ಆ್ಯಪ್ನಗರ

ಹೆಣ್ಣು ಮತ್ತು ದೇವರ ಮಧ್ಯೆ ಅಡ್ಡಗೋಡೆ ಬೇಕೇ?

ಇಸ್ಲಾಂನಲ್ಲಿ ತ್ರಿವಳಿ ತಲಾಖ್‌ ಎಂಬುದಿಲ್ಲ, ವಿಚ್ಛೇದನ ಕೊಡಲು ನಿರ್ದಿಷ್ಟ ಅವಧಿಯ ನಿಯಮವಿದೆ. ತಲಾಖ್‌ ದುರುಪಯೋಗದಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಕೋರ್ಟ್‌ಗೆ ಹೋಗಿದ್ದರಿಂದ ಕಾನೂನು ರಚಿಸಬೇಕಾಗಿ ಬಂತು.

Vijaya Karnataka Web 5 Nov 2018, 8:03 am
ಮಂಗಳೂರು: ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಬಾರದು ಎಂಬ ಅಲಿಖಿತ ಸಂಪ್ರದಾಯವನ್ನು ಗೌರವಿಸಬೇಕು ಎಂಬ ವಾದ ಒಂದೆಡೆ, ನಾನು ಮತ್ತು ಅಯ್ಯಪ್ಪ ನ ಮಧ್ಯೆ ಅಡ್ಡ ಗೋಡೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯೊಂದಿಗೆ ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ಸ್ವಾರಸ್ಯಕರ ಚರ್ಚೆ ಭಾನುವಾರ ನಡೆಯಿತು.
Vijaya Karnataka Web MNG LIT Fest 2


'ಮಹಿಳೆ ಮತ್ತು ಧರ್ಮ- ತ್ರಿವಳಿ ತಲಾಖ್‌ನಿಂದ ಶಬರಿಮಲೆ ತನಕ' ಎಂಬ ಗೋಷ್ಠಿಯಲ್ಲಿ ಯೋಗಿನಿ ಶಾಂಭವಿ ಛೋಪ್ರಾ, ಪ್ರೀತಿ ನಾಗರಾಜ್‌ ಮತ್ತು ಪದ್ಮಾ ರಾಣಿ ವಿಚಾರ ಮಂಡಿಸಿದರು. ಮಾಳವಿಕಾ ಅವಿನಾಶ್‌ ಸಮನ್ವಯಕಾರರಾಗಿದ್ದರು.

'ನಾನು ದೇವರ ಸೃಷ್ಟಿ. ಆತ ಸರ್ವಶಕ್ತ. ನನಗೆ ದೇವರನ್ನು ಕಾಣಬೇಕು. ಆತ ನಮ್ಮ ನಡುವೆ ತಾರತಮ್ಯ ಮಾಡಿಲ್ಲ. ಮಹಿಳೆಯಾಗಿ ಹುಟ್ಟಿದ್ದು ನನ್ನ ತಪ್ಪಲ್ಲ. ನನ್ನ ಮತ್ತು ದೇವರ ಮಧ್ಯೆ ಬೇಲಿ ಏಕೆ ಹಾಕುತ್ತೀರಿ? ಸಂಪ್ರದಾಯ, ಪಾವಿತ್ರ್ಯ ಕಾಪಾಡಲು ಮಹಿಳೆಗೆ ಗೊತ್ತಿದೆ ಎನ್ನುವ ಮೂಲಕ ಕೋರ್ಟ್‌ ತೀರ್ಪು ಸಮರ್ಥಿಸುವಂತೆ ಪ್ರೀತಿ ನಾಗರಾಜ್‌ ವಾದಿಸಿದರು.

'ಎಲ್ಲ ಕಡೆಯಂತೆ ಶಬರಿಮಲೆಯಲ್ಲೂ ಸ್ಥಳೀಯ ಸಂಪ್ರದಾಯ ಎಂಬುದೊಂದಿದೆ. ಅದನ್ನು ಗೌರವಿಸಬೇಕಿದೆ. ಸಂಪ್ರದಾಯವು ನಮಗೆ ಎಲ್ಲಿಗೆ ಹೋಗಬೇಕು, ಹೋಗಬಾರದು ಎಂಬುದನ್ನು, ವಯಸ್ಸಿನ ಮಿತಿಯನ್ನೂ ಕಲಿಸಿದೆ. ತೀರಾ ಖಾಸಗಿ, ವೈಯಕ್ತಿಕ ವಿಚಾರದಲ್ಲಿ ಕೋರ್ಟ್‌ ತೀರ್ಪು ಕೊಡುವುದು ಸಮಂಜಸವಲ್ಲ. ನಿಜವಾದ ದೇವರ ಭಕ್ತರು ಶಬರಿಮಲೆ ಪ್ರವೇಶಿಸಲಾರರು' ಎಂದು ಪದ್ಮಾ ರಾಣಿ ಹೇಳಿದರು.

ಯೋಗಿನಿ ಶಾಂಭವಿ ಛೋಪ್ರಾ ಮಾತನಾಡಿ, ಪಾಶ್ಚಿಮಾತ್ಯ ಚಿಂತನೆಗಳು ಭಾರತದ ಮೇಲೆ ಪ್ರಭಾವ ಬೀರುವ ಮೂಲಕ ಶಬರಿಮಲೆ ವಿವಾದ ಸೃಷ್ಟಿಯಾಗಿದೆ. ಬೇರೆ ಧರ್ಮಗಳು ತಮ್ಮ ನಂಬಿಕೆಗಳನ್ನು ಗೌರವಿಸಿದಂತೆ, ಹಿಂದುಗಳೂ ಸಂಪ್ರದಾಯಕ್ಕೆ ಬೆಲೆ ಕೊಡಬೇಕು. ನಮ್ಮ ಧರ್ಮದ ಆಚರಣೆಗಳಲ್ಲಿ ಸುಂದರ ಯುಕ್ತಿ ಇದೆ ಎಂದರು.

ತ್ರಿವಳಿ ತಲಾಖ್‌:
ತ್ರಿವಳಿ ತಲಾಖ್‌ ನಿಷೇಧಿಸುವ ಮೂಲಕ ಅಲ್ಪಸಂಖ್ಯಾತರ ಮೇಲೆ ಪ್ರಭುತ್ವದ ಹೇರಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪದ್ಮಾ ರಾಣಿ ಉತ್ತರಿಸಿ, ಇಸ್ಲಾಂನಲ್ಲಿ ತ್ರಿವಳಿ ತಲಾಖ್‌ ಎಂಬುದಿಲ್ಲ, ವಿಚ್ಛೇದನ ಕೊಡಲು ನಿರ್ದಿಷ್ಟ ಅವಧಿಯ ನಿಯಮವಿದೆ. ತಲಾಖ್‌ ದುರುಪಯೋಗದಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಕೋರ್ಟ್‌ಗೆ ಹೋಗಿದ್ದರಿಂದ ಕಾನೂನು ರಚಿಸಬೇಕಾಗಿ ಬಂತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ