ಆ್ಯಪ್ನಗರ

ಕುವೈತ್‌ನಲ್ಲಿ ಅತಂತ್ರರಾಗಿರುವ ಮಂಗಳೂರು ಯುವಕರ ನೆರವಿಗೆ ಧಾವಿಸಿದ ವೇದವ್ಯಾಸ ಕಾಮತ್‌

ಸಂಸದ ನಳೀನ್‌ ಕುಮಾರ್‌ ಕಟೀಲ್‌ ಅವರ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ್ಕಾಗಿ ಮನವಿ ಮಾಡಲಾಗಿದೆ.

Vijaya Karnataka Web 25 May 2019, 9:17 am
ಮಂಗಳೂರು: ಕುವೈತ್‌ನಲ್ಲಿ ಅತಂತ್ರರಾಗಿರುವ ಮಂಗಳೂರಿನ ಯುವಕರ ಸಹಾಯಕ್ಕೆ ಧಾವಿಸಿರುವ ಶಾಸಕ ವೇದವ್ಯಾಸ ಕಾಮತ್‌, ಕುವೈತ್‌ನ ರಾಜ್‌ ಭಂಡಾರಿ ತಿರುಮಲೆಗುತ್ತು ಎಂಬುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ್ದಾರೆ.
Vijaya Karnataka Web Mangaluru youths


ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಅತಂತ್ರಗೊಂಡಿರುವ ಯುವಕರನ್ನು ಭೇಟಿ ಮಾಡಿ, ಮಾತನಾಡುವಂತೆ ರಾಜ್‌ ಭಂಡಾರಿ ಅವರಲ್ಲಿ ವೇದವ್ಯಾಸ ಕಾಮತ್‌ ಮನವಿ ಮಾಡಿದ್ದರು.

ರಾಜ್‌ ಭಂಡಾರಿ ಮಂಗಳೂರು ಯುವಕರನ್ನು ಭೇಟಿ ಮಾಡಿ ಮಾಡಿದ್ದಾರೆ. ಈ ವೇಳೆ ವೇದವ್ಯಾಸ ಕಾಮತ್‌ ಅವರ ಜತೆ ಮೂವರು ಮಂದಿ ವೀಡಿಯೋ ಕಾಲ್‌ ಮೂಲಕ ಮಾತನಾಡಿ, ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಯುವಕರಿಂದ ಪಾಸ್‌ಪೋರ್ಟ್‌ ಪ್ರತಿಗಳನ್ನು ಪಡೆದುಕೊಳ್ಳಲಾಗಿದ್ದು, ಮಂಗಳೂರು ದಕ್ಷಿಣ ಶಾಸಕ ವೇದಾವ್ಯಾಸ ಕಾಮತ್‌ ಅವರಿಗೆ ಕಳುಹಿಸಿ ಕೊಡಲಾಗಿದೆ.

ಸಂಸದ ನಳೀನ್‌ ಕುಮಾರ್‌ ಕಟೀಲ್‌ ಅವರ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ್ಕಾಗಿ ಮನವಿ ಮಾಡಲಾಗಿದೆ.

ಉದ್ಯೋಗ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕುವೈತ್‌ಗೆ ತೆರಳಿದ್ದ 35 ಯುವಕರು ಸೇರಿದಂತೆ 200ಕ್ಕೂ ಅಧಿಕ ಭಾರತೀಯರು ಅತಂತ್ರರಾಗಿದ್ದು, ತಮಗೆ ಸಹಾಯ ಮಾಡುವಂತೆ ಶಾಸಕರು, ನಾಗರಿಕರಲ್ಲಿ ಮನವಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಯುವಕರು ಕುವೈತ್‌ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ವೀಡಿಯೋದಲ್ಲಿ ಗಣೇಶ್‌ ಎಂಬವರು ಮಾತನಾಡಿ, 'ನಗರದ ಮಾಣಿಕ್ಯ ಅಸೋಸಿಯೇಟ್ಸ್‌ ಪ್ಲೇಸ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಮಾಲೀಕ ಪ್ರಸಾದ್‌ ಶೆಟ್ಟಿ ಎಂಬವರಿಗೆ 65 ಸಾವಿರ ರೂ. ನೀಡಿ ಜ.7ರಂದು ಕುವೈತ್‌ಗೆ ಬಂದಿದ್ದೇವೆ. ಇಲ್ಲಿ ಬಂದ ಬಳಿಕ ಅತಂತ್ರರಾಗಿದ್ದೇವೆ ಎಂದು ಹೇಳಿದ್ದಾರೆ.

ಮಂಗಳೂರಿನಿಂದ ಬರುವಾಗ ಕುವೈತ್‌ನ ಕ್ಯಾಂಬ್ರಿಡ್ಜ್‌ ಎನ್ನುವ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕುವೈತ್‌ಗೆ ಬಂದ ಬಳಿಕ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾರೆ. ಆ ಕಂಪನಿಯಲ್ಲಿ 5 ತಿಂಗಳಿನಿಂದ ದುಡಿಯುತ್ತಿದ್ದು, ಈ ತನಕ ಬಿಡಿಕಾಸು ಸಂಬಳವನ್ನೂ ನೀಡಿಲ್ಲ. ಇದರಿಂದ ನಾವು ತೀರಾ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಮಾತ್ರವಲ್ಲದೆ ಈಗ ಊಟದ ವ್ಯವಸ್ಥೆ ರದ್ದುಗೊಳಿಸಲಾಗಿದ್ದು, ಆಹಾರಕ್ಕಾಗಿ ನಾವು ಯಾರಾರ‍ಯರಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕರು ಅಲವತ್ತುಕೊಂಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದು, ಅಲ್ಲಿಂದ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ್ಲ. ನಾವು ಬಡವರಾಗಿದ್ದು, ಮಂಗಳೂರಿನ ಮಾಧ್ಯಮದವರು, ರಾಜಕೀಯ ಪ್ರತಿನಿಧಿಗಳು, ಶಾಸಕ ವೇದವ್ಯಾಸ ಕಾಮತ್‌ ಸಹಾಯ ಮಾಡಬೇಕು. ನಾವು ಮರಳಿಗೆ ಊರಿಗೆ ಬರಲು ನಿರ್ಧರಿಸಿದ್ದು, ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎಂದು ಸಹಾಯ ಕೇಳಿದ್ದಾರೆ.

200ಕ್ಕೂ ಅಧಿಕ ಮಂದಿ: ಮಂಗಳೂರಿನ 35 ಯುವಕರು ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ 200ಕ್ಕೂ ಅಧಿಕ ಮಂದಿ ಇದ್ದಾರೆ. ಎಲ್ಲರದ್ದೂ ಇದೇ ಪರಿಸ್ಥಿತಿ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

ರಂಝಾನ್‌ ತಿಂಗಳಲ್ಲೇ ಸಂಕಷ್ಟ: ಮಂಗಳೂರಿನಿಂದ ಕುವೈತ್‌ಗೆ ಹೋದ ತಂಡದಲ್ಲಿ ತುಂಬಾ ಮಂದಿ ರಮ್ಜಾನ್‌ ಉಪವಾಸದಲ್ಲಿದ್ದು, ಸಂಬಳವಾಗದೆ ಸಂಕಷ್ಟದಲ್ಲಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. 'ಈಗಾಗಲೇ ಅರ್ಧ ರಮ್ಜಾನ್‌ ಉಪವಾಸ ಮುಗಿದಿದೆ. ಸಂಬಳ ಆಗದೆ ಸಂಕಷ್ಟದಲ್ಲಿದ್ದೇವೆ. ನಾವು ಮರಳಿ ಊರಿಗೆ ಬರುತ್ತೇವೆ. ಸಹಾಯ ಮಾಡಿ' ಎಂದು ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ವಿನಂತಿ ಮಾಡಿದ್ದಾರೆ.

ಮಾಹಿತಿ ಕಲೆ ಹಾಕುತ್ತಿದ್ದೇವೆ: ಶಾಸಕ ಕಾಮತ್‌
ಮಂಗಳೂರಿನ 35 ಯುವಕರು ಕುವೈತ್‌ಗೆ ಉದ್ಯೋಗಕ್ಕೆಂದು ಹೋಗಿ ಸಂಕಷ್ಟದಲ್ಲಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ವೀಡಿಯೋ ವೀಕ್ಷಣೆ ಮಾಡಿದ್ದು, ಆ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರ ವಿಳಾಸ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದ್ದು, ಅವರನ್ನು ಉದ್ಯೋಗಕ್ಕೆ ಕಳುಹಿಸಿದ ಸಂಸ್ಥೆಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

ವಿಜಯ ಕರ್ನಾಟಕ ಜತೆ ಮಾತನಾಡಿದ ಅವರು, ವಿಷಯ ಗೊತ್ತಾದ ಕೂಡಲೇ ಕುವೈತ್‌ನಲ್ಲಿರುವ ನಮ್ಮ ಆಪ್ತರಿಗೆ ವಿಷಯ ತಿಳಿಸಿ ಈ ಯುವಕರ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದೇವೆ. ಇದು ಮಾತ್ರವಲ್ಲದೆ ಯುವಕರ ಪಾಸ್‌ಪೋರ್ಟ್‌, ವಿಳಾಸ ವಿವರ ಸಿಕ್ಕಿದ ಕೂಡಲೇ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಕುವೈತ್‌ನಲ್ಲಿ ಮಂಗಳೂರಿನ 35 ಯುವಕರು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ವೀಡಿಯೋ ವೀಕ್ಷಣೆ ಮಾಡಲಾಗಿದ್ದು, ಈ ಯುವಕರ ವಿಳಾಸವನ್ನು ಪತ್ತೆ ಹಚ್ಚಿದ ಬಳಿಕ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗುವುದು.
ಡಾ. ಸಂದೀಪ್‌ ಪಾಟೀಲ್‌, ಪೊಲೀಸ್‌ ಕಮಿಷನರ್‌, ಮಂಗಳೂರು ನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ