ಆ್ಯಪ್ನಗರ

ಮಂಗಳಾ ಕ್ರೀಡಾಂಗಣ ಅಭಿವೃದ್ಧಿ: ಸಚಿವ ಖಾನ್‌

ಮಂಗಳಾ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ, ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಜಿಲ್ಲೆಯ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಮತ್ತು ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು.

Vijaya Karnataka 6 Feb 2019, 4:01 pm
ಮಂಗಳೂರು : ಮಂಗಳಾ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಿ, ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಜಿಲ್ಲೆಯ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಮತ್ತು ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು.
Vijaya Karnataka Web improve mangala kreedangana
ಮಂಗಳಾ ಕ್ರೀಡಾಂಗಣ ಅಭಿವೃದ್ಧಿ: ಸಚಿವ ಖಾನ್‌


ನಗರದ ಮಂಗಳಾ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರಿನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದಾರೆ. ಜತೆಗೆ ಕ್ರೀಡಾ ಸಾಧನೆಗೆ ತಯಾರಾಗಿರುವ ವಿದ್ಯಾರ್ಥಿ ಸಮೂಹವಿದೆ. ಇವರೆಲ್ಲರಿಗೂ ಬೇಕಾದ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸೌಲಭ್ಯ ಒದಗಿಸಲು ಬದ್ಧ. ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಮಂಗಳೂರಿನ ಕರಾವಳಿ ಉತ್ಸವ ಮೈದಾನವನ್ನು ಕ್ರೀಡೆಗಾಗಿ ಮಾತ್ರ ಬಳಸುವಂತೆ ಮನವಿಗಳು ಬಂದಿವೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಈಜುಕೊಳ, ವಿವಿಧ ಕ್ರೀಡಾಂಗಣಗಳ ನಿರ್ಮಾಣಕ್ಕೆ ಕ್ರೀಡಾ ಇಲಾಖೆಗೆ ಭೂಮಿ ಒದಗಿಸುವಂತೆ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಸ್‌ ನಿಲ್ದಾಣ ಪಡೀಲ್‌ ಮತ್ತು ಕೂಳೂರಿಗೆ ಸ್ಥಳಾಂತರವಾಗಲಿದೆ. ಆ ಬಳಿಕ ಹಂಪನಕಟ್ಟೆ ಪ್ರದೇಶದಲ್ಲಿ ವಸ್ತುಪ್ರದರ್ಶನಕ್ಕೆ ಬೇಕಾದ ಜಾಗ ಲಭ್ಯವಾಗಲಿದೆ. ಪ್ರಸ್ತುತ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವ ಮತ್ತು ವಸ್ತುಪ್ರದರ್ಶನ ಸಹಿತ ಎಲ್ಲ ಕಾರ್ಯಕ್ರಮಗಳನ್ನು ಹಂಪನಕಟ್ಟೆಗೆ ಸ್ಥಳಾಂತರಿಸಲಾಗುವುದು. ಆ ಬಳಿಕ ಕರಾವಳಿ ಉತ್ಸವ ಮೈದಾನ ಸಂಪೂರ್ಣವಾಗಿ ಕ್ರೀಡಾ ಚಟುವಟಿಕೆಗೆ ಮೀಸಲಾಗಲಿದೆ. ಕಬಡ್ಡಿ, ಅಥ್ಲೆಟಿಕ್ಸ್‌ ಸಹಿತ ಎಲ್ಲ ಕ್ರೀಡಾಪಟುಗಳು ಈ ಮೈದಾನವನ್ನು ಬಳಸಿಕೊಳ್ಳಬಹುದು ಎಂದರು.

ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿಸೋಜ ಮಾತನಾಡಿ, ಮಂಗಳಾ ಕ್ರೀಡಾಂಗಣದಲ್ಲಿ ಮೂಲಸೌಲಭ್ಯ ಕೊರತೆಯಿದ್ದು, ಸರಕಾರ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು. ಸರಕಾರ ಮತ್ತು ಜಿಲ್ಲಾ ಪಂಚಾಯತ್‌ನಿಂದ ಕ್ರೀಡಾ ಇಲಾಖೆಗೆ ಬಾಕಿ ಇರುವ ಅನುದಾನವನ್ನು ಶೀಘ್ರ ಒದಗಿಸಬೇಕು ಎಂದು ಸಚಿವರಿಗೆ ವಿನಂತಿಸಿದರು.

ಮಂಗಳಾ ಕ್ರೀಡಾಂಗಣದ ಅಭಿವೃದ್ಧಿ ಹಾಗೂ ನಗರದದಲ್ಲಿ ವಿವಿಧ ಕ್ರೀಡಾಂಗಣಕ್ಕೆ ಮೂಲಸೌಲಭ್ಯ ಒದಗಿಸಲು 3.35 ಕೋಟಿ ರೂ. ಒದಗಿಸಬೇಕು. ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣ ದುರಸ್ತಿಗೆ 14.75 ಲಕ್ಷ ರೂ. ಒದಗಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಮನವಿ ಸಲ್ಲಿಸಿದಾಗ, ಈ ಬಗ್ಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ, ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಸಚಿವರು ತಿಳಿಸಿದರು.

ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನಾ, ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳಾದ ಮಂಜುನಾಥ ಭಂಡಾರಿ, ಪುರುಷೋತ್ತಮ ಪೂಜಾರಿ, ಧರ್ಮೇಂದ್ರ, ಯು.ಟಿ.ಇಫ್ತಿಕರ್‌, ಗೌರವ್‌ ಹೆಗ್ಡೆ, ಡಿ.ಎಂ.ಅಸ್ಲಂ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ