ಆ್ಯಪ್ನಗರ

ಕೃಷಿ ಭೂಮಿ ಮಧ್ಯೆ ರೈಲ್ವೆಗೆ ವಿದ್ಯುತ್‌ ಸರಬರಾಜು ಯೋಜನೆ: ಕೆಂಜಾರು ಗ್ರಾಮಸ್ಥರ ವಿರೋಧ

ಜೋಕಟ್ಟೆ ರೈಲ್ವೆ ಸಬ್‌ಸ್ಟೇಶನ್‌ಗೆ ಎಂಎಸ್‌ಇಝಡ್‌ ಪವರ್‌ ಸಬ್‌ಸ್ಟೇಶನ್‌ನಿಂದ ವಿದ್ಯುತ್‌ ಸರಬರಾಜು ಮಾಡುವ ನಿಟ್ಟಿನಲ್ಲಿ ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಜಾರು ಗ್ರಾಮದ ಖಾಸಗಿ ಕೃಷಿ ಭೂಮಿ ಮಧ್ಯೆ 110 ಕೆವಿ ಹೈಟೆನ್ಶನ್‌ ಲೈನ್‌ ಯೋಜನೆ ರೂಪಿಸಲಾಗಿದ್ದು ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಬುಧವಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

Vijaya Karnataka 21 Jun 2019, 3:58 pm
ಬಜಪೆ : ಜೋಕಟ್ಟೆ ರೈಲ್ವೆ ಸಬ್‌ಸ್ಟೇಶನ್‌ಗೆ ಎಂಎಸ್‌ಇಝಡ್‌ ಪವರ್‌ ಸಬ್‌ಸ್ಟೇಶನ್‌ನಿಂದ ವಿದ್ಯುತ್‌ ಸರಬರಾಜು ಮಾಡುವ ನಿಟ್ಟಿನಲ್ಲಿ ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಜಾರು ಗ್ರಾಮದ ಖಾಸಗಿ ಕೃಷಿ ಭೂಮಿ ಮಧ್ಯೆ 110 ಕೆವಿ ಹೈಟೆನ್ಶನ್‌ ಲೈನ್‌ ಯೋಜನೆ ರೂಪಿಸಲಾಗಿದ್ದು ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಬುಧವಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
Vijaya Karnataka Web kenjaru people opposes electric line for railway in the middle of agriculture field
ಕೃಷಿ ಭೂಮಿ ಮಧ್ಯೆ ರೈಲ್ವೆಗೆ ವಿದ್ಯುತ್‌ ಸರಬರಾಜು ಯೋಜನೆ: ಕೆಂಜಾರು ಗ್ರಾಮಸ್ಥರ ವಿರೋಧ


ಯೋಜನೆ ಸಂಪೂರ್ಣವಾಗಿ ಖಾಸಗಿ ಕೃಷಿಭೂಮಿಯ ಮಧ್ಯೆ ಸಾಗಲಿದ್ದು ಸ್ಥಳೀಯರು ಕೃಷಿಭೂಮಿ ಕಳೆದುಕೊಳ್ಳುವುದು ಮಾತ್ರವಲ್ಲದೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಿದರ್ಶನ ಸಹಿತ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದು ಸಹಾಯಕ ಆಯುಕ್ತರಿಗೂ ಮನವರಿಕೆ ಮಾಡಲಾಗಿತ್ತು.

ಗ್ರಾಮಸ್ಥರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಲು ಸೂಚನೆ: ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮಸ್ಥರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಯೋಜನೆ ಅನುಷ್ಠಾನಗೊಳಿಸುವಂತೆ ಕೆಪಿಟಿಸಿಎಲ್‌ ಅಧಿಕಾರಿಗೆ ಸೂಚಿಸಿದ್ದಾರೆ.

ಪ್ರಸ್ತಾವಿತ ಯೋಜನೆ: ಎಂಎಸ್‌ಇಝಡ್‌ ಸಬ್‌ಸ್ಟೇಶನ್‌ನಿಂದ ಜೋಕಟ್ಟೆ ರೈಲ್ವೆ ಸಬ್‌ಸ್ಟೇಶನ್‌ವರೆಗೆ 3 ಕಿ.ಮೀ. ಉದ್ದದ 110 ಕೆವಿ ಹೈಟೆನ್ಶನ್‌ ಲೈನ್‌ 21 ಕಡೆಗಳಲ್ಲಿ ಟವರ್‌ಗಳ ನಿರ್ಮಾಣ ಸಹಿತ ಯೋಜನೆಯ ಸರ್ವೇ ಕಾರ್ಯ ನಡೆಸಲಾಗಿದ್ದು ರೈಲ್ವೆ ಇಲಾಖೆ ಈಗಾಗಲೇ ಕೆಪಿಟಿಸಿಎಲ್‌ಗೆ ಯೋಜನಾ ವೆಚ್ಚ 7 ಕೋಟಿ ರೂ. ಡಿಪಾಸಿಟ್‌ ಮಾಡಿದ್ದು ಒಪ್ಪಂದದ ಪ್ರಕಾರ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು.

ಮುಖ್ಯಮಂತ್ರಿ, ಇಂಧನ ಸಚಿವರಿಗೂ ಮನವಿ: ಈ ಬಗ್ಗೆ ಇಂಧನ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಜಿ.ಪಂ., ತಾ.ಪಂ, ಗ್ರಾ.ಪಂ.ಗಳವರಿಗೂ ಮನವಿ ನೀಡಲಾಗಿದ್ದು ಮನವಿಗೆ ಸ್ಪಂದಿಸಿದ ದ.ಕ. ಜಿಲ್ಲಾಧಿಕಾರಿಗಳು ಕೃಷಿಭೂಮಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಇದ್ದಲ್ಲಿ ಸೂಚಿಸುವಂತೆ ಗ್ರಾಮಸ್ಥರ ನಿಯೋಗಕ್ಕೆ ತಿಳಿಸಿರುವ ಹಿನ್ನಲೆಯಲ್ಲಿ ಜೋಕಟ್ಟೆ ಬಳಿ ಎಂಎಸ್‌ಇಝಡ್‌ ಸ್ವಾಧೀನದ ಕಾರಿಡಾರ್‌ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳಿಸುವಂತೆ ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.

ದಕ್ಷಿಣವಲಯ ರೈಲ್ವೆಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಕೆ.ಎಂ. ಸಾಜಿ , ಬಹುಸಂಖ್ಯೆಯಲ್ಲಿ ಗ್ರಾಮಸ್ಥರು, ಈ ಭಾಗದ ಜನಪ್ರತಿನಿಧಿಗಳು, ಧಾರ್ಮಿಕ, ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಈಗಾಗಲೇ ಇರುವ ಹೈಟೆನ್ಶನ್‌ ಲೈನ್‌ನ ಕೇಬಲ್‌ಗಳು ಬಹಳ ತಗ್ಗಿನಲ್ಲಿದ್ದು ಮಳೆಗಾಲದಲ್ಲಿ ಕೊಡೆ ಹಿಡಿದು ಹತ್ತಿರದಲ್ಲಿ ನಡೆದಾಡಿದರೆ ಸೆಳೆಯುತ್ತದೆ. ಈಗಾಗಲೇ ಪ್ರಾಣಾಪಾಯಗಳೂ ಸಾಕಷ್ಟು ಸಂಭವಿಸಿದೆ. ಅಪಾಯಕ್ಕೆ ತುತ್ತಾಗಿ ಜೀವನ್ಮರಣ ಸ್ಥಿತಿಯಲ್ಲಿರುವ ಉದಾಹರಣೆಗಳೂ ಇದೆ ಧಾರ್ಮಿಕ ಕೇಂದ್ರ ತಾರಬರಿ ದೈವ ಸಾನಿಧ್ಯ ಕ್ಷೇತ್ರದ ಕಾರ್ಯಚಟುವಟಿಕೆಗಳಿಗೂ ಮಾರಕ ಪರಿಣಾಮ ಬೀರಲಿದ್ದು ಜೋಕಟ್ಟೆ ಕಾರಿಡಾರ್‌ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದರೆ ಜನಜೀವನಕ್ಕೆ ತೊಂದರೆ ಇಲ್ಲ. ಕೃಷಿ ಭೂಮಿಯೂ ಉಳಿಯುತ್ತದೆ. ಒಂದು ವೇಳೆ ಬಲಾತ್ಕಾರಕ್ಕೆ ಮುಂದಾದರೆ ಉಂಟಾಗುವ ವ್ಯತಿರಿಕ್ತ ಘಟನೆಗಳು, ಪರಿಣಾಮಗಳಿಗೆ ಅಧಿಕಾರಿಗಳೇ ಜವಾಬ್ದಾರಿ.

-ಪ್ರಕಾಶ್‌ ಶೆಟ್ಟಿ ಸ್ಥಳೀಯರು


ಗ್ರಾಮಸ್ಥರ ವಿರೋಧಗಳು ಹಾಗೂ ಪರ್ಯಾಯ ವ್ಯವಸ್ಥೆ ಬಗ್ಗೆ ಕೆಪಿಟಿಸಿಎಲ್‌ ಸರ್ಕಲ್‌ ಅಧಿಕಾರಿಗಳ ಮಟ್ಟದಲ್ಲಿ ಸಮಾಲೋಚನೆ ನಡೆಸಿದ ಬಳಿಕವಷ್ಟೇ, ಮುಂದಿನ ಕ್ರಮ. ಗ್ರಾಮಸ್ಥರಿಗೆ, ಕೃಷಿ ಜಾಗಕ್ಕೆ ತೊಂದರೆ ಆಗದಂತೆ ಯೋಜನೆ ಕಾರ‍್ಯಗತಗೊಳಿಸುವಂತೆ ಸಹಾಯಕ ಆಯುಕ್ತರು ಸೂಚಿಸಿದ್ದಾರೆ. ಜೋಕಟ್ಟೆ ಕಾರಿಡಾರ್‌ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಬಹಳಷ್ಟು ತಾಂತ್ರಿಕ ಅಡಚಣೆಗಳಿವೆ. ತಜ್ಞರ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಗಂಗಾಧರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆಪಿಟಿಸಿಎಲ್‌ ಕಾವೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ