ಆ್ಯಪ್ನಗರ

ದೇವರ ಪ್ರತಿಮೆ ಸ್ಥಾಪನೆಗೆ ಅಡ್ಡಿ ಏಕೆ, ಕನಕಪುರದ ಶಾಂತಿ ಕೆಡಿಸಬೇಡಿ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಖಾದರ್ ವಾಗ್ದಾಳಿ

ಒಂದು ಕಾಲದಲ್ಲಿ ಕುಷ್ಟ ರೋಗ, ಮಾನಸಿಕ ಅಸ್ವಸ್ಥತೆಗೆ ಇವರಂಥ ಯಾರೂ ಚಿಕಿತ್ಸೆ ಮುಂದಾಗಿರಲಿಲ್ಲ. ಆಗ ಇದೇ ಕ್ರೈಸ್ತರು ಫಾದರ್ ಮುಲ್ಲರ್ ಆಸ್ಪತ್ರೆ ತೆರೆದವರು ಎಂದು ಶಾಸಕ ಯುಟಿ ಖಾದರ್‌ ತಿಳಿಸಿದರು.

Vijaya Karnataka Web 13 Jan 2020, 6:53 pm
ಮಂಗಳೂರು: ಕನಕಪುರ ಶಾಂತವಾಗಿದೆ. ದಕ್ಷಿಣ ಕನ್ನಡದಲ್ಲಿ ಮಾಡಿದ್ದು ಸಾಕು, ಇನ್ನು ಅಲ್ಲಿಯ ಜನರ ಶಾಂತಿ ಕೆಡಿಸಬೇಡಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಶಾಸಕ ಯು.ಟಿ. ಖಾದರ್ ಟಾಂಗ್ ನೀಡಿದ್ದಾರೆ.
Vijaya Karnataka Web ಯುಟಿ ಖಾದರ್
ಯುಟಿ ಖಾದರ್


ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಬಿಜೆಪಿ, ವಿಶ್ವ ಹಿಂದು ಪರಿಷತ್ ನಡೆಸಿರುವ ಪಾದಯಾತ್ರೆ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಾಕಾರಿಯಾಗಿ ಭಾಷಣ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಯುಟಿ ಖಾದರ್ ಪ್ರತಿಕ್ರಿಯಿಸಿದರು.

ಪಾದಯಾತ್ರೆಯು ಅವರ ಸಣ್ಣ ಮನಸ್ಸನ್ನು ತೋರಿಸುತ್ತದೆ. ದೇವರ ಪ್ರತಿಮೆ ಮಾಡಲು ಅಡ್ಡಿಪಡಿಸುತ್ತಾರೆ ಎನ್ನುವುದು ಅವರ ಮನೋಭಾವವನ್ನು ತೋರಿಸುತ್ತದೆ. ಯೇಸು ಪ್ರತಿಮೆಗೆ ಜಾಗವನ್ನು ಅಂದಿನ ಸರಕಾರ ಕಾನೂನುಬದ್ಧವಾಗಿಯೇ ಕೊಟ್ಟಿದೆ. ಬಿಜೆಪಿ ಮತ್ತು ಆರೆಸ್ಸೆಸ್‍ನವರು ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಒಂದು ಸಮುದಾಯದ ವಿರುದ್ಧ ಅವಾಚ್ಯ ಶಬ್ದ ಬಳಸಿ ಪ್ರತಿಭಟನೆ ಮಾಡುವುದಕ್ಕೆ ಅರ್ಥವಿಲ್ಲ ಎಂದು ಹೇಳಿದರು.

ಅದು ಗೋಮಾಳ ಅಥವಾ ಕಾನೂನು ಮೀರಿ ಜಾಗ ಕೊಟ್ಟಿದ್ದರೆ, ಕಾನೂನಾತ್ಮಕವಾಗಿ ಹೋರಾಟ ನಡೆಸಲಿ. ಒಂದು ಧರ್ಮವನ್ನು ವಿರೋಧಿಸಿ ಪಾದಯಾತ್ರೆ ಮಾಡುವ ಅವಶ್ಯಕತೆ ಇಲ್ಲ. ಆ ಸಮುದಾಯ ಮಾಡಿದ ತಪ್ಪಾದರೂ ಏನು ಎಂದು ಅವರು ಪ್ರಶ್ನಿಸಿದರು.

ಸರಕಾರ ಜಾಗ ಬಿಟ್ಟು ಕೊಟ್ಟರು. ಶಿಕ್ಷಣ ಸಂಸ್ಥೆ, ವೈದ್ಯಕೀಯ ಸಂಸ್ಥೆಗಳನ್ನು ತೆರೆದಿದ್ದಾರೆ. 50 ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣ ನೀಡಿ ಅವರನ್ನು ಸಬಲರನ್ನಾಗಿ ಮಾಡಿದ ಕ್ರಾಂತಿಕಾರಿ ಸೇವೆ ಒದಗಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಸಲಹೆ ಮಾಡಿದರು.

ಕನಕಪುರದಲ್ಲಿ ತಪ್ಪಾದರೆ ಅದೆಷ್ಟು ಮಂದಿ ಅರಣ್ಯ ಪ್ರದೇಶ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಪಟ್ಟಿ ತೆಗೆಯಲಿ. ಅಲ್ಲಿ ಏಕೆ ಇವರು ಪ್ರತಿಭಟನೆ ನಡೆಸುವುದಿಲ್ಲ. ದೇವರ ಪ್ರತಿಮೆ ಮಾಡಿ ಶಾಂತಿ, ಪ್ರೇಮದ ಸಂದೇಶ ನೀಡಿದರೆ ಏನಾಗುತ್ತದೆ ಎಂದು ಯುಟಿ ಖಾದರ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ