ಆ್ಯಪ್ನಗರ

ಕೋರ್ಟ್‌ ಆವರಣದಲ್ಲಿ ರಕ್ತದ ಕಲೆ: ಪ್ರಕರಣ ಇನ್ನೂ ನಿಗೂಢ

ಕೋರ್ಟ್ ಆವರಣದಲ್ಲಿ ರಕ್ತ ಬಿದ್ದಿರುವ ಪ್ರಕರಣ ಇನ್ನು ನಿಗೂಢವಾಗಿದೆ.

Vijaya Karnataka 14 Jul 2019, 8:07 am
ಮಂಗಳೂರು: ಜಿಲ್ಲಾ ನ್ಯಾಯಾಲಯದ ಆವರಣದ ಕಾರುಗಳ ಪಾರ್ಕಿಂಗ್‌ ಜಾಗದಲ್ಲಿ ಶುಕ್ರವಾರ ಮಧ್ಯಾಹ್ನ ರಕ್ತದ ಕಲೆ ಕಂಡು ಬಂದ ಪ್ರಕರಣ ಇನ್ನೂ ನಿಗೂಢವಾಗಿದ್ದು, ಇದಕ್ಕೆ ಸಂಬಂಧಿಸಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Vijaya Karnataka Web Police Hat


ಶುಕ್ರವಾರ ಮಧ್ಯಾಹ್ನ ಕಸ ಗುಡಿಸುವವರು ನೋಡುವಾಗ ಸ್ಕಾರ್ಪಿಯೋ ಕಾರಿನ ಡೋರ್‌ ಹಾಗೂ ಪಕ್ಕದಲ್ಲಿ ರಕ್ತ ಚೆಲ್ಲಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬಂದರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆ, ಸಿಸಿ ಕ್ಯಾಮೆರಾ ಪರಿಶೀಲನೆ: ರಕ್ತದ ಚೆಲ್ಲಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅಧಿಕಾರಿಗಳ ಬಳಿ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಗಾಯಾಳುಗಳು ದಾಖಲಾಗಿದ್ದಾರೆಯೇ? ಎಂದು ಪರಿಶೀಲನೆಗೆ ಸೂಚನೆ ನೀಡಿದ್ದು, ಈ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಕೋರ್ಟ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದ ಶೋಧವನ್ನೂ ನಡೆಸಲಾಗಿದ್ದು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಳೆ ಫೊರೆನ್ಸಿಕ್‌ ವರದಿ: ಘಟನೆ ವರದಿಯಾಗುತ್ತಿದ್ದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ರಕ್ತದ ಕಲೆಗಳಿಂದ ಮಾದರಿ ಸಂಗ್ರಹಿಸಿ ಕೊಂಡೊಯ್ದಿದ್ದು ನಾಳೆ ವರದಿ ಬರುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ಇದು ಮಾನವ ರಕ್ತದ ಕಲೆಗಳೆಂದು ತಿಳಿದು ಬಂದಿದ್ದರೂ, ವರದಿಯಿಂದ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ತ ಚೆಲ್ಲಿರುವುದು ಬೆದರಿಕೆ ತಂತ್ರವೇ?

ಕಾರು ಪಾರ್ಕಿಂಗ್‌ ಜಾಗದಲ್ಲಿ ರಕ್ತ ಚೆಲ್ಲಿದ ಸ್ಥಿತಿ ನೋಡಿದರೆ ಇದು ಯಾವುದೇ ಜೀವಿಯ ದೇಹದಿಂದ ಹೊರಬಿದ್ದ ರಕ್ತದಂತೆ ಕಾಣುವುದಿಲ್ಲ. ಯಾರೋ ಕಿಡಿಗೇಡಿಗಳು ಬೆದರಿಕೆಯ ತಂತ್ರವಾಗಿ ರಕ್ತದ ಪ್ಯಾಕೆಟ್‌ನ್ನು ತೂತು ಮಾಡಿ ಪಸರಿಸಿದಂತೆ ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಸುಮಾರು 2ರಿಂದ 3 ಮೀಟರ್‌ ವ್ಯಾಪ್ತಿಯಲ್ಲಿ ರಕ್ತ ಪಸರಿಸಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ