ಆ್ಯಪ್ನಗರ

ವಿಠಲ ಮಲೆಕುಡಿಯ ನಿರ್ದೋಷಿ, 10 ವರ್ಷ ಹಿಂದಿನ ಪ್ರಕರಣ

ನಕ್ಸಲರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಕುತ್ಲೂರು ನಿವಾಸಿಗಳಾದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 2012ರ ಮಾ.3 ರಂದು ಕಾರ್ಕಳದ ನಕ್ಸಲ್‌ ನಿಗ್ರಹ ಪಡೆ ಬಂಧಿಸಿತ್ತು.

Vijaya Karnataka 21 Oct 2021, 11:06 pm
ಮಂಗಳೂರು: ನಕ್ಸಲರೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ವಿಠಲ ಮಲೆಕುಡಿಯ ಮತ್ತು ಆತನ ತಂದೆಯ ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ನ್ಯಾಯಾಲಯವು ಇಬ್ಬರನ್ನೂ ನಿರ್ದೋಷಿ ಎಂದು ಗುರುವಾರ ತೀರ್ಪು ಪ್ರಕಟಿಸಿದೆ.
Vijaya Karnataka Web ವಿಠಲ ಮಲೆಕುಡಿಯ
ವಿಠಲ ಮಲೆಕುಡಿಯ


ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ (33) ಹಾಗೂ ಅವರ ತಂದೆ ಲಿಂಗಣ್ಣಮಲೆಕುಡಿಯ (61) ನಿರ್ದೋಷಿಗಳು.

ನಕ್ಸಲರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಕುತ್ಲೂರು ನಿವಾಸಿಗಳಾದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 2012ರ ಮಾ.3 ರಂದು ಕಾರ್ಕಳದ ನಕ್ಸಲ್‌ ನಿಗ್ರಹ ಪಡೆ ಬಂಧಿಸಿತ್ತು. ಈ ಸಂದರ್ಭ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 15 ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆದು ಬಳಿಕ ಜೈಲಿಗೆ ಕಳುಹಿಸಲಾಗಿತ್ತು.

ಕೈಕೋಳ ಹಾಕಿಯೇ ಪರೀಕ್ಷೆ ಬರೆದರು

ವಿಠಲ ಮಲೆಕುಡಿಯ ಬಂಧಿತರಾಗಿದ್ದರೂ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದ್ದು, 2012ರ ಏ.17ರಂದು ಕೈಕೋಳ ಹಾಕಿಯೇ ಪರೀಕ್ಷೆ ಬರೆದಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಹಲವು ಅಡೆತಡೆಗಳ ಮಧ್ಯೆ 2014ರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 2012ರ ಜೂ.11ರಂದು ಎಎಸ್ಪಿ ಎಂ.ಎನ್‌. ಅನುಚೇತ್‌ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ 2012ರ ಜೂ.5ರಂದು ನ್ಯಾಯಾಲಯ ಜಾಮೀನು ನೀಡಿತ್ತು. ಈ ಪ್ರಕರಣ 2017ರ ಆಗಸ್ಟ್‌ ನಂತರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾವಣೆಯಾಯಿತು.

ನಕ್ಸಲ್‌ ನಂಟು ಪ್ರಕರಣದಲ್ಲಿ ನಾನು ಮತ್ತು ತಂದೆ ನಿರ್ದೋಷಿ ಎಂದು ತೀರ್ಪು ಬಂದಿರುವುದು ತುಂಬಾ ಖುಷಿ ನೀಡಿದೆ. ಈ ಪ್ರಕರಣದಲ್ಲಿ ನನ್ನ ಪರ ನಿಂತ ನ್ಯಾಯವಾದಿಗಳು, ಸಂಘಟನೆಗಳಿಗೆ ಋುಣಿಯಾಗಿದ್ದೇನೆ. ಬೆಳ್ತಂಗಡಿಯ ಕುತ್ಲೂರು ಕುಗ್ರಾಮವಾಗಿದ್ದು, ಅಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸಲು ಪೊಲೀಸರು ಪೀಡಿಸುತ್ತಿದ್ದರು. ಅದರ ವಿರುದ್ಧ ಹೋರಾಟ ಮಾಡಿದ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಿ ಬಂಧಿಸಲಾಯಿತು. ಆದರೆ ಇವತ್ತು ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.
ವಿಠಲ ಮಲೆಕುಡಿಯ, ನಿರ್ದೋಷಿ

ಪ್ರಕರಣದ ವಿಚಾರಣೆ ಜಿಲ್ಲಾ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಇಬ್ಬರು ಆರೋಪಿಗಳನ್ನೂ ನಿರ್ದೋಷಿಗಳೆಂದು ತೀರ್ಪು ನೀಡಿದ್ದಾರೆ. ವಿಠಲ ಮಲೆಕುಡಿಯ ಪರವಾಗಿ ದಿನೇಶ್‌ ಹೆಗ್ಡೆ ಉಳೇಪಾಡಿ ಹಾಗೂ ಶಹನಾಜ್‌ ವಾದಿಸಿದ್ದರು.

36 ಸೊತ್ತುಗಳು ಪತ್ತೆಯಾಗಿತ್ತು

ವಿಠಲ ಮಲೆಕುಡಿಯ ಅಧಿವರ ಮನೆಯಲ್ಲಿ ನಿತ್ಯೋಪಯೋಗಿ ಸೊತ್ತುಗಳು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಪುಸ್ತಕಗಳು, ಬೈನಾಕ್ಯುಲರ್‌, ಪೇಪರ್‌ಗಳು, ಕೆಲವು ಪಾತ್ರೆಗಳು, ಪೊಲೀಸರ ವಿರುದ್ಧದ ಬರವಣಿಗೆ, ಕರಪತ್ರ ಸೇರಿದಂತೆ 36 ಸೊತ್ತುಗಳು ಪತ್ತೆಯಾಗಿದ್ದವು. ಈ ದಾಖಲೆಗಳನ್ನು ಇಟ್ಟುಕೊಂಡೇ ಪೊಲೀಸರು ನಕ್ಸಲ್‌ ಹಣೆಪಟ್ಟಿ ಕಟ್ಟಿದ್ದರು.

ಗೌರವಯುತ ಬಿಡುಗಡೆಗೆ ಹೈಕೋರ್ಟ್‌ಗೆ ಮೇಲ್ಮನವಿ

ವಿಠಲ ಮಲೆಕುಡಿಯ ಮತ್ತು ಲಿಂಗಣ್ಣ ಮಲೆಕುಡಿಯ ಬಂಧನದ ಹಿಂದೆ ರಾಜಕೀಯ ಹಸ್ತಕ್ಷೇಪವಿರುವುದರಿಂದ ಖುಲಾಸೆಯಾದ ವಿಠಲ ಮಲೆಕುಡಿಯ ಅವರನ್ನು ಗೌರವಯುತ ಬಿಡುಗಡೆಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಿಠಲ ಮಲೆಕುಡಿಯ ಪರ ವಕೀಲ ದಿನೇಶ್‌ ಉಳೇಪಾಡಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ, ಹಕ್ಕಿಗಾಗಿ ಸರಕಾರದ ವಿರುದ್ಧ ಹೋರಾಟದ ಹಾದಿ ತುಳಿದ ವಿಠಲ ಮಲೆಕುಡಿಯ ಅಧಿವಧಿರನ್ನು ಬಂಧಿಸಲಾಗಿದೆ. ಇದು ಹೋರಾಟವನ್ನು ದಮನಿಸುವ ಯತ್ನವಾಗಿತ್ತು. ಆದರೆ ನ್ಯಾಯಾಲಯ ತೀರ್ಪಿನ ಮೂಲಕ 10 ವರ್ಷಗಳ ಹೋರಾಟ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಗೆಲುವು ಎನ್ನಬಹುದು ಎಂದು ಉಳೇಪಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ