ಆ್ಯಪ್ನಗರ

ಮದ್ದೂರು: ದನಗಳ ಜಾತ್ರೆಗೆ ಚಾಲನೆ

ತಾಲೂಕು ಆಡಳಿತದಿಂದ ಅಗತ್ಯ ಸಿದ್ಧತೆ | ಕಳೆಗುಂದುತ್ತಿರುವ ಜಾತ್ರೆ ಶಿವನಂಜಯ್ಯ ಮದ್ದೂರು ಏ...

Vijaya Karnataka 24 Apr 2019, 5:00 am
ತಾಲೂಕು ಆಡಳಿತದಿಂದ ಅಗತ್ಯ ಸಿದ್ಧತೆ | ಕಳೆಗುಂದುತ್ತಿರುವ ಜಾತ್ರೆ
Vijaya Karnataka Web maddur cattle fair begins
ಮದ್ದೂರು: ದನಗಳ ಜಾತ್ರೆಗೆ ಚಾಲನೆ

ಶಿವನಂಜಯ್ಯ ಮದ್ದೂರು
ಏ.20ರಿಂದ ದನಗಳ ಜಾತ್ರೆ ಆರಂಭ ಸಂಬಂಧ ಪ್ರಕಟಣೆ ಹೊರಡಿಸಿದ್ದ ತಾಲೂಕು ಆಡಳಿತ ಜಾತ್ರೆಗಾಗಿ ಇತರೆ ಇಲಾಖೆಗಳ ಸಹಯೋಗದೊಡನೆ ಪೂರ್ವ ಸಿದ್ಧತೆ ಕೈಗೊಂಡಿದೆ. ತಾಲೂಕು ಆಡಳಿತ ಕುಡಿಯುವ ನೀರು, ಆಂತರಿಕ ಭದ್ರತೆಗೆ ಕ್ರಮವಹಿಸುವುದು, ಸ್ಥಳೀಯ ಪುರಸಭೆ ಶುಚಿತ್ವಕ್ಕೆ ಜತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪಟ್ಟಣದೆಲ್ಲೆಡೆ ಸ್ವಚ್ಛತೆ ಹಾಗೂ ಬ್ಲೀಚಿಂಗ್‌ ಸಿಂಪಡಿಸುವ ಮೂಲಕ ಮುಂಜಾಗ್ರತಾ ಕ್ರಮ ವಹಿಸಿದೆ.

ದನಗಳ ಜಾತ್ರೆ ಅಂಗವಾಗಿ ತಾಲೂಕು ಆಡಳಿತದ ನಿರ್ದೇಶನದ ಮೇರೆಗೆ ಸ್ಥಳೀಯ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ಸಂಚಾರ ಪಶು ಚಿಕಿತ್ಸಾ ಘಟಕ ವ್ಯವಸ್ಥೆಗೊಳಿಸಿದ್ದು ಜಾತ್ರೆಯಲ್ಲಿ ಸೇರುವ ಉತ್ತಮ ರಾಸುಗಳಿಗೆ ತಾಲೂಕು ಎಪಿಎಂಸಿ ಆಡಳಿತ ಮಂಡಳಿ ಆಕರ್ಷಕ ಬಹುಮಾನದ ವ್ಯವಸ್ಥೆ ಕಲ್ಪಿಸಿದೆ. ಮುಂಗಾರು ಮಳೆ ಆರಂಭಕ್ಕೆ ಮುನ್ನ ಕೃಷಿ ಚಟುವಟಿಕೆಗಳ ಸಂಬಂಧ ರಾಜ್ಯದಲ್ಲಿಯೇ ವರ್ಷದ ಪ್ರಥಮ ದನಗಳ ಜಾತ್ರೆಯಾದ ಮದ್ದೂರು ಜಾತ್ರೆಯು ಹಿಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಈಗಾಗಲೇ ಮದ್ದೂರು ಪಟ್ಟಣದ ನಾನಾ ಬಡಾವಣೆಗಳ ಖಾಲಿ ನಿವೇಶನಗಳು, ರಸ್ತೆ ಇಕ್ಕೆಲಗಳು ಸೇರಿದಂತೆ ಮದ್ದೂರು-ಮಳವಳ್ಳಿ, ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯ ಸ್ಥಳ ಗುರುತಿಸುವಲ್ಲಿ ಮುಂದಾಗಿದ್ದಾರೆ. ಹಳೇ ಎಂ.ಸಿ. ರಸ್ತೆಯ ಪ್ರವಾಸಿ ಮಂದಿರ ವೃತ್ತದಿಂದ ಲೀಲಾವತಿ ಬಡಾವಣೆ ಪುರಸಭೆಯ ಪಾರ್ಕ್‌ ವರೆವಿಗೂ ರಸ್ತೆ ಎರಡೂ ಬದಿಯಲ್ಲಿ ಜಾನುವಾರು ಮಾಲೀಕರು ಆಕರ್ಷಕ ಹಾಗೂ ವೈಭವದ ಟೆಂಟ್‌ಗಳನ್ನು ನಿರ್ಮಿಸಿ ಹೈಟೆಕ್‌ ಕೊಟ್ಟಿಗೆಗಳ ಮೂಲಕ ಜನಾಕರ್ಷಣೆಗೆ ಮುಂದಾಗಿದ್ದಾರೆ.

ಪ್ರಗತಿಪರ ಕೃಷಿಕ ಗೋಪಾಲಕರು ತಮ್ಮ ಜಾನುವಾರುಗಳಿಗೆ ನಿರ್ಮಿಸಿರುವ ಹೈಟೆಕ್‌ ಟೆಂಟ್‌ಗಳಿಗೆ ದೀಪಾಲಂಕಾರ, ಧ್ವನಿವರ್ದಕ ಅಳವಡಿಸಿ ತಮ್ಮ ಜಾನುವಾರುಗಳನ್ನು ಮೆರವಣಿಗೆ ಮೂಲಕ ಕೊಟ್ಟಿಗೆಗೆ ಕರೆತರುವ ಸಂಬಂಧ ಪೂರ್ವಸಿದ್ಧತೆ ಕೈಗೊಂಡಿದ್ದಾರೆ.

ಕಳೆಗುಂದುತ್ತಿರುವ ಜಾತ್ರೆ: ಇತ್ತೀಚಿನ ವರ್ಷಗಳಲ್ಲಿ ದನಗಳ ಜಾತ್ರೆ ದಿನಕಳೆದಂತೆ ಕಳೆಗುಂದುತ್ತಿದೆ. ಕ್ಷೀಣಿಸುತ್ತಿರುವ ಹಳ್ಳಿಕಾರ್‌ ಜಾತಿಯ ದನಗಳು ಕೃಷಿ ಕಾರ್ಯಗಳಿಗೆ ಯಂತ್ರಗಳ ಬಳಕೆ ಸೇರಿದಂತೆ ದನಗಳ ಸಾಕಣೆ ದುಬಾರಿಯಾಗುತ್ತಿರುವುದರ ಜತೆಗೆ ಇಂದಿನ ಯುವ ಪೀಳಿಗೆ ನಿರಾಶಕ್ತಿ ಹೊಂದುತ್ತಿರುವುದು ಪ್ರಮುಖ ಕಾರಣವಾಗಿದೆ. ಮದ್ದೂರು ಪಟ್ಟಣ ಅಭಿವೃದ್ಧಿ ಹೊಂದಿದಂತೆ ಸ್ಥಳದ ಕೊರತೆ ಜತೆಗೆ ರಸ್ತೆ ಅಗಲೀಕರಣದಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಥಳವಿಲ್ಲದಂತಾಗಿರುವುದು ಹಾಗೂ ಇಲ್ಲಿದ್ದ ಮರಗಳು ಧರೆಗುರುಳಿ ನೆರಳು ಮಾಯವಾಗಿರುವುದು ಜಾತ್ರೆಗೆಂದು ಬರುವ ಜಾನುವಾರುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿದೆ.

ತಾಲೂಕು ಆಡಳಿತ ವೈಫಲ್ಯ: ದನಗಳ ಜಾತ್ರೆ ಸಂಬಂಧ ನಾನಾ ಬಾಬ್ತುಗಳ ಮೇಲೆ ಸುಂಕ ಹರಾಜು ಮಾಡಿ ಕೈತೊಳೆದುಕೊಳ್ಳುವ ತಾಲೂಕು ಆಡಳಿತ ಮುಂದಿನ ದಿನಗಳಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರೆಯು ಮುಂದಿನ ತಲೆಮಾರಿಗೂ ಮುಂದುವರಿಯಲು ಆಗುವ ಸಿದ್ಧತೆಗಳ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ನಿಗದಿತ ಅವಧಿಗೆ ಜಾನುವಾರು ಜಾತ್ರೆಗೆ ಬರುವಂತೆ ಅಗತ್ಯ ಪ್ರಚಾರ ನೀಡಿ ಈ ವೇಳೆ ಅಗತ್ಯವಿರುವ ನೀರು-ನೆರಳಿನ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಕ್ರಮ ವಹಿಸಬೇಕಿದೆ.

ಪ್ರತಿ ವರ್ಷ ನಡೆಯುವ ಮದ್ದೂರಮ್ಮ ದನಗಳ ಜಾತ್ರೆಗೆ ತಾಲೂಕು ಆಡಳಿತ ಅಗತ್ಯ ಸಿದ್ಧತೆ ಕಲ್ಪಿಸಬೇಕಾಗಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಜಾತ್ರೆ ನಡೆಯುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ಜತೆಗೆ ಉತ್ತಮ ರಾಸುಗಳನ್ನು ಖರೀದಿಸಲು ಸಹಕಾರಿಯಾಗಿದೆ.
- ಸಿ.ಪಿ.ಚಂದನ್‌ ಎಚ್‌.ಕೆ.ವಿ.ನಗರ ನಿವಾಸಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿ ಮದ್ದೂರಮ್ಮ ದನಗಳ ಜಾತ್ರೆ ಆರಂಭಗೊಂಡಿದೆ. ಈಗಾಗಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಜತೆಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕು ಆಡಳಿತ ಹೆಚ್ಚಿನ ಗಮನಹರಿಸಿದೆ.
-ಬಿ.ಗೀತಾ ತಹಸೀಲ್ದಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ