ಆ್ಯಪ್ನಗರ

ಅಂಬರೀಷ್‌ರಿಂದ ಲಾಭ ಪಡೆದವರಿಂದಲೇ ಕುತಂತ್ರ

ವಿಕ ಸುದ್ದಿಲೋಕ ಕೆಆರ್‌...

Vijaya Karnataka 28 Mar 2019, 5:00 am
ಕೆ.ಆರ್‌.ಪೇಟೆ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಚಲನ ಸೃಷ್ಟಿಸಿರುವ ಸುಮಲತಾ ಅಂಬರೀಷ್‌ ಬುಧವಾರ ತಾಲೂಕಿನಲ್ಲಿ 2ನೇ ಹಂತದ ಚುನಾವಣಾ ಪ್ರಚಾರ ಕೈಗೊಂಡರು.
Vijaya Karnataka Web mandya lok sabha polls sumalatha ambareesh campaign
ಅಂಬರೀಷ್‌ರಿಂದ ಲಾಭ ಪಡೆದವರಿಂದಲೇ ಕುತಂತ್ರ


ತಾಲೂಕಿನ ಗಡಿ ಗ್ರಾಮವಾದ ಮೈಸೂರು ರಸ್ತೆಯ ಚೀಕನಹಳ್ಳಿ ಕೊಪ್ಪಲು-ವೆಂಕಟರಾಜಪುರದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಸಭೆ ಆರಂಭಿಸಿದರು. ನಂತರ ನೇರವಾಗಿ ಐಚನಹಳ್ಳಿಗೆ ಆಗಮಿಸಿ ಮತದಾರರನ್ನು ಭೇಟಿ ಮಾಡಿದರು. ಐಚನಹಳ್ಳಿ ಅಂಬರೀಷ್‌ ಭಾವ ಖ್ಯಾತ ಮಕ್ಕಳ ತಜ್ಞರಾಗಿದ್ದ ಅಂಕೇಗೌಡ ಅವರ ಸ್ವಗ್ರಾಮ. ಇಲ್ಲಿನ ಒಡನಾಟ ಅಂಬರೀಷ್‌ ಅವರಿಗೆ ಹೆಚ್ಚಾಗಿತ್ತು ಎಂದು ಸ್ಮರಿಸಿದರು.

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಸುಮಲತಾ ಚುನಾವಣಾ ಪ್ರಚಾರಕ್ಕೆ ಸಾಥ್‌ ನೀಡಿದರು. ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್‌.ಯಡಿಯೂರಪ್ಪ ಸ್ವಗ್ರಾಮ ಬೂಕನಕೆರೆಗೆ ಆಗಮಿಸಿ ಗ್ರಾಮ ದೇವತೆ ಗೋಗಾಲಮ್ಮನಿಗೆ ಪೂಜೆ ಸಲ್ಲಿಸಿ ರೈತಸಂಘ ಹಾಗೂ ಬಿಜೆಪಿ ಮುಖಂಡರೊಂದಿಗೆ ಪ್ರಚಾರ ವಾಹನ ಏರಿ ಪ್ರಚಾರ ಭಾಷಣ ಮಾಡಿದರು.

ಕಾಂಗ್ರೆಸ್‌ ಮುಖಂಡರು ಹಾಗೂ ಕೆಪಿಸಿಸಿ ಪದಾಧಿಕಾರಿಗಳಾರೂ ಚುನಾವಣಾ ಪ್ರಚಾರ ವಾಹನದಲ್ಲಿರಲಿಲ್ಲ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರ್ವಮಂಗಳಾ, ಮುಖಂಡ ಬಿ.ಟಿ.ವೆಂಕಟೇಶ್‌, ಮಹಿಳಾ ಘಟಕದ ಅಧ್ಯಕ್ಷ ರಾದ ಆದಿಹಳ್ಳಿ ಮೀನಾಕ್ಷಿ, ವಿಜಯಲಕ್ಷ್ಮಿ ರಾಜಶೇಖರ್‌ ಪ್ರಚಾರದ ಸಮಯದಲ್ಲಿ ಸುಮಲತಾ ಜತೆ ಕಾಣಿಸಿಕೊಂಡಿದ್ದರು.

ಈ ವೇಳೆ ಮಾತನಾಡಿದ ಸುಮಲತಾ, ಜಿಲ್ಲೆಯಲ್ಲಿ ಸುಮಲತಾ ಅಂಬರೀಷ್‌ ಮೇನಿಯಾ ಕಾಣುತ್ತಿದೆ. ಸುಮಲತಾ ಎನ್ನುವ ಹೆಸರೇ ಕೆಲವರಿಗೆ ಭಯವಾಗಿ ಕಾಡುತ್ತಿದೆ. ಹೀಗಾಗಿಯೇ ಚುನಾವಣೆಯಲ್ಲಿ ನನ್ನದೇ ಹೆಸರಿನ 3 ಮಂದಿ ಜೆಡಿಎಸ್‌ ಕಾರ್ಯಕರ್ತರ ಪತ್ನಿಯರಿಂದ ನಾಮಪತ್ರ ಸಲ್ಲಿಸಲಾಗಿದೆ. ಇದಕ್ಕೆ ನ್ನನದೇನು ಅಭ್ಯಂತರವಿಲ್ಲ. 3 ಜನ ಏಕೆ 100 ಜನರನ್ನು ಚುನಾವಣೆ ಕಣಕ್ಕಿಳಿಸಿದರೂ ಮಂಡ್ಯದ ಜನರಿಗೆ ನಿಜವಾದ ಸುಮಲತಾ ಯಾರು? ಎಂದು ಗೊತ್ತಿದೆ. ಬೇಕಿದ್ದರೆ ಮೈತ್ರಿ ಪಕ್ಷದ ಅಭ್ಯರ್ಥಿ ಹೆಸರನ್ನೂ ಸುಮಲತಾ ಎಂದೇ ಬದಲಿಸಿಕೊಳ್ಳಲಿ. ನನಗೇನು ಬೇಸರವಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯದ 27 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದರೂ ಅಂಬರೀಷ್‌ ಮೇಲಿನ ಗೌರವದಿಂದ ಮಂಡ್ಯದಲ್ಲಿ ಅಭ್ಯರ್ಥಿಯನ್ನು ಹಾಕದೇ ಬೇಷರತ್‌ ಬೆಂಬಲ ನೀಡಿದೆ. ಆದರೆ ಅಂಬರೀಷ್‌ ಸಹಾಯವನ್ನು ಪಡೆದ ಪಕ್ಷ ಗಳು ಅದೇ ಅಂಬರೀಷ್‌ ಅವರ ಕುಟುಂಬದ ವಿರುದ್ಧವೇ ಚುನಾವಣೆಯಲ್ಲಿ ಗೆಲ್ಲಲು ಕುತಂತ್ರ ನಡೆಸಿವೆ. ಇದು ವಿಪರ್ಯಾಸ. ಮಂಡ್ಯ ಜಿಲ್ಲೆಯ ರೈತರ ಸ್ವಾಭಿಮಾನದ ಪ್ರತೀಕವಾಗಿ ಕೆಲಸ ಮಾಡುತ್ತಿರುವ ರೈತಸಂಘ ಕೂಡಾ ನನ್ನನ್ನು ಬೆಂಬಲಿಸಿದೆ. ಜಿಲ್ಲೆಯ ಮಹಿಳಾ ನಾಯಕಿ ಸುನಿತಾ ಪುಟ್ಟಣ್ಣಯ್ಯ ಅವರ ಸಹೋದರಿಯಂತೆ ಇದ್ದು ರೈತ ಸಂಘದ ಗೌರವವನ್ನು ಕಾಪಾಡುತ್ತೇನೆ. ರೈತರ ದ್ವನಿಯಂತೆ ಕೆಲಸ ಮಾಡುತ್ತೇನೆ ಎಂದರು.

ಮಂಡ್ಯದ ಅಭಿವೃದ್ಧಿಗಾಗಿ ನನ್ನ ಮಗನಿಗೆ ಮತ ಹಾಕಿ ಎಂದು ಕೇಳುತ್ತಿದ್ದೀರಾ, ನಿಮ್ಮ ಮಗ ಸೋತರೆ ಮಂಡ್ಯದ ಅಭಿವೃದ್ಧಿ ಬೇಡವೆ? ನಿಮ್ಮದು ಚುನಾವಣೆ ರಾಜಕಾರಣ. ಆದರೆ ಅಂಬರೀಷ್‌ ಅವರು ನಮ್ಮತೆ ಅಲ್ಲ. ನೇರವಾದ ನಡೆ ನುಡಿಯಿತ್ತು. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡುತ್ತಿದ್ದರು. ಅದ್ಕಕೆ ಅವರಿಗೆ ಕಲಿಯುಗ ಕರ್ಣ ಎಂದು ಜನರು ಕರೆದರು. ಸರಕಾರದ ಹಣವನ್ನು ಮಂಜೂರು ಮಾಡಿ ನಾನು ಕೊಟ್ಟಿದ್ದೇನೆ ಎಂದು ಹೇಳುತ್ತಿರುವುದು ಸರಿಯೆ? ನೀವು ನಿಜವಾಗಲೂ ಅಂಬರೀಷ್‌ ಸ್ನೇಹಿತರೆ? ಎಂದು ಪ್ರಶ್ನಿಸಿದರು.

ಇಡೀ ದಿನ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಸುಮಲತಾ ಭೇಟಿ ನೀಡಿ ಮತಯಾಚನೆ ನಡೆಸಿದರು. ಸುಮಲತಾ ಅಂಬರೀಷ್‌ ಜತೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಮೀಳಾ ವರದರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾಂಗ್ರೆಸ್‌ನ ಸರ್ವಮಂಗಳಾ, ಮುಖಂಡ ಬಿ.ಟಿ.ವೆಂಕಟೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ