ಆ್ಯಪ್ನಗರ

ನಿಷೇಧಾಜ್ಞೆ ನಡುವೆಯೂ ನಡೆಯುತ್ತಿರುವ ಗಣಿಗಾರಿಕೆ

ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಮೂಲಕ ತಹಸೀಲ್ದಾರ್‌ ಆದೇಶವನ್ನು ಗಣಿ ಮಾಲೀಕರು ಗಾಳಿಗೆ ತೂರಿದ್ದಾರೆ.

Vijaya Karnataka 19 Jul 2019, 5:00 am
Vijaya Karnataka Web MDY-MDY18N12
ಮಂಡ್ಯ : ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಮೂಲಕ ತಹಸೀಲ್ದಾರ್‌ ಆದೇಶವನ್ನು ಗಣಿ ಮಾಲೀಕರು ಗಾಳಿಗೆ ತೂರಿದ್ದಾರೆ.

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಉಭಯ ತಾಲೂಕುಗಳ ತಹಸೀಲ್ದಾರರು ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಮಂಡ್ಯ ತಹಸೀಲ್ದಾರರು ಅನಿರ್ದಿಷ್ಟ ಕಾಲಾವಧಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರೆ, ಶ್ರೀರಂಗಪಟ್ಟಣ ತಹಸೀಲ್ದಾರರು 15 ದಿನ ಅಥವಾ ತಿಂಗಳ ಅವಧಿವರೆಗೆ ನಿಷೇಧಾಜ್ಞೆ ಜಾರಿ ಮುಂದುವರೆಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬೋರ್‌ ಕುಳಿ ಮೂಲಕ ಕದ್ದುಮುಚ್ಚಿ ಮಧ್ಯರಾತ್ರಿಯಲ್ಲಿ ಬ್ಲಾಸ್ಟ್‌ ಮಾಡಲಾಗುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ನಡೆಯತ್ತಿರುವುದು ಒಂದೆಡೆಯಾದರೆ, ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿರುವ ಕೆಲ ಕ್ರಷರ್‌ಗಳನ್ನೂ ಕೂಡ ಕದ್ದುಮುಚ್ಚಿ ಚಾಲನೆ ಮಾಡಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗಣಿಗಾರಿಕೆ ಮತ್ತು ಕ್ರಷರ್‌ಗಳಿಂದ ಏಳುವ ಧೂಳಿನಿಂದ ತರಕಾರಿ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಕಲ್ಲು ತೆಗೆಯಲು ಸಿಡಿಮದ್ದು ಬಳಸಿ ಬ್ಲಾಸ್ಟ್‌ ಮಾಡುವುದರಿಂದ ಮನೆ ಗೋಡೆಗಳ ಬಿರುಕು ಬಿಡುತ್ತಿವೆ. ಹಾಗಾಗಿ ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಗಣಿಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗಣಿಗಾರಿಕೆ ಪ್ರದೇಶದಲ್ಲಿ ಲಾರಿಗಳ ಓಡಾಟ : ರಾಗಿಮುದ್ದನಹಳ್ಳಿ ಹೊರವಲಯದ ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬುಧವಾರವೂ(ಜು.17) ಓಡಾಡುತ್ತಿರುವುದನ್ನು ಅಕ್ಕಪಕ್ಕದ ನಿವಾಸಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ನೀಡಿದ್ದಾರೆ. ಇದರಿಂದ ನಿಷೇಧದ ನಡುವೆಯೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಸಾಬೀತಾಗಿದೆ.

ನಿಷೇಧಾಜ್ಞೆ ನಡುವೆಯೂ ರಾಗಿಮುದ್ದನಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ. ಇದು ನಿಷೇಧಾಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ತಹಸೀಲ್ದಾರ್‌ ಆದೇಶಕ್ಕೆ ಕಿಮ್ಮತ್ತೇ ಇಲ್ಲದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
-ತೇಜಸ್‌ಕುಮಾರ್‌, ಗ್ರಾಮಸ್ಥ, ಕೋಡಿಶೆಟ್ಟಿಪುರ

ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ತಾವು ಅಪರ ಪೊಲೀಸ್‌ ವರಿಷ್ಠಾಧಿಕಾರಿ ಬಲರಾಮೇಗೌಡ ಅವರೊಂದಿಗೆ ಚರ್ಚಿಸಿದ್ದೇನೆ. ಪೊಲೀಸರು ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
-ಎಲ್‌.ನಾಗೇಶ್‌, ತಹಸೀಲ್ದಾರ್‌, ಮಂಡ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ