ಆ್ಯಪ್ನಗರ

ಮಂಗಳೂರು ಬಾಂಬ್ ಪ್ರಕರಣ: ಗುಡ್ಡ ಅಗೆದು ಇಲಿ ಹಿಡಿದಂತಾಯಿತೇ ?

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದ ಬಾಂಬ್‌ ರಾಜ್ಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಪ್ರಕರಣದ ಕುರಿತಾಗಿ ಹಲವು ಅನುಮಾನಗಳು, ಊಹಾಪೋಹಗಳು, ರಾಜಕಾರಣಿಗಳ ಬೀಸು ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದ್ದವು. ಸದ್ಯ ಬಾಂಬರ್ ಎನ್ನಲಾಗಿರುವ ವ್ಯಕ್ತಿ ಆದಿತ್ಯ ರಾವ್ ಪತ್ತೆಯಾಗಿದ್ದು ಪೊಲೀಸರ ವಶದಲ್ಲಿದ್ದಾನೆ.

Vijaya Karnataka Web 22 Jan 2020, 11:58 am
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಸುದ್ದಿ ಹೊರಬರುತ್ತಿದ್ದಂತೆ ಕೇವಲ ಮಂಗಳೂರು ಮಾತ್ರವಲ್ಲ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಶಾರ್ಫ್ ಶೂಟರ್‌ಗಳಾದ ಸಿಐಎಸ್ಎಫ್ ಭದ್ರತೆಯನ್ನು ಹೊಂದಿರುವ ಹಾಗೂ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುವ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾರೆ ಎಂದಾದರೆ ರಾಜ್ಯದ ಪರಿಸ್ಥಿತಿ ಏನು ಎಂಬ ಆತಂಕ ಜನಸಾಮಾನ್ಯರಲ್ಲಿ ಕಾಡಲು ಶುರುವಾಗಿತ್ತು.
Vijaya Karnataka Web magaluru airport bomb


ಇದಾದ ಬಳಿಕ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗಳು ಅಕ್ಷರಶಃ ಜನರನ್ನು ಮತ್ತಷ್ಟು ಭಯಗೊಳಿಸಿತ್ತು. ಅನುಮಾನಾಸ್ಪದ ಬ್ಯಾಗ್‌ನಲ್ಲಿ 10 ಕೆ.ಜೆ ತೂಕದ ಬಾಂಬ್ ಇದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ತಕ್ಷಣ ಬಾಂಬ್‌ ನಿಷ್ಕ್ರಿಯ ದಳ ಮಂಗಳೂರು ಏರ್‌ಪೋರ್ಟ್‌ಗೆ ದೌಡಾಯಿಸಿತ್ತು. ಇಡೀ ವಿಮಾನ ನಿಲ್ದಾಣವನ್ನು ಸುತ್ತುವರಿದ ಪೊಲೀಸರು ವ್ಯಾಪಕ ತಪಾಸಣೆಯನ್ನು ಕೈಗೊಂಡರು.

ಅಷ್ಟರಲ್ಲೇ ರಾಜಕೀಯ ನಾಯಕರುಗಳ ಹೇಳಿಕೆ ಸದ್ದು ಮಾಡಲು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲೂ, ಮುಖ್ಯವಾಹಿನಿ ಮಾಧ್ಯಮಗಳಲ್ಲೂ ಕೆಲವು ಊಹಾಪೋಹದ ಸುದ್ದಿಗಳು ಬಿತ್ತರವಾಗತೊಡಗಿದವು. ಬಾಂಬ್ ಪ್ರಕರಣದ ಹಿಂದೆ ಯಾರ ಕೈವಾಡವಿದೆ, ಯಾವ ಉಗ್ರಗಾಮಿ ಸಂಘಟನೆಗಳು ಇದರ ಹಿಂದಿವೆ ಎಂಬಿತ್ಯಾದಿ ಅನುಮಾನಗಳು ವ್ಯಕ್ತವಾಗತೊಡಗಿದವು. ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗಳು ಪ್ರಕರಣದ ಕುರಿತಾಗಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದ್ದವು.

ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದ್ದ ಮಂಗಳೂರು ‘ಬಾಂಬ್’ ಪ್ರಕರಣ : ಯಾರು ಏನಂದಿದ್ದರು?

ಬಾಂಬ್‌ ಪ್ರಕರಣದದ ಬಗ್ಗೆ ಆತಂಕ ಅನುಮಾನಗಳು ಹೆಚ್ಚಾಗತೊಡಗಿದಂತೆ ರಾಜ್ಯದ ಎಲ್ಲಾ ಕಡೆ ಹೈ ಅಲರ್ಟ್ ಘೋಷಿಸಲಾಯಿತು. ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಯಿತು. ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು.

ಈ ನಡುವೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯೂ ಜನರಲ್ಲಿ ಆತಂಕವನ್ನು ಹೆಚ್ಚಾಗುವಂತೆ ಮಾಡಿತ್ತು. ಬಾಂಬ್ ಪ್ರತಿರೋಧಕ ಯಂತ್ರವೊಂದರಲ್ಲಿ ಬ್ಯಾಗ್ ಇಟ್ಟು ಅದನ್ನು ವಿಮಾನ ನಿಲ್ದಾಣದ ಒಂದು ಕಿಲೋ ಮೀಟರ್‌ ದೂರವಿರುವ ಕೆಂಜಾರು ಮೈದಾನಕ್ಕೆ ಸ್ಥಳಾಂತರ ಮಾಡಲಾಯಿತು.

ಮಂಗಳೂರು ಬಾಂಬ್‌ ಕೇಸ್‌: ಯಾರು ಈ ಶಂಕಿತ ಮಣಿಪಾಲದ ಆದಿತ್ಯ ರಾವ್‌?

ಕೆಂಜಾರು ಮೈದಾನದಲ್ಲಿ ಮರಳ ಮೂಟೆಯ ನಡುವೆ ವಿಶೇಷ ಉಡುಪು ಧರಿಸಿದ ವ್ಯಕ್ತಿ ಬಾಂಬ್‌ ತಂದಿಟ್ಟರು. ಬಳಿಕ ಅತ್ಯಂತ ಸುರಕ್ಷತಾ ವಿಧಾನಗಳನ್ನು ಬಳಸಿಕೊಂಡು ಬಾಂಬ್ ಸ್ಫೋಟಗೊಳಿಸುವ ಮೂಲಕ ನಿಷ್ಕ್ರಿಯಗೊಳಿಸಲಾಗಿತ್ತು. ಸೋಮವಾರ ಇಡೀ ದಿನ ನಡೆದ ಈ ಘಟನೆ ಹಾಗೂ ಅದರ ಸುತ್ತಮುತ್ತಲಿನ ಬೆಳವಣಿಗೆಗಳು ರಾಜ್ಯದ ಜನರಲ್ಲಿ ಭಯ, ಆತಂಕವನ್ನು ಹುಟ್ಟಿಸಿದ್ದವು.

ಘಟನೆ ನಡೆದ ಮರುದಿನ ಅಂದರೆ ಮಂಗಳವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸ್‌ಪಿಜಿ ಅಧಿಕಾರಿಗಳು ಭೇಟಿ ನೀಡಿದ್ದರು. ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಸಿಐಎಸ್ಎಫ್ ಅಧಿಕಾರಿಗಳ ಜೊತೆಗೆ ಚರ್ಚೆಯನ್ನು ನಡೆಸಿದ್ದರು.

ಮಂಗಳೂರು ಬಾಂಬರ್‌ ಪತ್ತೆ; ಪೊಲೀಸರ ಮುಂದೆ ಶರಣಾದ ಆದಿತ್ಯ ರಾವ್

ಆದರೆ ಮಂಗಳವಾರ ಇಡೀ ಪ್ರಕರಣದ ಬೇರೆ ತಿರುವು ಪಡೆದುಕೊಂಡಿತ್ತು. ಸೋಮವಾರ ಸಂಜೆ ಮಂಗಳೂರು ಪೊಲೀಸರು ಶಂಕಿತ ವ್ಯಕ್ತಿಯ ಫೋಟೋವನ್ನು ಬಿಡುಗಡೆಗೊಳಿಸಿದ್ದರು. ಸಿಸಿ ಕ್ಯಾಮೆರಾ ವಿಡಿಯೋ ಮಾಹಿತಿ ಪ್ರಕಾರ ವ್ಯಕ್ತಿ ಆಟೋ ರಿಕ್ಷಾದಲ್ಲಿ ಬಂದು ಈ ಕೃತ್ಯ ಎಸಗಿದ್ದ ಎಂಬ ಮಾಹಿತಿಯನ್ನು ನೀಡಿದ್ದರು. ಅದರಂತೆ ಶಂಕಿತನ ಪತ್ತೆಗೆ ಮೂರು ತಂಡವನ್ನು ರಚನೆ ಮಾಡಲಾಗಿತ್ತು.

ಆದರೆ ಇದೀಗ ಪ್ರಕರಣ ಸಂಪೂರ್ಣ ಭಿನ್ನವಾದ ತಿರುವನ್ನು ಪಡೆದುಕೊಂಡಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಶರಣಾಗಿದ್ದಾನೆ. ಬೆಂಗಳೂರು ಡಿಜಿ ಐಜಿಪಿ ನೀಲಮಣಿ ಎನ್‌.ರಾಜು ಮುಂದೆ ಆರೋಪಿ ಶರಣಾಗಿದ್ದು ಕೃತ್ಯವನ್ನು ತಾನೇ ಎಸಗಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಮಂಗಳೂರು ಬಾಂಬ್‌ಗೆ ಸ್ಫೋಟಕ ಟ್ವಿಸ್ಟ್‌: ಮಣಿಪಾಲದ ಆದಿತ್ಯ ರಾವ್‌ ಮೇಲೆ ಶಂಕೆ

ಒಟ್ಟಿನಲ್ಲಿ ಅನುಮಾನ, ಊಹಾಪೋಹ, ಬೀಸು ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣದ ಒಂದು ಹಂತದಲ್ಲಿ ಅಂತ್ಯ ಕಂಡಿದೆ. ಪ್ರಕರಣವನ್ನು ಗಮನಿಸಿದರೆ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದರೆ ತಪ್ಪಾಗಲಾರದು. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಆದಿತ್ಯ ರಾವ್ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕಾಗಿ ಈ ಕೃತ್ಯವನ್ನು ನಡೆಸಿದ ಎಂಬುವುದು ತನಿಖೆಯ ಬಳಿಕವಷ್ಟೇ ಬಹಿರಂಗಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ