ಆ್ಯಪ್ನಗರ

ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ವಿಕ ಸುದ್ದಿಲೋಕ ಕೆಆರ್‌...

Vijaya Karnataka Web 24 Mar 2018, 5:00 am
ಕೆ.ಆರ್‌.ಪೇಟೆ: ಪುರಸಭೆ ವ್ಯಾಪ್ತಿಯ ಹೊಸಹೊಳಲು ಪಟ್ಟಣಕ್ಕೆ ಕಳೆದ 15ದಿನಗಳಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಬಂದ್‌ ಆಗಿದ್ದು ಇದರಿಂದ ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ತಕ್ಷ ಣ ಸಮರ್ಪಕ ನೀರು ಪೂರೈಸಲು ಕ್ರಮವಹಿಸಬೇಕೆಂದು ಒತ್ತಾಯಿಸಿ 6 ಮಂದಿ ಪುರಸಭೆ ಸದಸ್ಯರು ಸಾರ್ವಜನಿಕರೊಂದಿಗೆ ಪಟ್ಟಣದ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Vijaya Karnataka Web protest against the municipal office for water supply
ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ


ಪುರಸಭೆ ಸದಸ್ಯರಾದ ಎಚ್‌.ಕೆ.ಅಶೋಕ್‌, ಆಟೋ ಕುಮಾರ್‌, ನಂಜುಂಡಯ್ಯ, ಎಚ್‌.ಎನ್‌.ಪ್ರವೀಣ್‌, ರೂಪಾ ಪ್ರಕಾಶ್‌, ಅನುಸೂಯ, ರಾಜು ನೇತೃತ್ವದಲ್ಲಿ ಜಮಾಯಿಸಿದ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ಮೂರ್ತಿ ಹಾಗೂ ಆಡಳಿತಾಧಿಕಾರಿ ಎಸಿ ಯಶೋಧ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೊಸಹೊಳಲು ಪಟ್ಟಣಕ್ಕೆ ಕಳೆದ 15 ದಿನದಿಂದ ನೀರು ಪೂರೈಕೆ ಮಾಡಿಲ್ಲ. ಯುಗಾದಿ ಹಬ್ಬದಂದು ಕೂಡ ಜನರು ನೀರಿಗಾಗಿ ಪರದಾಡುವಂತಾಗಿತ್ತು. ಯುಗಾದಿ ಹಬ್ಬಕ್ಕೂ ಅಧಿಕಾರಿಗಳು ನೀರು ಪೂರೈಕೆಗೆ ಕ್ರಮ ವಹಿಸಿರಲಿಲ್ಲ. ನೀರಿಲ್ಲದ ಕಾರಣ ಖಾಸಗಿ ವ್ಯಕ್ತಿಗಳ ಬಳಿ ಒಂದು ಟ್ಯಾಂಕರ್‌ಗೆ 500 ರೂ. ಹಣ ಕೊಟ್ಟು ನೀರು ಖರೀದಿಸಲಾಗುತ್ತಿದೆ. ಅವರು ನೀಡುವ ನೀರು ಶುದ್ಧವಿಲ್ಲದರಿಂದ ಅಶುದ್ಧ ನೀರನ್ನ ಕುಡಿಯುವಂತಾಗಿದೆ ಎಂದು ದೂರಿದರು. ಬೇಸಿಗೆ ಆರಂಭಕ್ಕೂ ಮುನ್ನವೇ ಪುರಸಭೆ ವ್ಯಾಪ್ತಿಯ ಹೊಸಹೊಳಲಿನ ಎಲ್ಲ 6ವಾರ್ರ್ಡ್‌ಗಳಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಿದೆ. ಇನ್ನು ಬೇಸಿಗೆಯಲ್ಲಿ ಇನ್ಯಾವ ಪರಿಸ್ಥಿತಿ ನಿರ್ಮಾಣವಾಗುವುದು ಎಂದು ಗೊತ್ತಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಅಧಿಕಾರಿಗಳು ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಕಾರಣ ಕೇಳಿದರೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ ಮಾರ್ಗ ಒಡೆದು ಹೋಗಿದೆ. ಮೋಟರ್‌ ಕೆಟ್ಟಿದೆ, ಅದನ್ನ ದುರಸ್ತಿ ಮಾಡಿಸಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ನೀರು ಬಂದ್‌ ಆಗಿ 15ದಿನಗಳು ಕಳೆದರೂ ಈವರೆಗೆ ಕೆಟ್ಟಿರುವ ಪೈಪ್‌ಲೈನ್‌ ದುರಸ್ತಿಗೆ ಮುಂದಾಗಿಲ್ಲದಿರುವುದು ಅಧಿಕಾರ ಜನವಿರೋಧಿ ನೀತಿಯನ್ನು ಸಾರಿಹೇಳುತ್ತದೆ. ಕೂಡಲೇ ಹೊಸಹೊಳಲಿನ ಎಲ್ಲ ವಾರ್ಡ್‌ಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಮೂರ್ತಿ, ನೀರು ಸರಬರಾಜು ಮಾಡುವ ಪೈಪ್‌ ಒಡೆದಿತ್ತು, ಈಗಷ್ಟೇ ದುರಸ್ತಿ ಮಾಡಲಾಗಿದೆ. ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮುಖಂಡರಾದ ಕೃಷ್ಣೇಗೌಡ, ಚಂದ್ರೇಗೌಡ, ನಾಗೇಗೌಡ, ಮಂಜೇಗೌಡ, ಪ್ರಭಾಕರ್‌, ಎಚ್‌.ಎಸ್‌.ರಘು ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ