ಆ್ಯಪ್ನಗರ

ಕಾರು ಮಾರಾಟ ಪ್ರಕರಣ: ಇಬ್ಬರು ಅಮಾನತು, ಪ್ರಕರಣ ಬಯಲಿಗೆಳೆದಿದ್ದ ವಿಕ ವರದಿ

ಡಿಸಿಪಿಯವರು 35 ಪುಟಗಳ ಮಧ್ಯಂತರ ವರದಿ ಸಲ್ಲಿಸಿದ್ದು, ಅದರಲ್ಲಿ ನಾರ್ಕೊಟಿಕ್ ಎಂಡ್ ಎಕಾನಾಮಿಕ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರಾಮಕೃಷ್ಣ, ನಗರ ಅಪರಾಧ ಪತ್ತೆದಳದ ಹಿಂದಿನ ಎಸ್‌ಐ ಕಬ್ಬಳ್‌ರಾಜ್, ಸಿಸಿಬಿ ಟೀಮ್‌ನ ಆಶಿತ್, ರಾಜ ಅವರ ಹೆಸರನ್ನು ಉಲ್ಲೇಖ ಮಾಡಿ ವರದಿ ನೀಡಿದ್ದರು.

Vijaya Karnataka Web 27 Feb 2021, 4:52 pm
ಮಂಗಳೂರು: ವಂಚನಾ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ ಆರೋಪದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ಕಳಂಕಿತ ನಾಲ್ವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಮಾಡಿದ್ದಾರೆ.
Vijaya Karnataka Web ಅಧಿಕಾರಿಗಳು ಅಮಾನತು
ಅಧಿಕಾರಿಗಳು ಅಮಾನತು


ನಾರ್ಕೊಟಿಕ್ ಅಂಡ್ ಎಕಾನಮಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್‌ಬಿ ಎಸ್‌ಐ ಕಬ್ಬಾಳ್‌ರಾಜ್ ಅಮಾನತಿಗೊಳಗಾದವರು.

ಪ್ರಕರಣ ವಿವರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲಿಕಾ ಕನ್‌ಸ್ಟ್ರಕ್ಷನ್ ಸಂಸ್ಥೆ ನಡೆಸಿದ 30 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ತನಿಖೆಗಾಗಿ ಸಿಐಡಿಗೆ ಹಸ್ತಾಂತರವಾಗಿದೆ. ಕೇರಳ ಮೂಲದ ಟೋಮಿ ಮ್ಯಾಥ್ಯು ಮತ್ತು ಟಿ. ರಾಜನ್ ಸೇರಿ ಕಬಕದಲ್ಲಿ ಎಲಿಯ ಕನ್‌ಸ್ಟ್ರಕ್ಷನ್ ಹೆಸರಿನಲ್ಲಿ ಹಣ ದ್ವಿಗುಣಗೊಳಿಸುವ ಮನಿ ಡಬ್ಲಿಂಗ್ ಜಾಲ ನಡೆಸುತ್ತಿದ್ದರು.

ಈ ಸಂಸ್ಥೆ ಮಂಗಳೂರಿನಲ್ಲಿ ಕಚೇರಿ ತೆರೆದಿದ್ದು, ಶಕ್ತಿನಗರದ ಮಹಿಳೆಗೆ 4 ಲಕ್ಷ ರೂ. ವಂಚನೆ ಮಾಡಿದ್ದರು. ಈ ಬಗ್ಗೆ ಮಹಿಳೆ ಅ.16ರಂದು ನಗರದಲ್ಲಿ ದೂರು ನೀಡಿದ್ದು, ನಾರ್ಕೊಟಿಕ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ ಮಧ್ಯಪ್ರದೇಶಿಸಿದ ನಗರದ ಅಪರಾಧ ಪತ್ತೆದಳದ ಪೊಲೀಸರು ಕಾರು ಡೀಲ್ ನಡೆಸಿದ್ದಾರೆ.

ಇದರಲ್ಲಿ ಹಿರಿಯ ಅಧಿಕಾರಿಯೂ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದುದರಿಂದ ಹಣ ಡಬ್ಲಿಂಗ್ ಕೇಸ್ ಸಿಐಡಿ ತನಿಖೆಗೆ ತೆಗೆದುಕೊಂಡಿದ್ದು, ಕಾರು ಮಾರಾಟ ತನಿಖೆಯೂ ಈ ಪ್ರಕರಣದಡಿಯೇ ಬರಲಿದೆ.

ಬಯಲಿಗೆಳೆದ ವಿಕ ವರದಿ
ವಿಜಯ ಕರ್ನಾಟಕ ಫೆ.2ರಂದು ‘ಪೊಲೀಸ್ ವಶದಲ್ಲಿದ್ದ ಕಾರು ಮಾಯ!’ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಮಾಡಿತ್ತು. ಇದಾದ ಬಳಿಕ ನಗರ ಸಿಸಿಬಿ ತಂಡದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ವಿಕ ಸರಣಿ ವರದಿ ಮಾಡಿತ್ತು.

ಮಂಗಳೂರು


ಮಾಧ್ಯಮದ ವರದಿಯನ್ನು ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ ಅವರು ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್‌ಗೆ ಆದೇಶ ಮಾಡಿದ್ದರು. ಮಂಗಳೂರು ಕಮಿಷನರ್ ಅವರು ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಅವರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.

ಅದರಂತೆ ಡಿಸಿಪಿಯವರು 35 ಪುಟಗಳ ಮಧ್ಯಂತರ ವರದಿ ಸಲ್ಲಿಸಿದ್ದು, ಅದರಲ್ಲಿ ನಾರ್ಕೊಟಿಕ್ ಎಂಡ್ ಎಕಾನಾಮಿಕ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರಾಮಕೃಷ್ಣ, ನಗರ ಅಪರಾಧ ಪತ್ತೆದಳದ ಹಿಂದಿನ ಎಸ್‌ಐ ಕಬ್ಬಳ್‌ರಾಜ್, ಸಿಸಿಬಿ ಟೀಮ್‌ನ ಆಶಿತ್, ರಾಜ ಅವರ ಹೆಸರನ್ನು ಉಲ್ಲೇಖ ಮಾಡಿ ವರದಿ ನೀಡಿದ್ದರು.

ಈ ವರದಿ ಆಧಾರದ ಮೇಲೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ರಾಜ್ಯ ಸಿಐಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿಐಡಿ ಇನ್‌ಸ್ಪೆಕ್ಟರ್ ಚಂದ್ರಯ್ಯ ನೇತೃತ್ವದ ತಂಡ ನಗರಕ್ಕೆ ಆಗಮಿಸಿ ವಿಚಾರಣೆ ನಡೆಸಿದೆ. ಈ ಮಧ್ಯೆ ಪ್ರಕರಣದ ಆರೋಪಿಗಳಾದ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಎಸ್‌ಐ ಕಬ್ಬಾಳ್‌ರಾಜ್ ಎಂಬವರನ್ನು ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ