ಆ್ಯಪ್ನಗರ

ನೇತ್ರಾವತಿ ನೀರಿನ ಮಟ್ಟದಲ್ಲಿ ಏರಿಳಿತ: 15 ಗ್ರಾಮಗಳು ಪ್ರವಾಹ ಪೀಡಿತ; ಇನ್ನೂ ಎರಡು ದಿನ ಭಾರೀ ಮಳೆ

ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಆ.12ರ ತನಕ ಮಳೆ ಮುಂದುವರಿಯಲಿದೆ. ಅಪಾಯದಂಚಿನಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಎನ್‌ಡಿಆರ್‌ಎಫ್‌, ಗೃಹರಕ್ಷಕದಳ, ಅಗ್ನಿಶಾಮಕದಳ 24*7 ಸನ್ನದ್ಧವಾಗಿದೆ.

Vijaya Karnataka Web 10 Aug 2020, 8:40 am
ಮಂಗಳೂರು: ಭಾನುವಾರ ಬಂಟ್ವಾಳ ಸುತ್ತಮುತ್ತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಳಿತವಾಗುತ್ತಿದೆ. ತಾಲೂಕಿನ ಒಟ್ಟು 15 ಗ್ರಾಮಗಳು ಈಗ ಪ್ರವಾಹಪೀಡಿತವಾಗಿವೆ. ಶನಿವಾರ ಬೆಳಗ್ಗೆ ನದಿ ಉಕ್ಕಿ ಆತಂಕ ಸೃಷ್ಟಿಸಿದ್ದರೂ, ಸಂಜೆ ಇಳಿಮುಖವಾಗಿತ್ತು. ಶನಿವಾರ 9.3 ಮೀಟರ್‌ ಎತ್ತರ (ಅಪಾಯದ ಮಟ್ಟ 8.5 ಮೀ.)ದಲ್ಲಿ ಹರಿಯುತ್ತಿದ್ದ ನೇತ್ರಾವತಿ ಭಾನುವಾರ ಬೆಳಗ್ಗೆ 6.7 ಮೀ ಇದ್ದರೆ, ಬಳಿಕ 6.4ಕ್ಕೆ ಇಳಿಯಿತು. ಮಧ್ಯಾಹ್ನ 6.7 ಮೀ.ಗೆ ಏರಿಕೆಯಾದರೆ, ಸಂಜೆ 6.5 ಮೀ.ಗೆ ಇಳಿಯಿತು. ತಾಲೂಕಿನಾದ್ಯಂತ 8.63 ಸೆಂ.ಮೀ.ಮಳೆಯಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ನದಿಪಾತ್ರದಲ್ಲಿ ಬರುವ 15 ಗ್ರಾಮಗಳ ಸುಮಾರು 510 ಮನೆಗಳ 2487 ಮಂದಿಯನ್ನು ಪ್ರವಾಹ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ಶನಿವಾರ ಅವರಲ್ಲಿ 52 ಮನೆಗಳ 253 ಮಂದಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ತಾಲೂಕಿನ ಬಿ.ಮೂಡಾ ಗ್ರಾಮದ ಚಂಡ್ತಿಮಾರ್‌, ಜಕ್ರಿಬೆಟ್ಟು, ಕೆಳಗಿನಪೇಟೆ, ಬಡ್ಡಕಟ್ಟೆ, ಕಬ್ಬಿನಹಿತ್ಲು, ಪಾಣೆಮಂಗಳೂರಿನ ಆಲಡ್ಕಪಡ್ಪು, ತ್ಯಾಗರಾಜ ರೋಡ್‌, ಜೈನರಪೇಟೆ, ಗುಡ್ಡೆಅಂಗಡಿ, ಬೋಗೋಡಿ, ಮೆಲ್ಕಾರ್‌, ಆಲಡ್ಕ, ಬಂಗ್ಲೆಗುಡ್ಡೆ, ಸಜೀಪನಡುವಿನ ಬಲಗುತ್ತು, ಬೊಳ್ಳಮೆ, ತುಂಬೆಯ ಹೊಳೆಬದಿ, ವಳವೂರು, ನರಿಕೊಂಬಿನ ಪಿತ್ತಿಲಗುಡ್ಡೆ, ಪಾಣೆಮಂಗಳೂರು, ಜೆಂಜಿಪಾದೆ, ಕಲ್ಯಾರು, ಜೈನರಪೇಟೆ, ಸಜೀಪಮುನ್ನೂರು ಗ್ರಾಮದ ನಂದಾವರ, ಕೊಪ್ಪಳ, ಗುಂಪುಮನೆ, ಸಲಾಫಿನಗರ, ಆಲಾಡಿ, ಮಲಾಯಿಬೆಟ್ಟು, ನಾಗನವಲಚ್ಚಿಲ್‌, ಸಜೀಪಮೂಡದ ಕಾರಾಜೆ, ಪುದುವಿನ ಕುಂಪನಮಜಲು, ಅಮ್ಮೆಮಾರ್‌, ಬರಿಮಾರಿನ ಕಡವಿನ ಬಳಿ, ಕಡೇಶ್ವಾಲ್ಯದ ದೇವಸ್ಥಾನ ಪ್ರದೇಶ, ಬಿ.ಮೂಡಾದ ಬಸ್ತಿಪಡ್ಪು, ಕಂಚಿಗಾರಪೇಟೆ, ಭಂಡಾರಿಬೆಟ್ಟು, ತಲಪಾಡಿ, ಪರಾರಿ, ನಂದರಬೆಟ್ಟು, ಗೂಡಿನಬಳಿ, ಪೂಂಜರಕೋಡಿ, ನಾವೂರಿನ ಕಡವಿನ ಬಾಗಿಲು, ಅಮ್ಟಾಡಿಯ ಭಂಡಾರಿಹಿತ್ಲು, ಮಣಿನಾಲ್ಕೂರಿನ ತಿಂಗಳಾಡಿ, ಅಜಿಲಮೊಗರು, ಪಡಾಯಿಮಜಲು, ಸರಪಾಡಿಯ ಕಡವಿನ ಬಳಿ ಪ್ರವಾಹ ಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ.
ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ತಂಡ: ದ.ಕ.ದಲ್ಲಿ ಪ್ರಥಮ ಪ್ರಯೋಗ; ಸರಕಾರದಿಂದ ತರಬೇತಿ

ಭಾರತೀಯ ಹವಾಮಾನ ಇಲಾಖೆ ಈಗಾಗಲೇ ರೆಡ್‌ ಅಲರ್ಟ್‌ ಘೋಷಣೆ ಮುಂದುವರಿಸಿದೆ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸೋಮವಾರ ಬೆಳಗ್ಗೆ ತನಕ ಮಳೆಯ ಪ್ರಮಾಣ ಜಾಸ್ತಿಯಾಗಲಿದೆ. ಭಾನುವಾರ ಬೆಳಗ್ಗೆಯಿಂದ ಒಂದೇ ಸವನೆ ಸುರಿದ ಮಳೆ ಮಧ್ಯಾಹ್ನ ಹೊತ್ತಿಗೆ ಕೊಂಚ ವಿರಾಮ ನೀಡಿದರೂ ಸಂಜೆ ಮತ್ತೆ ಸುರಿಯಲಾರಂಭಿಸಿದೆ.

ಕಡಲ್ಕೊರೆತ ತೀವ್ರ
ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಮೀನಕಳಿಯ, ಚಿತ್ರಾಪುರದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಸೋಮೇಶ್ವರ ಬಟ್ಟಂಪಾಡಿ ಸಂಪರ್ಕ ರಸ್ತೆ ಕಡಲು ಪಾಲಾದ ಪರಿಣಾಮ ಕಾಲು ದಾರಿ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ ಹೆಚ್ಚಾಗಿದೆ. ಈ ಕಾರಣಕ್ಕೆ ಸೋಮವಾರ ಪ್ರತ್ಯೇಕ ಕಾಲು ದಾರಿ ಯೋಜನೆ ಜತೆಗೆ ಸೋಮೇಶ್ವರ ಕಡಲ್ಕೊರೆತ ಜಾಗಕ್ಕೆ ಕಲ್ಲು ಹಾಕುವ ಕಾರ್ಯ ಸಾಗಲಿದೆ. ಸೋಮೇಶ್ವರ ಭೋವಿ ಶಾಲೆಯಲ್ಲಿ ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳೀಯರ ಸ್ಥಳಾಂತರ ಮಾಡುವ ಕಾರ್ಯ ಮುಂದುವರಿದಿದೆ.
ಕರಾವಳಿಯಲ್ಲಿ ಜಲಾಘಾತ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; 200ಕ್ಕೂ ಹೆಚ್ಚು ಮಂದಿ ಸ್ಥಳಾಂತರ

ಹೊಯಿಗೆಬಜಾರ್‌ನಲ್ಲಿ ಕಡಲ್ಕೊರೆತ ತೀವ್ರವಾದ ಪರಿಣಾಮ ಶಿಳ್ಳೆ ಜನಾಂಗದ ಮೀನುಗಾರರ 15 ಕುಟುಂಬಗಳ 40 ಮಂದಿಯನ್ನು ನಗರದ ಪುರಭವನಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರ ನಿರ್ಮಿಸಲಾಗಿದೆ. ಭಾನುವಾರ 180 ಮಂದಿಯ ಸ್ಥಳಾಂತರ ಜತೆಗೆ 120 ಮಂದಿಯನ್ನು ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ನಾಲ್ಕು ದಿನಗಳಿಂದ 300ಕ್ಕೂ ಅಧಿಕ ಮಂದಿ ಸ್ಥಳಾಂತರಗೊಳ್ಳುವ ಜತೆಗೆ ಮಂಗಳೂರು ತಾಲೂಕಿನ 8 ಕಾಳಜಿ ಕೇಂದ್ರದಲ್ಲಿ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿದ ಮನೆಗಳ ಹಾನಿ
ಮಂಗಳೂರು ತಾಲೂಕಿನ ತೋಕೂರು, ಮಂಜನಾಡಿ, ಕಿಲಿಂಜಾರು, ಕದ್ರಿ, ಅತ್ತಾವರ, ಉಳ್ಳಾಲ, ಪೆರ್ಮನ್ನೂರು, ಮುನ್ನೂರಿನಲ್ಲಿ ಭಾನುವಾರ 15ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ, 10ಕ್ಕೂ ಹೆಚ್ಚು ಆವರಣ ಗೋಡೆ ಕುಸಿದಿರುವ ವರದಿಯಾಗಿದೆ.

ಮಳೆಯಿಂದಾಗಿ ಇಡೀ ಜಿಲ್ಲೆಯೇ ಡಲ್‌ ಆಗಿತ್ತು. ವಿಶೇಷವಾಗಿ ಮಂಗಳೂರಿನಲ್ಲಿ ವಾಹನ ಸಂಚಾರ ವಿರಳವಾಗಿತ್ತು. ನಗರದ ಬಹುತೇಕ ಭಾಗದಲ್ಲಿ ಮಳೆ ನೀರಿನ ಸಮಸ್ಯೆಯಾಗಿತ್ತು. ಪಡೀಲ್‌ ಅಂಡರ್‌ಪಾಸ್‌ನ ಎರಡು ಬದಿಯಲ್ಲೂ ನೀರು ನಿಂತು ಸಮಸ್ಯೆ ಸೃಷ್ಟಿ ಮಾಡಿತ್ತು. ಪಂಪ್‌ವೆಲ್‌ ಮೇಲ್ಸೇತುವೆಯ ಕೆಳಭಾಗ, ಜ್ಯೋತಿ ಬಸ್‌ ನಿಲ್ದಾಣ, ಕೆಎಸ್‌ಆರ್‌ ರಾವ್‌ ರಸ್ತೆ, ಶರವು ದೇವಸ್ಥಾನ ಬದಿಯ ರಸ್ತೆ, ಅಳಿಕೆ, ಕುದ್ರೋಳಿ, ಉರ್ವ ಸ್ಟೋರ್‌, ಕೊಟ್ಟಾರಚೌಕಿ, ಕೂಳೂರು ಕಡೆಯಲ್ಲಿ ಮಳೆ ನೀರು ಸರಿಯಾಗಿ ಹೋಗಲು ದಾರಿ ಇಲ್ಲದೇ ರಸ್ತೆ, ಮನೆಯ ಮುಂಭಾಗದಲ್ಲಿ ಹರಿಯುವ ದೃಶ್ಯ ಭಾನುವಾರ ಕಾಣಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ