ಆ್ಯಪ್ನಗರ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ; ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲು ಸಿದ್ಧತೆ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಇರುವುದು ಬಾಂಬ್ ಎಂದು ತಿಳಿದುಬಂದಿದ್ದು ಆತಂಕ ಮೂಡಿಸಿದೆ. ಬಾಂಬ್‌ ನಿಷ್ಕ್ರಿಯಗೊಳಿಸುವ ಕಾರ್ಯ ನಡೆಯುತ್ತಿದ್ದು ಎಲ್ಲಾ ತಯಾರಿಗಳನ್ನು ನಡೆಸಲಾಗುತ್ತಿದೆ.

Vijaya Karnataka Web 20 Jan 2020, 3:55 pm
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು ಬಾಂಬ್ ನಿಷ್ಕ್ರಿಯಗೊಳಿಸಲು ಸಿದ್ದತೆಗಳು ನಡೆಯುತ್ತಿವೆ.
Vijaya Karnataka Web bomb found in mangaluru international airport police trying to disable the bomb
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ; ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲು ಸಿದ್ಧತೆ


ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ ಬಳಿ ಸೋಮವಾರ ಬೆಳಗ್ಗೆ 10 ಗಂಟೆಗೆ ಬ್ಯಾಗ್ ಪತ್ತೆಯಾಗಿತ್ತು. ಅನುಮಾನ ಬಂದು ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದೆ.

ಮುಂಜಾಗರೂಕತಾ ಕ್ರಮವಾಗಿ ಬ್ಯಾಗ್‌ನ್ನು ಬಾಂಬ್‌ ಪ್ರತಿರೋಧಕ ವಾಹನದಲ್ಲಿಡಲಾಗಿದ್ದು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ಭದ್ರತಾ ಸಿಬ್ಬಂದಿಗಳು ತೊಡಗಿದ್ದಾರೆ.

ಅನುಮಾನಾಸ್ಪದ ಬ್ಯಾಗ್‌ನಲ್ಲಿ ಬಾಂಬ್ ! ಏನು ಹೇಳ್ತಾರೆ ಮಂಗಳೂರು ಪೊಲೀಸರು ?

ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯಾಚರಣೆ ನಡೆಸುವ ವಿಶೇಷ ವಾಹನದಲ್ಲಿ ಅನುಮಾನಾಸ್ಪದ ಬ್ಯಾಗ್‌ ಇಡಲಾಗಿದ್ದು ವಿಮಾನ ನಿಲ್ದಾಣದ ಕೆಳಗಡೆ ಇರುವ ಮೈದಾನಕ್ಕೆ ವಾಹನವನ್ನು ಸ್ಥಳಾಂತರ ಮಾಡಲಾಗುತ್ತಿದೆ.

ವಿಶೇಷ ವಾಹನವನ್ನು ಕ್ರೇನ್ ನೆರವಿನಿಂದ ಇಳಿಜಾರಾದ ರಸ್ತೆಯ ಮೂಲಕ ಮೈದಾನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಯಾವುದೇ ಅನಾಹುತ ನಡೆಯದಂತೆ ಎಲ್ಲಾ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದಾದ ಬಳಿಕ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದು ಬಾಂಬ್ ನಿಷ್ಕ್ರಿಯಗೊಳಿಸಲಿದ್ದಾರೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ.

ವಿಮಾನ ನಿಲ್ದಾಣದಿಂದ ಕೆಂಜಾರು ಮೈದಾನಕ್ಕೆ ಶಿಫ್ಟ್

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬ್ಯಾಗ್‌ನ್ನು ನಿಲ್ದಾಣದ ಕೆಳಭಾಗದಲ್ಲಿರುವ ಕೆಂಜಾರು ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಯಾವುದೇ ಅನಾಹುತ ನಡೆಯದಂತೆ ಎಚ್ಚರಿಕೆ ವಹಿಸಿಕೊಂಡಿದ್ದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ವಿಶೇಷ ವಾಹನದ ಮೂಲಕ ಮೈದಾನದಕ್ಕೆ ಶಿಫ್ಟ್ ಮಾಡಿದ್ದಾರೆ.

ಬಾಂಬ್‌ ಇದೆ ಎನ್ನಲಾಗಿರುವ ಬ್ಯಾಗ್‌ ಸ್ಥಳಾಂತರ ಕಾರ್ಯಾಚರಣೆ ಯಶಸ್ವಿಯಾಗಿದ್ದು ಇದೀಗ ಅದನ್ನು ತಜ್ಞರಿಂದ ನಿಷ್ಕ್ರಿಯಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ