ಆ್ಯಪ್ನಗರ

ಹಾಲಿ-ಮಾಜಿ ಶಾಸಕರ ‘ರಿಯಲ್‌’ ಫೈಟ್‌

ಹಾಲಿ-ಮಾಜಿ ಶಾಸಕರ 'ರಿಯಲ್‌' ಫೈಟ್‌ ಬಂಡಾಯ ಶಮನಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ತಂತ್ರ * 116 ಮಂದಿ ನಾಮಪತ್ರ ಸಲ್ಲಿಕೆ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಪುರಸಭೆಯ 23 ...

Vijaya Karnataka 18 May 2019, 5:00 am
ಬಂಡಾಯ ಶಮನಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ತಂತ್ರ * 116 ಮಂದಿ ನಾಮಪತ್ರ ಸಲ್ಲಿಕೆ
Vijaya Karnataka Web srirangapattana mla and ex mla local election fight
ಹಾಲಿ-ಮಾಜಿ ಶಾಸಕರ ‘ರಿಯಲ್‌’ ಫೈಟ್‌

ಶ್ರೀರಂಗಪಟ್ಟಣ: ಪುರಸಭೆಯ 23 ವಾರ್ಡ್‌ಗಳಿಂದ ಸ್ಪರ್ಧೆ ಬಯಸಿ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್‌, ಕಾಂಗ್ರೆಸ್‌ನಿಂದ ಬಿ.ಫಾರಂ ಸಹಿತ ತಲಾ 23 ಮಂದಿ, ಬಿಜೆಪಿಯಿಂದ 14 ಮಂದಿ, ಬಿಎಸ್‌ಪಿಯಿಂದ ಒಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಈ ನಡುವೆ ಹಾಲಿ ಹಾಗೂ ಮಾಜಿ ಶಾಸಕರು ಚುನಾವಣೆಯನ್ನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ದೋಸ್ತಿಗಳ ರಿಯಲ್‌ ಫೈಟ್‌ಗೆ ಪುರಸಭೆ ಚುನಾವಣೆ ವೇದಿಕೆ ಒದಗಿಸಿದೆ.

ಈ ಪೈಕಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಹಾಗೂ ಬಿಎಸ್‌ಪಿಯಿಂದ 51 ಮಂದಿ ಬಿ.ಫಾರಂ ಸಹಿತ ನಾಮಪತ್ರ ಸಲ್ಲಿಸಿದ್ದರೆ, ಉಳಿದ 65 ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೇ 20 ರಂದು ನಾಮಪತ್ರ ವಾಪಸ್‌ ಪಡೆಯಲು ಕಡೆ ದಿನ. ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಈ ಬಾರಿ ಪುರಸಭೆ ಚುಕ್ಕಾಣಿ ಹಿಡಿತಕ್ಕೆ ತೆಗೆದುಕೊಳ್ಳಲು ಪಣ ತೊಟ್ಟಿರುವ ಶಾಸಕ ಎ.ಎಸ್‌.ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ಎ.ಬಿ ರಮೇಶ ಬಂಡಿಸಿದ್ದೇಗೌಡ ಅಳೆದು, ತೂಗಿ ಗೆಲ್ಲುವ ಅಭ್ಯರ್ಥಿಗಳನ್ನೇ ಹುಡುಕಿ ಆಯಾ ಪಕ್ಷ ದ ಬಿ ಫಾರಂ ನೀಡಿದ್ದಾರೆ. ಪಟ್ಟಣದದಲ್ಲಿ ಹಿಡಿತ ಇರುವ ವಾರ್ಡ್‌ಗಳಿಗೆ ಸೀಮಿತವಾಗಿ ಬಿಜೆಪಿ 14 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಬಾರಿಗೆ ಬಿಎಸ್‌ಪಿಯಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.

ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಒಂದಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಲೋಕಲ್‌ ಚುನಾವಣೆಯಲ್ಲಿ ರಿಯಲ್‌ ಫೈಟ್‌ ನಡೆಸಲು ಸಜ್ಜಾಗಿವೆ. ಜೆಡಿಎಸ್‌ ತೆಕ್ಕೆಗೆ ಗದ್ದುಗೆ ಪಡೆಯಲು ಶಾಸಕ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್‌ ತೆಕ್ಕೆಗೆ ತೆಗದುಕೊಳ್ಳಲು ಮಾಜಿ ಶಾಸಕ ಎ.ಬಿ ರಮೇಶಬಂಡಿಸಿದ್ದೇಗೌಡ ಹೋರಾಟ ಮಾಡುತ್ತಿದಾರೆ.

ಬಂಡಾಯಗಾರರು ಇಬ್ಬರೂ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದ್ದು ಅವರನ್ನು ಸಮಾಧಾನ ಪಡಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಮೇ 20ರಂದು ಎಷ್ಟು ಮಂದಿ ನಾಮಪತ್ರ ಹಿಂಪಡೆಯುತ್ತಾರೆ, ಯಾವ ಪಕ್ಷ ಕ್ಕೆ ಯಾವ ವಾರ್ಡ್‌ನಲ್ಲಿ ಬಂಡಾಯ ಇರುವುದಿಲ್ಲ ಎಂಬುದು ತಿಳಿಯಲಿದೆ.

ಪಟ್ಟಣದ ಅಭಿವೃದ್ಧಿಗೆ ರೂ.100 ಕೋಟಿ ಅಂದಾಜು ವೆಚ್ಚದ ಯೋಜನೆ ತಯಾರಾಗಿದೆ. ಈಗಾಗಲೇ 9 ಕೋಟಿ ರೂ. ಬಿಡುಗಡೆಯಾಗಿದೆ. ಕೋಟೆಗೆ ಹೊಂದಿಕೊಂಡಿರುವ ಕಂದಕಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಿ ದೋಣಿ ವಿಹಾರ ಆರಂಭಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರಕಾರ ನಿರೀಕ್ಷೆಗೂ ಮೀರಿ ಅನುದಾನ ನೀಡಿದೆ. ಹೀಗಾಗಿ ಮತದಾರರು ಜೆಡಿಎಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ. 23 ಸ್ಥಾನಗಳ ಪೈಕಿ 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ.
- ರವೀಂದ್ರ ಶ್ರೀಕಂಠಯ್ಯ ಶಾಸಕ

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತದೊಡನೆ ಅಧಿಕಾರ ಹಿಡಿಯಲಿದೆ. ಎರಡು ಬಾರಿ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕುಡಿಯುವ ನೀರು, ರಸ್ತೆ, ಒಳ ಚರಂಡಿ, ವಿದ್ಯುತ್‌, ಮಿನಿ ವಿಧಾನಸೌಧ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ ಮಾಡಿದ್ದೇನೆ. ಸಿದ್ದರಾಮಯ್ಯ ಸರಕಾರದ ಯೋಜನೆಗಳು ಹಾಗೂ ಕಾಂಗ್ರೆಸ್‌ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ. ಹಾಗಾಗಿ 23 ವಾರ್ಡ್‌ಗಳಲ್ಲಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬ ನಂಬಿಕೆ ಇದೆ.
- ಎ.ಬಿ.ರಮೇಶಬಂಡಿಸಿದ್ದೇಗೌಡ ಮಾಜಿ ಶಾಸಕ

ವಾರ್ಡ್‌ಗಳಲ್ಲಿ ಪಕ್ಷ ಶಕ್ತಿಯುತವಾಗಿರುವ ಕಡೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. 14 ಮಂದಿ ಅಭ್ಯರ್ಥಿಗಳಿಗೆ ಬಿ.ಫಾರಂ ವಿತರಣೆ ಮಾಡಲಾಗಿದೆ. 8 ಮಂದಿ ಗೆಲ್ಲುವ ವಿಶ್ವಾಸವಿದೆ.
-ಟಿ.ಶ್ರೀಧರ್‌ ಬಿಜೆಪಿ ತಾಲೂಕು ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ