು ವೃಕ್ಷೋ ರಕ್ಷತಿ ರಕ್ಷಿತಃ ಮಹತ್ವ ತಿಳಿಸಿದ ಸಾಲು ಮರದ ತಿಮ್ಮಕ್ಕ ಇಳಿವಯಸ್ಸಿನಲ್ಲೂ ಬತ್ತದ ಪರಿಸರ ಪ್ರೇಮ ಇತರರಿಗೆ ಮಾದರಿಯಾಯಿತು. ಇವರೊಂದಿಗೆ ಯಲಿಯೂರಿನ ಗ್ರಾಮಸ್ಥರೂ ಹಾಗೂ ಯುವಕರು ಸೇರಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ ಬದಿಯಲ್ಲಿ 200ಕ್ಕೂ ಹೆಚ್ಚು ನಾನಾ ಬಗೆಯ ಸಸಿಗಳನ್ನು ನೆಟ್ಟರು. ಕಾರ‍್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ನನ್ನ ಮಾತಿಗೆ ಬೆಲೆ ಇಲ್ಲ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ತಿಮ್ಮಕ್ಕ, ''ನಾನು ನನ್ನ ಪತಿ ಇಬ್ಬರೂ ಸೇರಿ ಕಷ್ಟಪಟ್ಟು ಹುಲಿಕಲ್‌ ಬಳಿ ಸುಮಾರು 4 ಕಿ.ಮೀ.ನಷ್ಟು ಪ್ರದೇಶದಲ್ಲಿ ಮರಗಳನ್ನು ಬೆಳೆಸಿದೆವು. 70 ವರ್ಷದ ಮರಗಳು ಇಂದು ಐವರು ತಬ್ಬಿ ಹಿಡಿಯುವಷ್ಟು ವಿಶಾಲವಾಗಿ ಬೆಳೆದಿವೆ. ಆದರೆ ಇಂದು ಆ ಮರಗಳಿಗೆ ಬೆಲೆ ಇಲ್ಲದಂತಾಗಿದೆ. ನನ್ನೂರು ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ನನ್ನ ಕೋರಿಕೆಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ನಾನು ಬೆಳೆಸಿದ ಮರಕ್ಕೂ ಬೆಲೆ ಇಲ್ಲ, ನನ್ನ ಮಾತಿಗೂ ಬೆಲೆ ಇಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.

''ನನ್ನ ಪತಿ ಚಿಕ್ಕಯ್ಯ ಮತ್ತು ನಾನು ಇಬ್ಬರೂ ಸೇರಿ ಕೂಲಿ ಕೆಲಸ ಮಾಡುತ್ತಾ ಬಿಡುವು ಮಾಡಿಕೊಂಡು ಸಸಿಗಳನ್ನು ಬೆಳೆಸಿದೆವು. ಗಡಿಗೆಗಳ ಮೂಲಕ ದೂರದಿಂದ ನೀರು ತಂದು ಸಸಿಗಳಿಗೆ ಎರೆದೆವು. ನಮ್ಮ ಪರಿಶ್ರಮಕ್ಕೆ ಪ್ರತ್ಯುಪಕಾರವಾಗಿ ನಮ್ಮೂರಿನಲ್ಲಿ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡಿ ಎಂದು ಸರಕಾರವನ್ನು ಎಷ್ಟೇ ಒತ್ತಾಯ ಮಾಡಿದರೂ ಪ್ರಯೋಜವಾಗುತ್ತಿಲ್ಲ,'' ಎಂದರು.

''ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವೇಳೆ ರಾಷ್ಟ್ರಪತಿಗಳಿಗೆ ಆಶೀರ್ವಾದ ಮಾಡಿದೆ. ಅವರಂತೆ ಪ್ರತಿಯೊಬ್ಬರಿಗೂ ಆಶೀರ್ವಾದ ಮಾಡುವೆ. ಊರ ಹೊರಗಿನ ಕಾಡುಗಳಲ್ಲಿ ಒಂದೊಂದು ಸಸಿ ನೆಡಿ. ಗುಂಡಿಗಳನ್ನು ತೆಗೆದು ಮಳೆ ನೀರು ನಿಲ್ಲುವಂತೆ ಮಾಡಿ. ಮಳೆ ಚೆನ್ನಾಗಿ ಆದರೆ ಉತ್ತಮ ಬೆಳೆ ಸಿಗಲಿದೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ,'' ಎಂದು ಹೇಳಿದರು.

ಕೃಷಿಕ ಲಯನ್ಸ್‌ ಸಂಸ್ಥೆಯ ಪ್ರಧಾನ ಪೋಷಕ ಕೆ.ಟಿ.ಹನುಮಂತು, ಗುತ್ತಿಗೆದಾರ ಕಾಳೇನಹಳ್ಳಿ ತಿಮ್ಮೇಗೌಡ, ವೈ.ಕೆ.ಕುಮಾರ್‌, ಸತೀಶ್‌, ಅರಣ್ಯ ಇಲಾಖೆ ಅಧಿಕಾರಿಗಳಾದ ಪುಟ್ಟಸ್ವಾಮಿ, ಸುರೇಶ್‌ ಇತರರು ಹಾಜರಿದ್ದರು.

ಪ್ರಸ್ತುತ ದಿನಗಳಲ್ಲಿ ನಗರೀಕರಣದ ಹೆಸರಿಲ್ಲಿ ಅರಣ್ಯ ನಾಶ ಮಾಡುತ್ತಿರುವುದರಿಂದಾಗಿ ಹಳ್ಳಿಗಾಡಿನ ವಾತಾವರಣದಲ್ಲಿರುವ ಗಾಳಿಯಲ್ಲಿ ಶೇ.20ರಷ್ಟು ಮಾತ್ರ ಆಮ್ಲಜನಕವಿದ್ದರೆ, ಬೆಂಗಳೂರಿನಂತಹ ಮಹಾನಗರದಲ್ಲಿ ಶೇ.15ರಷ್ಟು ಮಾತ್ರ ಆಮ್ಲಜನಕ ಉಳಿದುಕೊಂಡಿದೆ. ಈಗಾಗಲೇ ಶುದ್ಧ ನೀರಿಗಾಗಿ ಹಣ ವ್ಯಯಿಸುವ ಪರಿಸ್ಥಿತಿ ಬಂದೊದಗಿರುವಾಗ ಆಮ್ಲಜನಕವನ್ನೂ ಖರೀದಿಸುವ ಕಾಲ ಮುಂದಿನ ದಿನಗಳಲ್ಲಿ ಎದುರಾಗಲಿದೆ. ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ, ಕೆರೆ ಕಟ್ಟೆ ಕಟ್ಟಿಸುವುದು, ಗಿಡ ಮರಗಳನ್ನು ಬೆಳೆಸುವ ರಾಜ-ಮಹಾರಾಜರುಗಳ ಕಲ್ಯಾಣ ಕಾರ‍್ಯಗಳನ್ನು ತಮ್ಮಿಂದಾದಷ್ಟು ಮುಂದುವರೆಸಬೇಕಾಗಿದೆ.

-ಡಾ.ಶಂಕರೇಗೌಡ, ಚರ್ಮರೋಗ ತಜ್ಞ, ಮಂಡ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ