ಆ್ಯಪ್ನಗರ

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ಟ್ವೀಟರ್ ಅಭಿಯಾನ

ಅಭಿಯಾನದಲ್ಲಿ ಪಾಲ್ಗೊಂಡ ಸಂಸದ ನಳಿನ್‌, ಜಗ್ಗೇಶ್‌ ಸೇರಿದಂತೆ ನಾನಾ ಸೆಲೆಬ್ರಿಟಿಗಳು, 86ಸಾವಿರ ಟ್ವೀಟ್‌, 10ಸಾವಿರ ಲೈಕ್ಸ್‌ .

Vijaya Karnataka 9 Sep 2019, 8:39 am
ಅಶೋಕ್‌ ಕಲ್ಲಡ್ಕ ಮಂಗಳೂರು
Vijaya Karnataka Web Twitter

ಸಂಸ್ಕೃತಿ, ನಾಗರಿಕತೆಯೂ ಆಗಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಕುರಿತು ನಡೆಯುತ್ತಿರುವ ಹೋರಾಟದ ಭಾಗವಾಗಿ ಭಾನುವಾರ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್‌ ಅಭಿಯಾನ ನಡೆಯಿತು. ಶನಿವಾರ ತಡರಾತ್ರಿ 12 ಗಂಟೆಗೆ ಆರಂಭವಾದ ಟ್ವೀಟ್‌ ಅಭಿಯಾನದಲ್ಲಿ ಜನಸಾಮಾನ್ಯರು, ಜನಪ್ರತಿನಿಧಿಗಳು, ರಾಜಕಾರಣಿಗಳು, ಚಿತ್ರನಟರು ಬಹುಸಂಖ್ಯೆಯಲ್ಲಿಪಾಲ್ಗೊಂಡರು.


ಸೆ.7ರಂದು ತಡರಾತ್ರಿ 12 ಗಂಟೆಯಿಂದ 8ರಂದು ತಡರಾತ್ರಿ 12 ಗಂಟೆ ವರೆಗೆ ಟ್ವೀಟ್‌ ಅಭಿಯಾನ ನಡೆಯಿತು. ಭಾನುವಾರ ತಡರಾತ್ರಿ ವೇಳೆಗೆ ಸುಮಾರು 86 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ ಮಾಡುವ ಮೂಲಕ ತುಳು ಭಾಷೆಗಾಗಿ ಮತ್ತೆ ಕೈ ಎತ್ತಿದ್ದಾರೆ. ಸುಮಾರು 10ಸಾವಿರ ಲೈಕ್ಸ್‌ ಬಂದಿವೆ. ಟ್ವೀಟ್‌ ಮಾಡಿದವರಲ್ಲಿಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ. ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್‌್ಕ, ಸುನಿಲ್‌ ಕುಮಾರ್‌, ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ನಾಯಕ ಬ್ರಿಜೇಶ್‌ ಚೌಟ, ಕಾಂಗ್ರೆಸ್‌ ರಾಜ್ಯ ವಕ್ತಾರೆ ಲಾವಣ್ಯ ಬಳ್ಳಾಲ್‌, ನವರಸ ನಟ ಜಗ್ಗೇಶ್‌, ನಟರಾದ ನಿರೂಪ್‌ ಭಂಡಾರಿ, ಅನೂಪ್‌ ಭಂಡಾರಿ, ಕಲಾವಿದ ವಿಲಾಸ್‌ ನಾಯಕ್‌, ಕೋಸ್ಟಲ್‌ವುಡ್‌ ನಟ ರೂಪೇಶ್‌ ಶೆಟ್ಟಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಿಣರಾಯಿ ವಿಜಯನ್‌ ಮುಂತಾದವರಿಗೆ ಟ್ಯಾಗ್‌ ಮಾಡಲಾಗಿದೆ.


ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್‌ ಅವರು ಟ್ವೀಟ್‌ ಮಾಡಿ, ತುಳು ಭಾಷೆನ್‌ ಸಂವಿಧಾನೊ 8ನೇ ಪರಿಚ್ಛೇದೊಗು ಸೇರ್ಪಾವೊಡು ಪನ್ಪಿನವು ನಮ್ಮ ಅರಿಕೆ. ಇತ್ತೆ ರಾಜ್ಯ ಬೊಕ್ಕ ಕೇಂದ್ರೊಡು ಬಿಜೆಪಿ ಸರಕಾರ ಉಪ್ಪುನೇರ್ದಾವರ ತುಳು ಭಾಷೆನ್‌ ಸಂವಿಧಾನೊದ 8ನೇ ಪರಿಚ್ಛೇದೊಗು ಸೇರ್ಪಾವಿನ ಬೇಲೆ ಅಪುಂಡು ಪನ್ಪಿ ನಂಬಿಕೆ ಎಂಕುಂಡು(ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವುದು ನನ್ನ ಬಯಕೆ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿಬಿಜೆಪಿ ಸರಕಾರ ಇರುವುದರಿಂದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸ ಆಗುತ್ತದೆ ಎನ್ನುವುದು ನನ್ನ ನಂಬಿಕೆ) ಎಂದು ಟ್ವೀಟ್‌ ಮಾಡಿದ್ದಾರೆ. ಹಾಗೆ ನವರಸ ನಟ ಜಗ್ಗೇಶ್‌ ಅವರು ಟ್ವೀಟನ್ನು ತುಳು ಭಾಷೆಯಲ್ಲೇ ಆರಂಭಿಸಿ ನಂತರ ಕನ್ನಡದಲ್ಲಿಮುಂದುವರಿಸಿದ್ದಾರೆ. ತುಳು ಸಹೋದರರೆ ಉಸಾರ್‌ ಉಲ್ಲೇರ. ಬೊಕ್ಕ ತುಳು ಭಾಷೆಯ ವಿಷಯ ಯಾನ್‌ ಲಾ ನಿಮ್ಮೊಟ್ಟಿಗೆ ಬರ್ಪೆ(ತುಳು ಸಹೋದರರೆ ಚೆನ್ನಾಗಿದ್ದೀರಾ. ಮತ್ತೆ ತುಳು ವಿಷಯದಲ್ಲಿನಾನು ಕೂಡ ನಿಮ್ಮೊಟ್ಟಿಗಿದ್ದೇನೆ) ಎಂಬ ಸಂದೇಶ ನೀಡಿದ್ದಾರೆ.


ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದಲ್ಲಿಸೇರಿಸಲು ಒತ್ತಾಯಿಸಿ ಟ್ವೀಟ್‌ ಅಭಿಯಾನ ನಡೆಯಿತು. ಜೈ ತುಳುನಾಡು ಸೇರಿದಂತೆ ವಿವಿಧ ತುಳು ಸಂಘಟನೆಗಳು ಇದರಲ್ಲಿ ಕೈಜೋಡಿಸಿದ್ದವು. ಟ್ವೀಟ್‌ ಅಭಿಯಾನದ ಯಶಸ್ವಿಗೆ ತಾಲೂಕುವಾರು ಗ್ರೂಪ್‌ಗಳನ್ನು ರಚಿಸಲಾಗಿತ್ತು. ಬೆಂಗಳೂರು, ಮುಂಬೈ, ಪುಣೆ ಹಾಗೂ ಗಲ್ಫ್ ರಾಷ್ಟ್ರಗಳ ಗ್ರೂಪ್‌ ಕೂಡ ರಚಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ