ಆ್ಯಪ್ನಗರ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 12 ವರ್ಷ ಕಠಿಣ ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್‌ 12 ವರ್ಷಗಳ ಕಠಿಣ ಸಜೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

Vijaya Karnataka 14 Oct 2021, 8:11 am
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್‌ 12 ವರ್ಷಗಳ ಕಠಿಣ ಸಜೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
Vijaya Karnataka Web arrest


ಮೂಲತಃ ಗದಗ ಜಿಲ್ಲೆಯವನಾಗಿದ್ದು, ಕಾವೂರು ಬಳಿ ವಾಸವಾಗಿದ್ದ ಕೂಲಿ ಕಾರ್ಮಿಕ ಮಲ್ಲಿಕ್‌ ಯಾನೆ ಮಲ್ಲಿಕಾರ್ಜುನ ಹನುಮಂತಪ್ಪ (27) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಈತ ಮತ್ತು ಸಂತ್ರಸ್ತೆ ಬಾಲಕಿಯ ಮನೆ ಅಕ್ಕಪಕ್ಕದಲ್ಲಿತ್ತು. ಆತ ಮತ್ತು ಸಂತ್ರಸ್ತೆಯ ತಂದೆ ಸ್ನೇಹಿತರಾಗಿದ್ದು, ಜತೆಯಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮಲ್ಲಿಕಾರ್ಜುನ ತನ್ನ ಸ್ನೇಹಿತನ ಪುತ್ರಿಯಾದ 16 ವರ್ಷದ ಬಾಲಕಿಯನ್ನು ವಿವಾಹವಾಗುವುದಾಗಿ ನಂಬಿಸಿ ಪುಸಲಾಯಿಸಿ 2017ರ ಮೇ ತಿಂಗಳಿನಲ್ಲಿ ಅಪಹರಿಸಿದ್ದ. ಬಾಲಕಿ ನಾಪತ್ತೆಯಾದ ಬಗ್ಗೆ ಹೆತ್ತವರು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.
ಬಂಟ್ವಾಳದಲ್ಲಿ ಪರಿಚಿತರಿಂದ ಅಪ್ರಾಪ್ತೆಯ ಗ್ಯಾಂಗ್‌ರೇಪ್‌; ಇಬ್ಬರನ್ನು ಬಂಧಿಸಿದ ಪೊಲೀಸರು
ಆರೋಪಿ ಗೋವಾದಲ್ಲಿ ಬಾಲಕಿಯ ಜತೆಗಿದ್ದು, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಗರ್ಭ ಧರಿಸಿದ್ದಳು. ಬಾಲಕಿ ಗೋವಾದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆರೋಪಿಯು ಬಾಲಕಿ ಮತ್ತು ಮಗುವನ್ನು ಬಿಟ್ಟು ಪರಾರಿಯಾಗಿದ್ದ. ಹೆತ್ತವರಿಗೆ ಈ ವಿಚಾರ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದ. ವಿಚಾರ ತಿಳಿದ ಬಾಲಕಿಯ ಹೆತ್ತವರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಅಪಹರಣ, ಅತ್ಯಾಚಾರ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಎಸಿಪಿಗಳಾದ ರಾಜೇಂದ್ರ, ಮಂಜುನಾಥ ಶೆಟ್ಟಿ ಮತ್ತು ಶ್ರೀನಿವಾಸ ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ 6 ವರ್ಷ ಕಠಿಣ ಸಜೆ ಹಾಗೂ 25 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಜೆ, ಅಪಹರಣ ನಡೆಸಿರುವುದಕ್ಕೆ ಆರು ವರ್ಷ ಕಠಿಣ ಸಜೆ ಹಾಗೂ 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 2 ತಿಂಗಳು ಹೆಚ್ಚುವರಿ ಸಜೆ, ಮದುವೆ ಆಗುವುದಾಗಿ ಹೇಳಿ ವಂಚಿಸಿರುವುದಕ್ಕೆ ಆರು ತಿಂಗಳು ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಸಜೆ, ಪೋಕ್ಸೊ ಕಾಯಿದೆಯ ಕಲಂನಡಿ 12 ವರ್ಷಗಳ ಕಠಿನ ಸಜೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಶಾಕಿಂಗ್ ನ್ಯೂಸ್‌; ಬಂಟ್ವಾಳದಲ್ಲಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್‌ ಮಾಡಿ ಗ್ಯಾಂಗ್‌ರೇಪ್‌! ದೂರು ದಾಖಲು
ಸಂತ್ರಸ್ತೆಗೆ 3 ಲಕ್ಷ ಪರಿಹಾರಈ ಪ್ರಕರಣದಲ್ಲಿ 25 ಸಾಕ್ಷಿಗಳನ್ನು ವಿಚಾರಿಸಲಾಗಿದೆ. ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಅಲ್ಲದೆ ಸರಕಾರ 2.50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ