Please enable javascript.ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ - Kannada Rajyotsava at Government College - Vijay Karnataka

ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

Vijaya Karnataka 4 Nov 2017, 5:00 am
Subscribe

ಪ್ರಜ್ಞಾವಂತದಿಂದ ಮತ ಹಾಕಿದರೆ ನಾಡು ಸುಭದ್ರ ವಿಕ ಸುದ್ದಿಲೋಕ ಮಂಡ್ಯ ''ರಾಜಕಾರಣಿಗಳು ಭ್ರಷ್ಟರಾದರೆ ಅವರನ್ನು 5 ವರ್ಷದ ನಂತರ ಮನೆಗೆ ಕಳುಹಿಸಬಹುದು...

kannada rajyotsava at government college
ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

ಪ್ರಜ್ಞಾವಂತದಿಂದ ಮತ ಹಾಕಿದರೆ ನಾಡು ಸುಭದ್ರ

ಮಂಡ್ಯ: ''ರಾಜಕಾರಣಿಗಳು ಭ್ರಷ್ಟರಾದರೆ ಅವರನ್ನು 5 ವರ್ಷದ ನಂತರ ಮನೆಗೆ ಕಳುಹಿಸಬಹುದು. ಆದರೆ, ಪ್ರಜೆಗಳೇ ಭ್ರಷ್ಟರಾದರೆ ಯಾರಿಗೇಳುವುದು'' ಎಂದು ಬೆಂಗಳೂರಿನ ಅತ್ತಿಗುಪ್ಪೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಲ್‌.ಎನ್‌.ಮುಕುಂದರಾಜ್‌ ಪ್ರಶ್ನಿಸಿದರು.

ನಗರದ ಸರಕಾರಿ ಮಹಾವಿದ್ಯಾಲಯದ(ಸ್ವಾಯತ್ತ) ವಿಶ್ವಮಾನವ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಪ್ರಧಾನ ಭಾಷಣ ಮಾಡಿದ ಅವರು, ಯಾವುದೇ ಒಂದು ದೇಶ ಅಧಃಪತದನತ್ತ ಸಾಗುತ್ತಿದೆಯೆಂದರೆ ಅದಕ್ಕೆ ಆ ದೇಶದ ಪ್ರಜೆಗಳು ಕಾರಣವೇ ಹೊರತು ರಾಜಕಾರಣಿಗಳಲ್ಲ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರ ಎನ್ನುವುದು ಇಂದು, ನಿನ್ನೆಯದಲ್ಲ. ನೂರಾರು ವರ್ಷಗಳಿಂದಲೂ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿ ನಮ್ಮ ನಾಡನ್ನು ಕಾಡುತ್ತಿದೆ. ವಚನಾಕಾರರು ತಮ್ಮ ವಚನಗಳಲ್ಲಿ ಆಗಿನ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಿದ್ದರು. ನಾಡಿನ ಪ್ರಜೆಗಳ ಭ್ರಷ್ಟತನದಿಂದ ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಪರಕೀಯರು ದಾಳಿ ಮಾಡುತ್ತಲೇ ಇದ್ದಾರೆ. ಬ್ರಿಟಿಷರು, ಡಚ್ಚರು, ಪೋರ್ಚುಗೀಸರು, ಫ್ರೆಂಚರು ಹೀಗೆ ಹಲವು ಪರಕೀಯರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ನಮ್ಮ ಸಂಪತ್ತನ್ನು ದೋಚಿಕೊಂಡು ಹೋಗಿದ್ದಾರೆ. ಇದಕ್ಕೆ ನಾವೇ ಕಾರಣ'' ಎಂದು ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲೆ ಎಲ್ಲದಕ್ಕೂ ಮೊದಲು. ಕೇವಲ ಸಿನಿಮಾ ಅಷ್ಟೇ ಅಲ್ಲ. ಸಾಹಿತ್ಯ, ಜಾನಪದಕ್ಕೂ ಅಗ್ರಜ ಸ್ಥಾನವಿದೆ. ನವೋದಯ ಸಾಹಿತ್ಯ ಉದಯವಾಗಿದ್ದೇ ಮಂಡ್ಯದಲ್ಲಿ. ನಾಗಮಂಗಲದ ಬೆಳ್ಳೂರಿನ ಬಿ.ಎಂ.ಶ್ರೀಕಂಠಯ್ಯನವರು ನವೋದಯ ಸಾಹಿತ್ಯವನ್ನು ಪರಿಚಯಿಸಿದ ಆಧುನಿಕ ವಿದ್ವಾಂಸ. ಇಂತಹ ಕವಿ ಹುಟ್ಟದಿದ್ದರೆ ಕುವೆಂಪು ಅವರಂತಹವರು ತಮ್ಮ ಕಾವ್ಯದ ಝರಿಯನ್ನು ಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಬಿ.ಎಂ.ಶ್ರೀಯವರು ಕುವೆಂಪುರವರಿಗೆ ಗುರುಗಳಾಗಿದ್ದರು. ನವೋದಯ ಸಾಹಿತ್ಯವನ್ನು ಹೇಗೆ ಕಾವ್ಯದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಹೇಳಿಕೊಟ್ಟರು. ಹೀಗಾಗಿ ಕುವೆಂಪು ತಮ್ಮ ಎಲ್ಲ ಸಾಹಿತ್ಯ ಕೃಷಿಯಲ್ಲೂ ನವೋದಯ ಸಾಹಿತ್ಯವನ್ನು ಅಳವಡಿಸಿಕೊಂಡರು. ಜಾನಪದ ಸಾಹಿತ್ಯದ ಮುಂಗೋಳಿ ಕೂಗಿದ್ದೂ ಕೂಡ ಮಂಡ್ಯ ಜಿಲ್ಲೆಯಲ್ಲೇ. ಡಾ.ಜೀಶಂಪ. ಡಾ.ಎಚ್‌.ಎಲ್‌.ನಾಗೇಗೌಡ ಇವರಿಗೂ ಹಿಂದೆ ಕೆ.ಆರ್‌.ಪೇಟೆಯ ಹೇಮಗಿರಿಯ ಅರ್ಚಕರ ರಂಗಸ್ವಾಮಿಯವರು ತಮ್ಮ 'ಹಳ್ಳಿಯ ಹಾಡು' ಎಂಬ ಜಾನಪದ ಸಾಹಿತ್ಯ ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕರ್ನಾಟಕದ ಯಾವ ಭಾಗದಲ್ಲೂ ಇರದಷ್ಟು ಜಾನಪದ ಸಂಪತ್ತು ಮಂಡ್ಯ ಜಿಲ್ಲೆಯೊಳಗಿದೆ. ನಾಗಮಂಗಲ ಮತ್ತು ಮವಳ್ಳಿಯಲ್ಲಿ ಜಾನಪದ ಭಂಡಾರವೇ ಅಡಗಿದೆ. ಮಳವಳ್ಳಿಯ ನೀಲಗಾರರು ಆಡುವ ಮಂಟೇಸ್ವಾಮಿ, ಮಲೆಮಹದೇಶ್ವರ, ನಂಜುಂಡೇಶ್ವನ ಕಾವ್ಯಗಳು ಅತ್ಯಂತ ಶ್ರೇಷ್ಠವಾದವು. ಅನಕ್ಷರಸ್ಥರಾದರೂ, ಕೂಲಿ ಮಾಡಿಕೊಂಡು ಬದುಕುವ ಜನಪದರು ಇಂದಿಗೂ ಹನ್ನೊಂದು ರಾತ್ರಿ, ಹನ್ನೊಂದು ಹಗಲು ಜಾನಪದ ಮಹಾಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ ಎಂದು ಶ್ಲಾಘಿಸಿದರು.

ಕನ್ನಡದ ಮೊದಲ ನಾಟಕ ಮಿತ್ರಾಗೋವಿಂದ ನಾಟಕವನ್ನು ಶ್ರೀರಂಗಪಟ್ಟಣದ ಅಳಸಿಂಗ ಅಯ್ಯರ್‌ ರಚಿಸಿದರು. ಇಂತಹ ಹಲವು ಮೊದಲುಗಳಿಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು. ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್‌(ಜನ್ನಿ) ಅವರು ಕಾರ‍್ಯಕ್ರಮ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್‌, ಪ್ರಾಂಶುಪಾಲ ಪ್ರೊ.ಶಿವನಂಜೇಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಎನ್‌.ಎಸ್‌.ಶಂಕರೇಗೌಡ, ಹೈಕೋರ್ಟ್‌ ವಕೀಲ ಗಜೇಂದ್ರ ಇತರರು ಭಾಗವಹಿಸಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ