ಆ್ಯಪ್ನಗರ

ವಿಶೇಷ ಕ್ರೀಡೆಗೆ ಮಂಗಳಾ ಕ್ರೀಡಾಂಗಣ ಬಳಕೆ: ಡಿ.ಸಿ ಚಿಂತನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿ ವಿಶೇಷ ಮಕ್ಕಳನ್ನು ಪೋಷಿಸುವ ಮೂಲಕ ಹೆತ್ತವರು ಹಾಗೂ ಮಕ್ಕಳಿಗೆ ವಿಶೇಷ ಸಹಕಾರ ನೀಡುತ್ತಿವೆ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.

ವಿಕ ಸುದ್ದಿಲೋಕ 29 Mar 2016, 4:34 pm
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿ ವಿಶೇಷ ಮಕ್ಕಳನ್ನು ಪೋಷಿಸುವ ಮೂಲಕ ಹೆತ್ತವರು ಹಾಗೂ ಮಕ್ಕಳಿಗೆ ವಿಶೇಷ ಸಹಕಾರ ನೀಡುತ್ತಿವೆ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.
Vijaya Karnataka Web
ವಿಶೇಷ ಕ್ರೀಡೆಗೆ ಮಂಗಳಾ ಕ್ರೀಡಾಂಗಣ ಬಳಕೆ: ಡಿ.ಸಿ ಚಿಂತನೆ


ಮಂಗಳೂರು ಪುರಭವನದಲ್ಲಿ ಸೋಮವಾರ ನಡೆದ ಒಲಿಂಪಿಕ್ಸ್ ಭಾರತ್- ಕರ್ನಾಟಕ ಸಂಸ್ಥೆಗೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ, ಕೇಂದ್ರ ಸರಕಾರದ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ವತಿಯಿಂದ ನೀಡಲಾದ ಮಾನ್ಯತಾ ಪ್ರಮಾಣಪತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಸಂಸ್ಥೆಗಳು ಉತ್ತಮ ಕೆಲಸ ಮಾಡಿದಾಗ ಗೆಲುವು ಖಂಡಿತ ಲಭ್ಯವಾಗುತ್ತದೆ ಎಂದು ಹೇಳಿದ ಅವರು, ಸರಕಾರ ವಿಶೇಷ ಮಕ್ಕಳಿಗಾಗಿ ಸೇವೆ ಸಲ್ಲಿಸುವ ಅರ್ಹ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ವಿಶೇಷ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ವಿಶೇಷ ಕ್ರೀಡೆ ಆಯೋಜಿಸಲು ನೆರವಾಗುವ ನಿಟ್ಟಿನಲ್ಲಿ ಮಂಗಳಾ ಕ್ರೀಡಾಂಗಣವನ್ನು ಉಚಿತವಾಗಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ವಿಶೇಷ ಒಲಿಂಪಿಕ್ಸ್‌ನ ರಾಜ್ಯದ ಏರಿಯಾ ಡೈರೆಕ್ಟರ್ ಆಗಿ ನೇಮಕಗೊಂಡಿರುವ ಸಾನಿಧ್ಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ವಾರದಲ್ಲಿ ಒಂದು ದಿನ ನಗರದ ಮಂಗಳಾ ಕ್ರೀಡಾಂಗಣ ಮತ್ತು ಈಜುಕೊಳವನ್ನು ವಿಶೇಷ ಮಕ್ಕಳ ತರಬೇತಿಗಾಗಿ ಉಚಿತವಾಗಿ ನೀಡಬೇಕು ಎಂದರು.

ಸನ್ಮಾನ: ಕ್ರೀಡೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ವಿಶೇಷ ವಿದ್ಯಾರ್ಥಿನಿ ಅರ್ಚನಾ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕ ನೂತನ ಸಮಿತಿಯ ಪದಾಧಿಕಾರಿಗಳನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಮೇಯರ್ ಹರಿನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಶ್ರೀದೇವಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ವಿಶೇಷ ಒಲಿಂಪಿಕ್ಸ್ ಭಾರತ್- ಕರ್ನಾಟಕದ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಉಪಾಧ್ಯಕ್ಷ ರೆ.ಫಾ.ಫ್ರಾನ್ಸಿಸ್, ಸಿಸ್ಟರ್ ಮರಿಯಾ ಶ್ರುತಿ, ಅಮರೇಂದ್ರ ಆಂಜನಪ್ಪ, ಮೊಹಮ್ಮದ್ ಬಶೀರ್, ಮಹೇಶ್ ಕುಮಾರ್, ಕಾಂತಿ ಹರೀಶ್ ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ಏಬಲ್ಡ್ ಅಧ್ಯಕ್ಷ ಮಹಾಬಲ ಮಾರ್ಲ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘದ ಅಧ್ಯಕ್ಷೆ ಆಗ್ನೆಸ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಸತೀಶ್ ವಂದಿಸಿದರು. ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.

ನೃತ್ಯ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಬಳಿಕ ಸೈಂಟ್ ಆ್ಯನ್ಸ್, ಉಡುಪಿಯ ಮಾನಸ, ಆಶಾ ನಿಲಯ, ಮಣಿಪಾಲದ ಆಸರೆ, ವೇಣೂರಿನ ಕ್ರಿಸ್ತರಾಜ, ಮಂಗಳೂರಿನ ಲಯನ್ಸ್ ವಿಶೇಷ ಶಾಲೆ, ಕಾರ್ಕಳದ ಚೇತನಾ ಮೊದಲಾದ ವಿಶೇಷ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೃತ್ಯ ಪ್ರದರ್ಶನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ