ಆ್ಯಪ್ನಗರ

ಸಂಜೆ ಬಶೀರ್ ಅಂತ್ಯಕ್ರಿಯೆ, ಜಿಲ್ಲಾಡಳಿತದಿಂದ 10 ಲಕ್ಷ

ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಅಂತ್ಯ ಸಂಸ್ಕಾರ ಸಂಜೆ 4 ಗಂಟೆಗೆ ಪಂಜಿಮೊಗರು ಮಸೀದಿ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

Vijaya Karnataka Web 7 Jan 2018, 11:44 am
ಮಂಗಳೂರು: ಕೊಟ್ಟಾರಚೌಕಿಯಲ್ಲಿ ಜ.3ರಂದು ತಡರಾತ್ರಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಅಂತ್ಯ ಸಂಸ್ಕಾರ ಸಂಜೆ 4 ಗಂಟೆಗೆ ಪಂಜಿಮೊಗರು ಮಸೀದಿ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.
Vijaya Karnataka Web bashirs last rites in mangaluru
ಸಂಜೆ ಬಶೀರ್ ಅಂತ್ಯಕ್ರಿಯೆ, ಜಿಲ್ಲಾಡಳಿತದಿಂದ 10 ಲಕ್ಷ


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿರುವ ಬಶೀರ್ ಮೃತದೇಹವನ್ನು ವೀಕ್ಷಿಸಿ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿ ಸರಕಾರದ ವತಿಯಿಂದ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಶವಯಾತ್ರೆ ನಡೆಸದಂತೆ ಸ್ವತಃ ಕುಟುಂಬದವರೇ ವಿನಂತಿಸಿದ ಕಾರಣ ಭಾನುವಾರ ಮಧ್ಯಾಹ್ನ ಮೃತದೇಹವನ್ನು ನೇರವಾಗಿ ಬಶೀರ್ ಮನೆಗೆ ಕೊಂಡೊಯ್ಯಲಾಗುವುದು. ಅಲ್ಲಿ ಮಹಿಳೆಯರಿಗೆ ಮಾತ್ರ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಪಂಜಿಮೊಗರು ಮಸೀದಿ ಆವರಣಕ್ಕೆ ಮೃತದೇಹವನ್ನು ಕೊಂಡೊಯ್ದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲುವ ಅವಕಾಶ ಕಲ್ಪಿಸಲಾಗಿದೆ.

ಬಶೀರ್ ಅವರ ಹಿರಿಯ ಪುತ್ರ ಇಮ್ರಾನ್ ದಾಳಿ ನಡೆದ ಸುದ್ದಿ ತಿಳಿದ ತಕ್ಷಣ ದುಬೈಯಿಂದ ಮಂಗಳೂರಿಗೆ ಆಗಮಿಸಿ ಆಸ್ಪತ್ರೆಯಲ್ಲಿ ತಂದೆಯ ಜತೆ ಇದ್ದರು. ಕಿರಿಯ ಪುತ್ರ ಇರ್ಫಾನ್ ಅಬುದಾಬಿಯಲ್ಲಿ ಇದ್ದು, ನಾಳೆ ಬೆಳಗ್ಗೆ ಮನೆಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಶೀರ್ ಸಹೋದರ ಸೌದಿ ಅರೇಬಿಯಾದಲ್ಲಿದ್ದು, ಸಂಜೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ.

ಆಸ್ಪತ್ರೆಯ ಶವಾಗಾರದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಬಿಜೆಪಿ ಮುಖಂಡ ಕೃಷ್ಣ ಜೆ.ಪಾಲೆಮಾರ್, ಸಚಿವ ಯು.ಟಿ.ಖಾದರ್, ಶಾಸಕ ಮೊಹಿಯುದ್ದೀನ್ ಬಾವ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್ ಮುಂತಾದವರು ಭೇಟಿ ನೀಡಿದ್ದಾರೆ.

ಆಸ್ಪತ್ರೆಯ ಶವಾಗಾರದ ಸುತ್ತಮುತ್ತ ಭಾರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೆ ಬಶೀರ್ ಮನೆ ಆಕಾಶಭವನ ಹಾಗೂ ಪರಿಸರದ ಕಾವೂರು, ಪಂಜಿಮೊಗರು, ಕೂಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದು, ಕೊಲೆಯಾದ ದೀಪಕ್ ರಾವ್ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ಬಶೀರ್ ಅವರ ಮನೆಗೆ ಭೇಟಿ ನೀಡುವ ಸಾಧ್ಯತೆ ಇತ್ತು. ಆದರೆ ಇದೀಗ ಬಶೀರ್ ಮೃತಪಟ್ಟಿರುವುದರಿಂದ ಭದ್ರತಾ ಕಾರಣಗಳಿಗಾಗಿ ಮುಖ್ಯಮಂತ್ರಿ ಭೇಟಿ ಸಾಧ್ಯತೆ ಕಡಿಮೆ ಎಂದು ಶಾಸಕ ಮೊಹಿಯುದ್ದೀನ್ ಬಾವ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ