ಆ್ಯಪ್ನಗರ

ಪೌರತ್ವ ಕಾಯಿದೆ ಹಿಂದೆ ಚುನಾವಣಾ ರಾಜಕೀಯ: ಯುಟಿ ಖಾದರ್ ಆರೋಪ

ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ನಮ್ಮ ರಾಜ್ಯ ಪ್ರಯೋಗ ಶಾಲೆ ಅಲ್ಲ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿ ಸಂಭವಿಸಿ ಅನೇಕ ಮಂದಿ ವಾಸ್ತವ್ಯದ ಮೂಲ ದಾಖಲೆಯನ್ನು ಕಳೆದುಕೊಂಡಿದ್ದಾರೆ.

Vijaya Karnataka Web 18 Dec 2019, 5:59 pm
ಮಂಗಳೂರು: ರಾಜ್ಯ ಬಿಜೆಪಿ ಸರಕಾರ ಪೌರತ್ವ ಕಾಯಿದೆ ತಿದ್ದುಪಡಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ. ಬಿಜೆಪಿಯ ಈ ಗುಪ್ತ ಅಜೆಂಡಾ ಹಿಂದೆ ಚುನಾವಣಾ ರಾಜಕೀಯವಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.
Vijaya Karnataka Web ಯುಟಿ ಖಾದರ್
ಯುಟಿ ಖಾದರ್


ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ಮೂಡಿಸಿ ಸಾಕಷ್ಟು ಚರ್ಚೆ ನಡೆಸಿಯೇ ಇದನ್ನು ಬೇಕಾದರೆ ಜಾರಿಗೊಳಿಸಲಿ. ಅದು ಬಿಟ್ಟು ಭೀತಿ ಹುಟ್ಟಿಸುವುದು ಸರಿಯಲ್ಲ. ದೇಶದ ಭದ್ರತೆ ವಿಚಾರದಲ್ಲಿ ಕೆಗೊಳ್ಳುವ ಕ್ರಮಕ್ಕೆ ಯಾರದ್ದೂ ತಕರಾರು ಇಲ್ಲ. ಆದರೆ ಆಯಾ ರಾಜ್ಯಗಳಲ್ಲಿ ಚರ್ಚಿಸದೆ, ಏಕಾಏಕಿ ದೇಶಾದ್ಯಂತ ಜಾರಿಗೊಳಿಸಲು ಫರ್ಮಾನು ಹೊರಡಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದರು.

ಅನೇಕ ವರ್ಷಗಳಿಂದ ದೇಶದಲ್ಲಿ ವಾಸಿಸುತ್ತಿರುವವರು ಸರಿಯಾದ ನಾಗರಿಕತ್ವದ ಗುರುತು ಹೊಂದಿಲ್ಲದಿದ್ದರೆ, ಅಂತಹವರಿಗೆ ಏನು ಪರಿಹಾರ? ದೇಶವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಿರುವ ಕೇಂದ್ರ ಸರಕಾರ, ಜಾತಿ- ಧರ್ಮದ ಆಧಾರದಲ್ಲಿ ಈ ಮಸೂದೆಯನ್ನು ಅಂಗೀಕರಿಸುವುದರಲ್ಲಿ ಏನು ಅರ್ಥವಿದೆ ಎಂದು ಖಾದರ್ ಪ್ರಶ್ನಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತ ಅಂತರ ಕಾಪಾಡಿಕೊಂಡಿತ್ತು. ಆದರೆ ಕೇಂದ್ರ ಬಿಜೆಪಿ ಸರಕಾರ ಮಾತ್ರ ಪಾಕಿಸ್ತಾನ ವಿಚಾರದಲ್ಲಿ ಸಲುಗೆ ಪ್ರದರ್ಶಿಸಿದೆ ಎಂದು ಹೇಳಿದರು.

ದೇಶದ ಭದ್ರತೆ ವಿಚಾರ ಬಂದಾಗ ವಿನಾ ಕಾರಣ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬಾಂಗ್ಲಾ ವಿಮೋಚನೆ ವೇಳೆ ವಿರೋಧಿ ಸೈನಿಕರು ಮಂಡಿಯೂರುವಂತೆ ಮಾಡಿ ತನ್ನ ತಾಕತ್ತು ಪ್ರದರ್ಶಿಸಿದ್ದರು. ಹಾಗೆಯೇ ಈಗಿನ ಕೇಂದ್ರ ಸರಕಾರಕ್ಕೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಯುಟಿ ಖಾದರ್ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ