ಆ್ಯಪ್ನಗರ

ಯಕ್ಷಗಾನದಲ್ಲಿ ಯೇಸು ಮಹಾತ್ಮೆ: ಸೋಷಿಯಲ್‌ ಮೀಡಿಯಾಗಳಲ್ಲಿ ಪರ,ವಿರೋಧ

ಯಕ್ಷಗಾನ ಪ್ರಸಂಗ ಕರ್ತ ಮುಳಿಯ ಕೇಶವಯ್ಯ 40 ವರ್ಷಗಳ ಹಿಂದೆ ರಚಿಸಿದ್ದ ‘ಮಹಾಚೇತನ- ಯೇಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ಪ್ರಸಂಗ ಕೃತಿ ಪರಿಷ್ಕರಣೆಯೊಂದಿಗೆ ಮತ್ತೆ ಬಿಡುಗಡೆಯ ಕಡೆಗೆ ಹೆಜ್ಜೆ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಗಾಳಿ ಬೀಸಲು ಆರಂಭವಾಗಿದೆ.

ವಿಕ ಸುದ್ದಿಲೋಕ 20 May 2017, 2:08 pm
ಮಂಗಳೂರು: ಖ್ಯಾತ ಯಕ್ಷಗಾನ ಪ್ರಸಂಗ ಕರ್ತ ಮುಳಿಯ ಕೇಶವಯ್ಯ 40 ವರ್ಷಗಳ ಹಿಂದೆ ರಚಿಸಿದ್ದ ‘ಮಹಾಚೇತನ- ಯೇಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ಪ್ರಸಂಗ ಕೃತಿ ಅರ್ಥಸಹಿತ ಪರಿಷ್ಕರಣೆಯೊಂದಿಗೆ ಮತ್ತೆ ಬಿಡುಗಡೆಯ ಕಡೆಗೆ ಹೆಜ್ಜೆ ಹಾಕಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಗಾಳಿ ಜೋರಾಗಿ ಬೀಸಲು ಆರಂಭವಾಗಿದೆ.
Vijaya Karnataka Web yesu christa mahathme in yakshagana
ಯಕ್ಷಗಾನದಲ್ಲಿ ಯೇಸು ಮಹಾತ್ಮೆ: ಸೋಷಿಯಲ್‌ ಮೀಡಿಯಾಗಳಲ್ಲಿ ಪರ,ವಿರೋಧ


1970ರಲ್ಲಿ ರಚನೆಯಾಗಿ 1980ರ ದಶಕದಲ್ಲಿ ನೂರಾರು ಪ್ರದರ್ಶನಗಳನ್ನು ಕಂಡು ಬಹಳಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಪ್ರಸಂಗದಲ್ಲಿ ಪದ್ಯ ಹಾಗೂ ಸನ್ನಿವೇಶಗಳನ್ನು ಮಾತ್ರ ನೀಡಲಾಗಿತ್ತು. ಈ ಬಾರಿಯಂತೂ ಅದಕ್ಕೆ ಒಪ್ಪುವಂತೆ ಅರ್ಥ ಸಹಿತ ವಿವರಣೆಯನ್ನು ಜೋಡಿಸಲಾಗಿದೆ. 1976ರಲ್ಲಿ ಪ್ರಸಿದ್ಧ ಕಲಾವಿದ ದಿ. ಬಾಬು ಕುಡ್ತಡ್ಕ ಪ್ರೇರಣೆಯಿಂದ ರಚನೆಯಾಗಿದೆ. ಈ ಕೃತಿಯ ಮೂಲ ಆಶಯ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರನ್ನು ಕರೆತರುವುದು ಆಗಿತ್ತು. ಇದರ ಜತೆಯಲ್ಲಿ ಯೇಸು ಕ್ರಿಸ್ತನ ಬದುಕಿನ ಕತೆಯನ್ನು ಈ ಮಾಧ್ಯಮದ ಮೂಲಕ ತೋರಿಸುವುದು ಕೂಡ ಆಗಿತ್ತು. ಪ್ರಸಂಗ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಜನಮನ್ನಣೆ ಗಳಿಸಿತ್ತು. ಇಂಗ್ಲಿಷ್, ಜರ್ಮನ್ ಭಾಷೆಗಳಿಗೂ ತರ್ಜುಮೆ ಕಂಡು, ಆ ಭಾಷೆಗಳಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆದಿತ್ತು. ಈ ಬಳಿಕ ಯೇಸು ಮಹಾತ್ಮೆ ಮತ್ತೆ ನೇಪಥ್ಯದ ಹಾದಿ ಹಿಡಿಯಿತು.

ಈಗ ಮತ್ತೆ ಲೇಖಕರ ಮಕ್ಕಳ ಪ್ರಯತ್ನದ ಫಲವಾಗಿ ಅರ್ಥಸಹಿತವಾಗಿ ಪರಿಷ್ಕೃತ ಕೃತಿ ಸಿದ್ಧಗೊಂಡಿದೆ. ಛಂದಸ್ಸಿನ ಚೌಕಟ್ಟಿನಲ್ಲಿ ರಚನೆಯಾದ ೨೦೦ ರಷ್ಟು ಪದ್ಯಗಳು ಈ ಕೃತಿಯಲ್ಲಿ ಅಡಕವಾಗಿದೆ. ಯಕ್ಷಗಾನ ಪ್ರಸಂಗಕ್ಕೆ ಬೇಕಾದ ರಸವೈವಿಧ್ಯತೆಯೂ ಇಲ್ಲಿ ತುಂಬಿಸಲಾಗಿದೆ ಎನ್ನುವುದು ಕೃತಿಕಾರರ ಮಗ ರಘು ಮುಳಿಯ ಅವರ ಮಾತು.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್

ಇಂತಹ ಪ್ರಸಂಗದ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಫ್‌ಗಳಲ್ಲಿ ‘ಮಹಾಚೇತನ- ಏಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ಪ್ರಸಂಗ ಕೃತಿ ಕುರಿತು ಕೆಲವರು ಆಕ್ಷೇಪದ ಧ್ವನಿ ಎತ್ತಿರುವ ಪೋಸ್ಟ್‌ಗಳು ಹರಿದಾಡುತ್ತಿವೆ.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕೃತಿ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಕಿದ್ದಾರೆ.800ಕ್ಕೂ ಅಧಿಕ ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಜತೆಯಲ್ಲಿ ಪರ- ವಿರೋಧ ಅಲೆಗಳಿರುವ ಕಮೆಂಟ್ಸ್‌ಗಳನ್ನು ಹಾಕಿದ್ದಾರೆ. ಕೆಲವರು ಮತಾಂತರದ ಛಾಯೆ ಈ ಪ್ರಸಂಗದ ಮೂಲಕ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇನ್ನೂ ಕೆಲವರು ಕಾರ‍್ಯಕ್ರಮವನ್ನೇ ತಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ.

ಮತ್ತೊಂದೆಡೆ ಯಕ್ಷಗಾನ ಕಲಾವಿದರು ಮತ್ತು ಸಂಘಟಕರು ಯೇಸು ಮಹಾತ್ಮೆ ಪರವಾಗಿ ಬೆಂಬಲ ಸೂಚಿಸುವಂತ ಬರಹಗಳನ್ನು ತಮ್ಮ ತಮ್ಮ ಫೇಸ್‌ಬುಕ್, ವ್ಯಾಟ್ಸಾಪ್‌ಗಳಲ್ಲಿ ಹರಿಯಬಿಟ್ಟಿದ್ದಾರೆ. ಕರಾವಳಿಯ ಪ್ರಮುಖ ಯಕ್ಷಗಾನ ಸಂಘಟಕರಾದ ಕಟೀಲು ಸಿತ್ಲ ರಂಗನಾಥರಾವ್, ಎಂ.ಶಾಂತಾರಾಮ ಕುಡ್ವ ಸೇರಿದಂತೆ ಹಲವರು ಈ ಕೃತಿಯ ಪರವಾಗಿ ದೀರ್ಘವಾದ ಬರಹಗಳನ್ನು ಫೇಸ್‌ಬುಕ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವರು ಕಲೆಯನ್ನು ಧರ್ಮದ ವ್ಯಾಪ್ತಿಯಲ್ಲಿ ಇರಿಸಿ ನೋಡುವುದು ಸರಿಯಲ್ಲ. ಕಲೆಯೇ ಒಂದು ಸ್ವತಂತ್ರ ಧರ್ಮ ಎನ್ನುವ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಶಾಂತಾರಾಮ ಕುಡ್ವ ಅವರು ಹೇಳುವಂತೆ ‘ಕಳೆದ 40 ವರ್ಷಗಳಲ್ಲಿ ಇಲ್ಲದ ವಿವಾದಗಳು ಈಗ ಯಾಕೆ ಬರುತ್ತಿದೆ. ಈ ಹಿಂದೆ ಸಾಕಷ್ಟು ಮಂದಿ ಯೇಸು ಮಹಾತ್ಮೆಯನ್ನು ನೋಡಿ ಮೆಚ್ಚಿದ್ದಾರೆ. ಹೊಸ ಪ್ರೇಕ್ಷಕ ವರ್ಗದವರು ಹುಟ್ಟಿಕೊಂಡಿದ್ದಾರೆ. ಯಕ್ಷಗಾನಕ್ಕೆ ಜಾತಿ-ಮತ-ಧರ್ಮದ ಸಂಕೋಲೆಗಳಿಲ್ಲ. ಯಕ್ಷಗಾನದಲ್ಲಿ ಕ್ರೈಸ್ತರು, ಮುಸ್ಲಿಂ ಬಂಧುಗಳು ದುಡಿಯುತ್ತಾರೆ. ಬರೀ ಕಲೆಯ ದೃಷ್ಟಿಯಿಂದ ಅದನ್ನು ನೋಡಬೇಕು ಎನ್ನುವುದು ಅವರ ವಾದ. ಮೇ ೨೮ರಂದು ನಗರದ ಡಾನ್‌ಬೊಸ್ಕೋ ಸಭಾಂಗಣದಲ್ಲಿ ಪರಿಷ್ಕೃತ ಮುದ್ರಣ ಬಿಡುಗಡೆ ಸಮಾರಂಭ ಹಾಗೂ ಮಹಾಚೇತನ- ಏಸುಕ್ರಿಸ್ತ ಮಹಾತ್ಮೆ ತಾಳಮದ್ದಳೆ ಪ್ರದರ್ಶನವೂ ನಡೆಯಲಿದೆ. ಈ ಮೂಲಕ ಒಟ್ಟಾರೆಯಾಗಿ ಯಕ್ಷಗಾನ ಪ್ರಸಂಗವೊಂದು ಭಿನ್ನ ರೂಪದ ವಿವಾದ ಹುಟ್ಟುಹಾಕಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ