ಆ್ಯಪ್ನಗರ

ಕಾಂಗ್ರೆಸ್‌ ಜತೆ ಮೈತ್ರಿಗಿಂತ ಬಿಜೆಪಿ ಜತೆಗಿನ ಮೈತ್ರಿ ಸರಕಾರವೇ ಚೆನ್ನಾಗಿತ್ತು: ಜೆಡಿಎಸ್‌ ಸಚಿವ ಪುಟ್ಟರಾಜು

ಕೈ ಶಾಸಕರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಸಣ್ಣ ನೀರಾವರಿ ಸಚಿವ ಸಿಎಸ್‌ ಪುಟ್ಟರಾಜು ಕಾಂಗ್ರೆಸ್‌ ನಾಯಕರಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

Vijaya Karnataka Web 29 Jan 2019, 6:57 pm
ಮಂಡ್ಯ: ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ನ ಕಿರಿಕಿರಿಗೆ ನೊಂದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಮಾತನಾಡಿರುವ ಬೆನ್ನಲ್ಲೇ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ನಾಯಕರ ವಿರುದ್ಧದ ಅಸಮಧಾನವನ್ನು ಹೊರ ಹಾಕಿದ್ದಾರೆ.
Vijaya Karnataka Web ಸಿಎಸ್‌ ಪುಟ್ಟರಾಜು
ಸಿಎಸ್‌ ಪುಟ್ಟರಾಜು


ಕಾಂಗ್ರೆಸ್ ಪಕ್ಷದವರು ತಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎನ್ನುವ ಖಡಕ್ ಎಚ್ಚರಿಕೆಯನ್ನೂ ಸಚಿವ ಪುಟ್ಟರಾಜು ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಎಸ್.ಪುಟ್ಟರಾಜು, ಕೆಲವು ಕಾಂಗ್ರೆಸ್ ಶಾಸಕರು ಹದ್ದು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರದಲ್ಲಿ ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ. ಕುಮಾರಸ್ವಾಮಿ ಅವರು ರಾಜೀನಾಮೆ ಮಾತನಾಡಬೇಕೆಂದರೆ ಅವರಿಗೆ ಎಷ್ಟು ನೋವಾಗಿರಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜತೆಗಿನ ಈಗಿನ ಮೈತ್ರಿಯ ಪರಿಸ್ಥಿತಿಯನ್ನು ನೋಡಿದರೆ ಹತ್ತು ವರ್ಷಗಳ ಹಿಂದಿನ ಬಿಜೆಪಿ ಜತೆಗಿನ ಮೈತ್ರಿಯೇ ಚೆನ್ನಾಗಿತ್ತು ಅನಿಸುತ್ತಿದೆ. ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ಸಿಗರು ತಕರಾರು ಮಾಡುತ್ತಿದ್ದಾರೆ. ನಾವು (ಜೆಡಿಎಸ್) ಮೈತ್ರಿ ಧರ್ಮವನ್ನು ಪಾಲಿಸುತ್ತಿದ್ದೇವೆ, ಮುಂದೆಯೂ ಪಾಲಿಸುತ್ತೇವೆ ಎಂದರು.

ಕಾಂಗ್ರೆಸ್ ಬಿಟ್ಟು ಬಿಜೆಪಿಯೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ. ಹಿಂದೆ ಬಿಜೆಪಿಯೊಂದಿಗೆ ನಾವು ಸರಕಾರ ನಡೆಸಿದ್ದೆವು. ಆಗಿನ ನಮ್ಮ ಆಡಳಿತವನ್ನ ಇಡೀ ರಾಜ್ಯ ಮೆಚ್ಚಿತ್ತು. ಕೃಷ್ಣದೇವರಾಯರ ಕಾಲ ಮರುಕಳಿಸಿದೆ ಅನ್ನೋ ರೀತಿಯಲ್ಲಿ ಆಡಳಿತವಿತ್ತು. ಆದರೆ, ಕಾಂಗ್ರೆಸ್ ಶಾಸಕರು ದಿನಾ ಬೆಳಗಾದರೆ ಬೀದೀಲಿ ಮಾತನಾಡುತ್ತಾ ನಿಲ್ಲುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂಪಿಸಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಮಂಡಿಸುವ ಬಜೆಟ್ ಜನರಪರವಾಗಿ, ಜನರ ಮಧ್ಯೆ ನಿಂತು ಕೆಲಸ ಮಾಡುವ ಬಜೆಟ್ ಆಗಿರಲಿದೆ ಎಂದು ಪುಟ್ಟರಾಜು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ