ಆ್ಯಪ್ನಗರ

ಮೋದಿ ಪ್ರಮಾಣವಚನಕ್ಕೆ ಸಂಭ್ರಮಿಸಿದ ಕರಾವಳಿ

ಉಚಿತ ಆಟೋ ಸೇವೆ, ಉಚಿತ ಬಸ್‌ ಸೇವೆ, ಉಚಿತ ಹೇರ್‌ ಕಟ್ಟಿಂಗ್‌, ಉಚಿತ ಮಲ್ಲಿಗೆ ವಿತರಣೆ, ಊಟ ವಿತರಣೆ, ಸಿಹಿ ತಿಂಡಿ ವಿತರಣೆ, ಮಕ್ಕಳಿಗೆ ಐಸ್‌ಕ್ಯಾಂಡಿ ವಿತರಣೆ, ಕಬ್ಬಿನ ಜ್ಯೂಸ್‌ ವಿತರಣೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಮಾಣವಚನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.

Vijaya Karnataka Web 31 May 2019, 10:12 am
ಮಂಗಳೂರು: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಪ್ರಮಾಣ ವಚನ ಕಾರ್ಯಕ್ರಮ ಗುರುವಾರ ರಾತ್ರಿ ನಡೆದಿದ್ದು, ಮಂಗಳೂರು ನಗರ ಸೇರಿದಂತೆ ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಂಭ್ರಮಿಸಿದರು.
Vijaya Karnataka Web Modi


ಉಚಿತ ಆಟೋ ಸೇವೆ, ಉಚಿತ ಬಸ್‌ ಸೇವೆ, ಉಚಿತ ಹೇರ್‌ ಕಟ್ಟಿಂಗ್‌, ಉಚಿತ ಮಲ್ಲಿಗೆ ವಿತರಣೆ, ಊಟ ವಿತರಣೆ, ಸಿಹಿ ತಿಂಡಿ ವಿತರಣೆ, ಮಕ್ಕಳಿಗೆ ಐಸ್‌ಕ್ಯಾಂಡಿ ವಿತರಣೆ, ಕಬ್ಬಿನ ಜ್ಯೂಸ್‌ ವಿತರಣೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಮಾಣವಚನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಆಟೋ ಚಾಲಕರಾಗಿರುವ ಮೋದಿ ಅಭಿಮಾನಿಗಳು ಪ್ರಯಾಣಿಕರಿಗೆ ಇಡೀ ದಿನ ಉಚಿತ ಪ್ರಯಾಣ ಭಾಗ್ಯವನ್ನು ಕಲ್ಪಿಸಿ ಗಮನ ಸೆಳೆದರು. ಹಲವು ಆಟೋ ಸ್ಟ್ಯಾಂಡ್‌ಗಳಲ್ಲಿ ಹಾಗೂ ಆಟೋಗಳಲ್ಲಿ ಬ್ಯಾನರ್‌ ಅಳವಡಿಸಿ ಉಚಿತ ಸೇವೆಯನ್ನು ಪ್ರಚಾರ ಮಾಡಿ ಸಾರ್ವಜನಿಕರನ್ನು ಕರೆದೊಯ್ದರು.

ಮಂಗಳೂರು-ಹಳೆಯಂಗಡಿ- ತೋಕೂರು- ಕಿನ್ನಿಗೋಳಿಗೆ ಸಂಚರಿಸುವ ಕೋಟ್ಯಾನ್‌ ಬಸ್‌ ಚಾಲಕ ಶ್ರೀಕಾಂತ್‌ ಬಲವಿನಗುಡ್ಡೆ ನೇತೃತ್ವದಲ್ಲಿ ಇಡೀ ದಿನ ಪ್ರಯಾಣಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು.

ಉಚಿತ ಮಲ್ಲಿಗೆ ವಿತರಣೆ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದಂತೆ, ಸಿಟಿ ಸೆಂಟರ್‌ ಎದುರು ವಸಂತಮಹಲ್‌ ಬಳಿ ಸಂಜೆ 5 ಗಂಟೆಗೆ ಹೂವಿನ ವ್ಯಾಪಾರಿ ಫಕೀರಬ್ಬ ಎಂಬವರು ಮಹಿಳೆಯರಿಗೆ ಉಚಿತ ಮಲ್ಲಿಗೆ ಹೂವು ವಿತರಿಸಿ ಗಮನ ಸೆಳೆದರು. ಸುಮಾರು 100 ಅಟ್ಟೆ (400 ಚೆಂಡು) ಮಲ್ಲಿಗೆಯನ್ನು ಉಚಿತವಾಗಿ ಹಂಚಿದರು.

ನೇರ ವೀಕ್ಷಣೆಗೆ ಎಲ್‌ಸಿಡಿ ಪರದೆ:
ಮಂಗಳೂರು ನಗರದಲ್ಲಿ ಪ್ರಧಾನಿ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸಾರ್ವಜನಿಕರು ನೋಡುವಂತಾಗಲು ಮೋದಿ ಅಭಿಮಾನಿಗಳ ಬಳಗದ ವತಿಯಿಂದ ಅಲ್ಲಲ್ಲಿ ಎಲ್‌ಸಿಡಿ ಪರದೆಗಳನ್ನು ಅಳವಡಿಸಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಶಾಸಕ ಡಿ.ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಸಂಜೆ 6 ಗಂಟೆಯಿಂದ ಪಿವಿಎಸ್‌ ಬಳಿಯಿರುವ ಬಿಜೆಪಿ ಕಚೇರಿಯ ಎದುರು ಬೃಹತ್‌ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಬಿಜೆಪಿ ಕಚೇರಿ ಎದುರು ಜಮಾಯಿಸಿ ಪ್ರಮಾಣವಚನ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.

ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಕೂಡ ಮೋದಿ ಅಭಿಮಾನಿಗಳ ವತಿಯಿಂದ ಸಂಜೆ 6ಕ್ಕೆ ಬೃಹತ್‌ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

ಉಚಿತ ಕಬ್ಬಿನ ಹಾಲು: ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣದ ಬಳಿ ಕಬ್ಬಿನ ಹಾಲು ವ್ಯಾಪಾರದಲ್ಲಿ ತೊಡಗಿರುವ ಶಂಕರ್‌ ಗುರುವಾರ ಸಂಜೆ 5ರಿಂದ 8ರ ವರೆಗೆ ತಮ್ಮ ಅಂಗಡಿಗೆ ಆಗಮಿಸುವ ಎಲ್ಲರಿಗೂ ಉಚಿತ ಕಬ್ಬಿನ ಹಾಲು ವಿತರಿಸಿದ್ದಾರೆ.

ಉಚಿತ ಫೋಟೋ: ನಗರದ ಕೆಎಸ್ಸಾರ್ಟಿಸಿ ಬಳಿಯ ಪುನಿಕ್‌ ಸ್ಟುಡಿಯೋ ಮಾಲೀಕ ಪುನಿಕ್‌ ಶೆಟ್ಟಿ ಅವರು ತಮ್ಮ ಸ್ಟುಡಿಯೋದಲ್ಲಿ ಗುರುವಾರ ಉಚಿತವಾಗಿ ಪಾಸ್‌ಪೋರ್ಟ್‌ ಸೈಜ್‌ನ ಫೋಟೋವನ್ನು ಗ್ರಾಹಕರಿಗೆ ವಿತರಿಸಿದರು.

ದೀಪಾವಳಿ ಹಬ್ಬವನ್ನು ನೆನಪಿಸಿದ ಸಂಭ್ರಮ: ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಪ್ರಮಾಣವಚನ ಸ್ವೀಕಾರಕ್ಕೆ ಆಹ್ವಾನಿಸುತ್ತಿದ್ದಂತೆ ಅಭಿಮಾನಿ ಬಳಗದ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬಹುತೇಕ ಕಡೆಗಳಲ್ಲಿ ಪಟಾಕಿ ಸದ್ದು ಕೇಳಿಸಿದ್ದು, ದೀಪಾವಳಿ ಹಬ್ಬವನ್ನು ನೆನಪಿಸುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ