ಆ್ಯಪ್ನಗರ

ಮುಸ್ಲಿಂ ಉದ್ಯಮಿಗಳಿಂದ ಅಭಿನಂದನೆ ಸ್ವೀಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮುಸ್ಲಿಂ ಬಾಂಧವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.

Vijaya Karnataka Web 3 Sep 2019, 6:56 pm
ಮಂಗಳೂರು: ಮುಸ್ಲಿಮರು ತನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ. ಇದಕ್ಕಾಗಿ ತನಗೆ ಸಲಹೆ, ಮಾರ್ಗದರ್ಶನದ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
Vijaya Karnataka Web kateel


ನಗರದ ಓಶಿಯಲ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಮುಸ್ಲಿಂ ಉದ್ಯಮಿಗಳು ಮತ್ತು ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಸಂಘರ್ಷದಿಂದ ಮೇಲೆ ಬಂದ ತನಗೆ ಯೋಗ, ಭಾಗ್ಯಗಳು ಒಲಿದು ಬಂದಿವೆ. ಹತ್ತಾರು ಸನ್ಮಾನಗಳು ಸಂದಿವೆ. ಈ ಪೈಕಿ ಮುಸ್ಲಿಮರು ಸೇರಿ ಮಾಡುವ ಸನ್ಮಾನ ಜೀವನ ಪರ್ಯಂತ ನೆನಪಿನಂಗಳದಲ್ಲಿ ಉಳಿಯುವ, ಸುವರ್ಣಾಕ್ಷಣಗಳಲ್ಲಿ ಬರೆದಿಡಬೇಕಾದ ಗೌರವ. ಇದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ನಳಿನ್ ಹೇಳಿದರು.

ತಾನು ಆರೆಸ್ಸೆಸ್‌ನಿಂದ ಬಂದಿದ್ದೇನೆ. ರಾಷ್ಟ್ರಭಕ್ತಿ ಮತ್ತು ಮನುಷ್ಯನಲ್ಲಿ ದೇವರನ್ನು ಕಾಣು ಎಂಬುದನ್ನು ಶಾಖೆಯಲ್ಲಿ ಕಲಿಸಿಕೊಟ್ಟಿದ್ದಾರೆ. ಜಿಲ್ಲೆಯ ಹಿಂದು- ಮುಸ್ಲಿಮರ ಮಧ್ಯೆ ಅನ್ಯೋನ್ಯ ಸಂಬಂಧ ಇತ್ತು. ರಾಜಕೀಯದ ಲಾಭಕ್ಕಾಗಿ ಮತ ಬ್ಯಾಂಕ್ ಗಳಿಸಲು ಅಂತರ ಹೆಚ್ಚಿದೆ. ಮಸೀದಿಗೆ ಬಂದು ನಾಟಕ ಮಾಡಿ, ಸುಳ್ಳು ಹೇಳುವ ವ್ಯಕ್ತಿ ನಾನಲ್ಲ. ಧರ್ಮಗಳ ಮಧ್ಯೆ ತಾರತಮ್ಯವಿಲ್ಲದೆ, ಎಲ್ಲರಿಗೂ ನ್ಯಾಯ ಕೊಡಲು ಬದ್ಧನಾಗಿದ್ದೇನೆ ಎಂದು ನಳಿನ್ ಹೇಳಿದರು.

ಧರ್ಮಗುರು ಹುಸೈನ್ ದಾರಿಮಿ ರೆಂಜಿಲಾಡಿ ಮಾತನಾಡಿ, ದೇಶವನ್ನು 850 ವರ್ಷ ಆಳಿರುವ ಮುಸ್ಲಿಮರು ರಾಷ್ಟ್ರಕ್ಕೆ ದೊಡ್ಡ ಕೊಡುಗೆಗಳನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆಯನ್ನೂ ಮಾಡಿದ್ದಾರೆ. ಇಂಥ ಮುಸ್ಲಿಮರ ಬಗ್ಗೆ ಇರುವ ಸಂಶಯ ನಿವಾರಿಸಿ, ಸೌಹಾರ್ದ ನೆಲೆಸಲು ಹಿಂದು- ಮುಸ್ಲಿಮರು ಒಂದಾಗಬೇಕು. ಈ ಕೆಲಸವನ್ನು ನಳಿನ್ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ.ಬಾವ ಮಾತನಾಡಿ, ತಮ್ಮ ಚಾಣಾಕ್ಷತಣ, ಕಾರ್ಯವೈಖರಿ ಮತ್ತು ನಿಯತ್ತಿನಿಂದ ನಳಿನ್ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದು ಕರಾವಳಿಗೆ ಹೆಮ್ಮೆಯ ವಿಚಾರ. ಅವರ ಅವಧಿಯಲ್ಲಿ ಅಲ್ಪಸಂಖ್ಯಾತರ ಬೇಡಿಕೆಗಳಿಗೆ ಹೆಚ್ಚಿನ ಸ್ಪಂದನ ಸಿಗಲಿ ಎಂದು ಆಶಿಸಿದರು.

ದ.ಕ. ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ಯೆನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲ ಕುಂಞಿ, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ.ರಶೀದ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಅಬ್ದುಲ್ ಮಜೀದ್ ಸೂರಲ್ಪಾಡಿ, ಪೊನ್ನಾಣಿಯ ಯೂಸುಫ್ ಬಾಖವಿ, ಮಾಜಿ ಶಾಸಕ ರುಕ್ಮಯ ಪೂಜಾರಿ ಶುಭ ಹಾರೈಸಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ಸಲೀಂ ಅಲ್ತಾಫ್ ಫರಂಗಿಪೇಟೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ