ಆ್ಯಪ್ನಗರ

ಫಿಲಾಟೆಲಿಕ್‌ ನವೀಕೃತ ಬ್ಯೂರೊ ಉದ್ಘಾಟನೆ

ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್‌ -2019 ಅ.12ರಿಂದ 15ರ ವರೆಗೆ ನಡೆಯಲಿದೆ. ಅಂಚೆ ಇಲಾಖೆಯಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಈ ಪ್ರದರ್ಶನವನ್ನು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್ ಲೋಬೊ ಹೇಳಿದರು.

Vijaya Karnataka 21 Jun 2019, 4:08 pm
ಮಂಗಳೂರು: ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್‌ -2019 ಅ.12ರಿಂದ 15ರ ವರೆಗೆ ನಡೆಯಲಿದೆ. ಅಂಚೆ ಇಲಾಖೆಯಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುವ ಈ ಪ್ರದರ್ಶನವನ್ನು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್ ಲೋಬೊ ಹೇಳಿದರು.
Vijaya Karnataka Web 20my post (1)


ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ನವೀಕೃತ ಫಿಲಾಟೆಲಿಕ್‌ ಬ್ಯೂರೊ ಉದ್ಘಾಟಿಸಿ ಮಾತನಾಡಿದರು.

ರಾಜ್ಯಮಟ್ಟದ ಅಂಚೆ ಚೀಟಿ ಸಂಗ್ರಾಹಕರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಈ ಸಂದರ್ಭ ಕೇಂದ್ರದ ಮಾಜಿ ಸಚಿವ ದಿವಂಗತ ಜಾರ್ಜ್‌ ಫರ್ನಾಂಡಿಸ್‌ ಅವರ ವಿಶೇಷ ಅಂಚೆ ಕವರ್‌ ಬಿಡುಗಡೆಗೊಳಿಸಲಾಗುವುದು ಎಂದರು.

ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಮಾತನಾಡಿ, ಮಂಗಳೂರಿನ ಫಿಲಾಟೆಲಿ ಬ್ಯೂರೊ ಚಟುವಟಿಕೆಯಿಂದ ಕೂಡಿರಲು ಜಿಲ್ಲೆಯ ಅಂಚೆ ಸಂಗ್ರಾಹಕರು ಪ್ರಬುದ್ಧರಾಗಿರುವುದೇ ಕಾರಣ . ಫಿಲಾಟೆಲಿ ಬ್ಯೂರೋದಲ್ಲಿ ಅಂಚೆ ಸಂಗ್ರಾಹಕರಿಗೆ ತಮ್ಮ ಅಂಚೆಚೀಟಿಗಳ ಸಂಗ್ರಹ ಪ್ರದರ್ಶಿಸಲು ನಿಗದಿತ ಜಾಗವನ್ನು ಒದಗಿಸಲಾಗಿದೆ. ವರ್ಷಪೂರ್ತಿ ಇಲ್ಲಿ ಪ್ರದರ್ಶನ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಮಂಗಳೂರು ಫಿಲಾಟೆಲಿಕ್‌ ಬ್ಯೂರೋದಿಂದ ಪುತ್ತೂರು, ಉಡುಪಿ, ಕಾರ್ಕಳ, ಕುಂದಾಪುರ, ಮಣಿಪಾಲ, ಶಿವಮೊಗ್ಗ, ಭದ್ರಾವತಿ, ಸಾಗರ, ಚಿಕ್ಕಮಗಳೂರು, ಕೊಪ್ಪ, ಅರಸೀಕೆರೆ, ಹಾಸನ ಪ್ರಧಾನ ಅಂಚೆ ಕಚೇರಿಗಳಿಗೆ ಫಿಲಾಟೆಲಿಗೆ ಸಂಬಂಧಿಸಿದ ಅಂಚೆಚೀಟಿ ಹಾಗೂ ಇತರ ವಸ್ತುಗಳು ಪೂರೈಕೆಯಾಗುತ್ತವೆ ಎಂದು ಹೇಳಿದರು.

ಕರ್ನಾಪೆಕ್ಸ್‌ 2019ರ ಅಧಿಕೃತ ಲಾಂಛನ ಬಿಡುಗಡೆ ಮಾಡಲಾಯಿತು. ಕಲಾವಿದ ದಿನೇಶ್‌ ಹೊಳ್ಳ ರಚಿಸಿರುವ ಲಾಂಛನ ಆಯ್ಕೆ ಮಾಡಲಾಗಿದ್ದು, ಕರ್ನಾಪೆಕ್ಸ್‌ ಪ್ರದರ್ಶನದಲ್ಲಿ ಅವರಿಗೆ ಸನ್ಮಾನ ಕಾರ್ಯ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ದ.ಕ. ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಈವರೆಗೆ ಬಿಡುಗಡೆಯಾಗಿರುವ ಸ್ಮರಣಾರ್ಥ ಅಂಚೆ ಚೀಟಿಗಳು ಹಾಗೂ ಪಿಕ್ಟೋರಿಯಲ್‌ ಕ್ಯಾನ್ಸಲೇಶನ್‌ಗಳ ಮಾಹಿತಿಯ ಕಿರು ಪುಸ್ತಕ ಬಿಡುಗಡೆಗೊಳಿಸಲಾಯಿತು.

ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಮಾತನಾಡಿ, ಫಿಲಾಟೆಲಿಕ್‌ ಬ್ಯೂರೋದಲ್ಲಿರುವ ಅಂಚೆ ಚೀಟಿಗಳ ಸಂಗ್ರಹದ ಮೂಲಕ ಜಿಲ್ಲೆಯ ಇತಿಹಾಸವನ್ನು ಅರಿಯಬಹುದಾಗಿದೆ. ಬ್ಯೂರೋವನ್ನು ಪ್ರವಾಸೋದ್ಯಮ ತಾಣವಾಗಿಸುವ ಮೂಲಕ ಪ್ರವಾಸಿಗರು ಇಲ್ಲಿನ ಸಂಸ್ಕೃತಿಯನ್ನು ಅಂಚೆಚೀಟಿಗಳ ಮೂಲಕ ತಿಳಿಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್‌ ವಂದಿಸಿದರು. ಗ್ರೆಗರಿ ಕಾರ್ಯಕ್ರಮ ನಿರೂಪಿಸಿದರು.

.

ಶ್ರೀನಿವಾಸ ಮಲ್ಯರ ಕೊರತೆ!

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿರುವ ದಿವಂಗತ ಶ್ರೀನಿವಾಸ ಮಲ್ಯ ಅವರಿಗೆ ಅಂಚೆ ಚೀಟಿಯಲ್ಲಿ ಜಾಗ ಸಿಗದೇ ಇರುವುದು ಕೊರತೆಯಾಗಿದ್ದು, ಬೇಸರದ ಸಂಗತಿ. ಈ ಬಗ್ಗೆ ಸ್ಥಳೀಯ ಸಂಸದರು, ಶಾಸಕರು ಮುತುವರ್ಜಿ ವಹಿಸಿಸಬೇಕು. ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಹೆಸರಿನಲ್ಲಿ ವಿಶೇಷ ಕಾರ್ಡ್‌ ಬಿಡುಗಡೆ ನಡೆಯಲಿದೆ. ಅದಕ್ಕಿಂತ ಮೊದಲು ಸ್ಟ್ಯಾಂಪ್‌ ಬಿಡಗಡೆಯಾದರೆ ಉತ್ತಮ ಎಂದು ರಾಜ್ಯದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ. ಚಾರ್ಲ್ಸ್ ಲೋಬೊ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ