ಆ್ಯಪ್ನಗರ

ಬ್ರಿಟೀಷರ ಆಗಮನಕ್ಕೆ ಮುನ್ನ ಭಾರತೀಯರಿಗೆ ರಾಮಾಯಣ, ಮಹಾಭಾರತವೇ ಇತಿಹಾಸ: ಕಂಬಾರ

"ಭೂತ- ಭವಿಷ್ಯ - ವರ್ತಮಾನ ಕಾಲದ ವ್ಯತ್ಯಾಸವಿಲ್ಲದ ಭಾರತೀಯರು ಇದೇ ಕಾರಣಕ್ಕಾಗಿ ತಿರುಪತಿ ತಿಮ್ಮಪ್ಪ ಮದುವೆಗೆ ಮಾಡಿದ 9 ಕೋಟಿ ಸಾಲವನ್ನು ತೀರಿಸಲು ಹುಂಡಿ ಹಣ ಸಮರ್ಪಿಸುತ್ತಿದ್ದಾರೆ. ಬ್ರಿಟಿಷರು ನಮ್ಮ ನಡುವೆ ಪಾಸ್ಟ್- ಪ್ರೆಸೆಂಟ್ - ಫ್ಯೂಚರ್ ತಂದರು," - ಡಾ. ಚಂದ್ರಶೇಖರ ಕಂಬಾರ.

Vijaya Karnataka 29 Nov 2019, 5:06 pm
ಮಂಗಳೂರು: ‘ಬ್ರಿಟೀಷರ ಆಗಮನಕ್ಕೆ ಮುನ್ನ ಭಾರತೀಯರಿಗೆ ರಾಮಾಯಣ, ಮಹಾಭಾರತವೇ ಇತಿಹಾಸವಾಗಿತ್ತು. ರಾಮಾಯಣದಲ್ಲಿ ಬರುವ ಹನುಮಂತ ಮಹಾಭಾರತದಲ್ಲಿಯೂ ಬರುತ್ತಾನೆ. ಭೂತ- ಭವಿಷ್ಯ- ವರ್ತಮಾನ ಕಾಲದ ನಡುವೆ ಭಿನ್ನತೆ ಇರಲಿಲ್ಲ’ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಸಿದ್ಧ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
Vijaya Karnataka Web Chandrashekhara Kambara


ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ 'ಭಾರತದ ಪರಿಕಲ್ಪನೆ- ಇಂದು ಮತ್ತು ನಾಳೆ ' ಎಂಬ ಶೀರ್ಷಿಕೆಯಡಿ ನಗರದ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎರಡನೇ ಮಂಗಳೂರು ಲಿಟ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಭೂತ- ಭವಿಷ್ಯ - ವರ್ತಮಾನ ಕಾಲದ ವ್ಯತ್ಯಾಸವಿಲ್ಲದ ಭಾರತೀಯರು ಇದೇ ಕಾರಣಕ್ಕಾಗಿ ತಿರುಪತಿ ತಿಮ್ಮಪ್ಪ ಮದುವೆಗೆ ಮಾಡಿದ 9 ಕೋಟಿ ಸಾಲವನ್ನು ತೀರಿಸಲು ಹುಂಡಿ ಹಣ ಸಮರ್ಪಿಸುತ್ತಿದ್ದಾರೆ. ಬ್ರಿಟಿಷರು ನಮ್ಮ ನಡುವೆ ಪಾಸ್ಟ್- ಪ್ರೆಸೆಂಟ್ - ಫ್ಯೂಚರ್ ತಂದರು ಎಂದು ಡಾ. ಕಂಬಾರ ವಿಶ್ಲೇಷಿಸಿದರು.

ಈ ದೇಶದ ಬೆನ್ನೆಲುಬಾದ ಆಧ್ಯಾತ್ಮ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುರಿಯದೆ ಈ ದೇಶವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ಮೆಕಾಲೆ ಚೆನ್ನಾಗಿ ಅರಿತಿದ್ದರು. ಇದೇ ಕಾರಣಕ್ಕೆ ದೇಶದ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿ ಇಂಗ್ಲಿಷ್ ತರಲಾಯಿತು. ಭಾರತೀಯರು ಇಂಗ್ಲಿಷ್ ಭಾಷೆ ಹಾಗೂ ವಿದೇಶಿ ವಿಚಾರಗಳು ತಮಗಿಂತ ಚೆನ್ನಾಗಿದೆ ಎಂದು ತಿಳಿದುಕೊಂಡು ಸ್ವಂತಿಕೆಯನ್ನು ಮರೆತರು ಎಂದು ಕಂಬಾರ ಹೇಳಿದರು.

ಖ್ಯಾತ ಸಾಹಿತಿ ಡಾ. ಚಿದಾನಂದಮೂರ್ತಿ ಮಾತನಾಡಿ, ಸಂವಿಧಾನದಲ್ಲಿ ನಮ್ಮ ದೇಶವನ್ನು ಇಂಡಿಯಾ ಎಂದು ಕರೆದು ದೊಡ್ಡ ತಪ್ಪು ಮಾಡಲಾಗಿದೆ. ಇದು ಸಂವಿಧಾನದ ಕೊರತೆ. ಭಾರತ ಎಂದಾಗ ನಮ್ಮ ಸ್ವಂತಿಕೆ ನೆನಪಿಗೆ ಬರುತ್ತದೆ. ಆದರೆ ಇಂಡಿಯಾ ಎಂದಾಗ ಪರಕೀಯತೆ ಎದುರಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಧರ್ಮ ಎಂದರೆ ಅದೊಂದು ಉದಾತ್ತ ಪರಿಕಲ್ಪನೆ. ಧರ್ಮ ಎಂದರೆ ರಿಲಿಜನ್, ಕಾಸ್ಟ್ ಅಲ್ಲ. ಇದನ್ನು ಅನ್ಯ ಭಾಷೆಗೆ ಭಾಷಾಂತರ ಮಾಡಲು ಸಾಧ್ಯವಿಲ್ಲ. ಧರ್ಮ ನಮ್ಮನ್ನು ಧಾರಣೆ ಮಾಡುವಂತದ್ದು ಎಂದು ಅವರು ನುಡಿದರು.

ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ. ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಎಂ.ಎಸ್. ಚೈತ್ರಾ ಮತ್ತಿಗಟ್ಟೆ, ಬಿ.ವಿ.ವಸಂತ ಕುಮಾರ್ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ