Please enable javascript.ಅಷ್ಟಬಂಧ ಗಟ್ಟಿಯಾಗಲು ಸಾಮೂಹಿಕ ಪ್ರಾರ್ಥನೆ ಅಗತ್ಯ: ಪೇಜಾವರಶ್ರೀ - ಅಷ್ಟಬಂಧ ಗಟ್ಟಿಯಾಗಲು ಸಾಮೂಹಿಕ ಪ್ರಾರ್ಥನೆ ಅಗತ್ಯ: ಪೇಜಾವರಶ್ರೀ - Vijay Karnataka

ಅಷ್ಟಬಂಧ ಗಟ್ಟಿಯಾಗಲು ಸಾಮೂಹಿಕ ಪ್ರಾರ್ಥನೆ ಅಗತ್ಯ: ಪೇಜಾವರಶ್ರೀ

ವಿಕ ಸುದ್ದಿಲೋಕ 3 Jan 2014, 7:45 pm
Subscribe

ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಲ್ಲಿ ಮಾತ್ರ ಅಷ್ಟಬಂಧ ಗಟ್ಟಿಯಾಗಲು ಸಾಧ್ಯ. ಆದ್ದರಿಂದ ಎಲ್ಲ ದೇವಾಲಯಗಳಲ್ಲಿ ದಲಿತರಿಂದ ಆರಂಭಿಸಿ ಎಲ್ಲರೂ ಒಟ್ಟು ಸೇರಿ 15 ದಿನಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ನಡೆಸಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥಸ್ವಾಮೀಜಿ ಹೇಳಿದರು.

ಅಷ್ಟಬಂಧ ಗಟ್ಟಿಯಾಗಲು ಸಾಮೂಹಿಕ ಪ್ರಾರ್ಥನೆ ಅಗತ್ಯ: ಪೇಜಾವರಶ್ರೀ
ಕಡಬ: ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಲ್ಲಿ ಮಾತ್ರ ಅಷ್ಟಬಂಧ ಗಟ್ಟಿಯಾಗಲು ಸಾಧ್ಯ. ಆದ್ದರಿಂದ ಎಲ್ಲ ದೇವಾಲಯಗಳಲ್ಲಿ ದಲಿತರಿಂದ ಆರಂಭಿಸಿ ಎಲ್ಲರೂ ಒಟ್ಟು ಸೇರಿ 15 ದಿನಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ನಡೆಸಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥಸ್ವಾಮೀಜಿ ಹೇಳಿದರು.

ಶುಕ್ರವಾರ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಬ್ರಹ್ಮಕಲಶ ನಡೆದ ಸಂದರ್ಭದಲ್ಲಿ ನಡೆದ ಧರ್ಮ ಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ದೇವರು ಸರ್ವವ್ಯಾಪಿ. ದೇವಾಲಯಗಳು ಆತನ ಆರಾಧನೆಗೆ ಇರುವ ಮಾಧ್ಯಮ ಕೇಂದ್ರ. ದೇವಾಲಯಗಳು ಜೀರ್ಣೋದ್ಧಾರಗೊಳ್ಳದೇ ಇದ್ದಲ್ಲಿ ಭಕ್ತರಿಗೆ ನೆಮ್ಮದಿ ಇಲ್ಲ, ದೇವಾಲಯಗಳನ್ನು ಒಳಗೂ, ಹೊರಗೂ ಚೆನ್ನಾಗಿ ಇಟ್ಟುಕೊಂಡಿರಬೇಕು. ಇಲ್ಲಿ ಮೊಳಗುವ ಮಂಗಳ ಧ್ವನಿ ಇಡೀ ಪರಿಸರವನ್ನೇ ಪವಿತ್ರಗೊಳಿಸುತ್ತದೆ. ರಾಮಕುಂಜ ಸ್ಫೂರ್ತಿಯ ಕೇಂದ್ರ, ಇದು ಸಾಮಾಜಿಕ, ಧಾರ್ಮಿಕ ಕೇಂದ್ರವಾಗಿ ಬೆಳೆಯಲಿ ಎಂದು ಸ್ವಾಮೀಜಿ ಹಾರೈಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಮಾತನಾಡಿ, ಶಾಂತಿ, ವಿವೇಕ, ಸಂತೋಷ, ಸಜ್ಜನರ ಸಂಘ ದಿಂದ ಪರಿವರ್ತನೆ ಸಾಧ್ಯ, ಇಂತಹ ಪರಿವರ್ತನೆಗಳು ಕ್ಷೇತ್ರ ಗಳಿಂದಲೇ ಆಗಬೇಕು. ಪ್ರತಿಯೊಬ್ಬರಲ್ಲೂ ಭಯ ದೂರಗೊಂಡು ಪ್ರೀತಿ ಬೆಳೆಯಬೇಕು ಎಂದು ಹೇಳಿದರು.

ಸಾಹಿತಿ ಕೆ.ಈ. ರಾಧಾಕಷ್ಣ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಬ್ರಹ್ಮಣ್ಯ ಎಸ್‌ಎಲ್‌ಆರ್ ರೆಸಿಡೆನ್ಸಿ ಮಾಲಕ ಸತ್ಯನಾರಾಯಣ, ಪವಿತ್ರಪಾಣಿ ಈರಕಿಮಠ ವೆಂಕಟ್ರಮಣ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುರಾರಿ ರಾವ್ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ನಾರಾಯಣ ಭಟ್ ಸ್ವಾಗತಿಸಿದರು. ಸಂಚಾಲಕ ಮಾಧವ ಆಚಾರ್ ಇಜ್ಜಾವು ವಂದಿಸಿದರು. ಸಹ ಕಾರ್ಯದರ್ಶಿ ಲೋಕನಾಥ ರೈ ಕೇಳ್ಕ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಇಂಚರ ಆರ್ಕೆಸ್ಟ್ರಾ ರಾಮಕುಂಜ ಇವರಿಂದ ‘ಭಕ್ತಿ ರಸಮಂಜರಿ’ ಕಾರ್ಯಕ್ರಮ ನಡೆಯಿತು.

ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ. 2ರಂದೇ ರಾಮಕುಂಜಕ್ಕೆ ಆಗಮಿಸಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ರಾತ್ರಿ ತನ್ನ ಮೂಲ ಮನೆ ಎರಟಾಡಿಯಲ್ಲಿ ತಂಗಿದ್ದರು. ಜ. 3ರಂದು 7.15ಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ 7.32ರ ಶುಭಲಗ್ನದಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಅಲ್ಲಿಂದ ಮತ್ತೆ ತನ್ನ ಎರಟಾಡಿ ಮನೆಗೆ ತೆರಳಿ, ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ರಾಮಕುಂಜ ದೇವಸ್ಥಾನಕ್ಕೆ ಗದ್ದೆ, ತೋಟಗಳ ಮಧ್ಯೆ ನಡೆದುಕೊಂಡು ಆಗಮಿಸಿದರು. ಬಾಲ್ಯದಲ್ಲಿ ಸ್ವಾಮೀಜಿ ರಾಮಕುಂಜ ದೇವಾಲಯದ ಆವರಣದಲ್ಲಿದ್ದ ಶಾಲೆಗೆ ಗದ್ದೆ, ತೋಟಗಳ ಮಧ್ಯೆ ನಡೆದುಕೊಂಡೇ ಬರುತ್ತಿದ್ದರು. ಇದೀಗ ಸ್ವಾಮೀಜಿಯವರು ತನಗೆ ವಯಸ್ಸಾಗಿದ್ದರೂ ಅದನ್ನು ಲೆಕ್ಕಿಸದೇ ಗದ್ದೆ, ತೋಟಗಳ ಮಧ್ಯೆ ನಡೆದುಕೊಂಡೇ ದೇವಾಲಯಕ್ಕೆ ಬರುವ ಮೂಲಕ ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕುವುದರೊಂದಿಗೆ ಭಕ್ತರಲ್ಲಿ ಅಚ್ಚರಿ ಹುಟ್ಟಿಸಿದರು.

ಬೆಳಗ್ಗೆ ಮಹಾಗಣಪತಿ ಹೋಮ, ಉಷ:ಪೂಜೆ, ತ್ರಿಕಾಲಪೂಜೆ ನಡೆದು 7.32ರ ಮಕರ ಲಗ್ನ ಮುಹೂರ್ತದಲ್ಲಿ ನೂತನ ಧ್ವಜಸ್ಥಂಭ ಪ್ರತಿಷ್ಠೆ, ಶ್ರೀ ದೇವರಿಗೆ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾಬಲಿ, ಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು. ಅಲ್ಲದೇ ಶ್ರೀ ದೇವರ ಮೂಲಸ್ಥಾನವಾಗಿರುವ ದೇವರಗುಡ್ಡದಲ್ಲಿ ನೂತನ ಬಿಲದ್ವಾರ ಮಂಟಪದ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ತ್ರಿಕಾಲಪೂಜೆ, ಮಹಾಪೂಜೆ, ವೆದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ತ್ರಿಕಾಲಪೂಜೆ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಜಾತ್ರೋತ್ಸವ ಪ್ರಾರಂಭಗೊಂಡಿತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ