ಆ್ಯಪ್ನಗರ

ಎಸ್‌ಯುವಿ ಕಾರು ಮಾರಿ ರೋಗಿಗಳಿಗೆ ಉಚಿತ್‌ ಆಕ್ಸಿಜನ್‌ ಸಿಲಿಂಡರ್‌ ನೀಡುತ್ತಿರುವ ಗೆಳೆಯರು

ಶಹನವಾಜ್‌ ಹುಸ್ಸೇನ್‌ ಮತ್ತು ಅಬ್ಬಾಸ್‌ ರಿಜ್ವಿ ಎಂಬ ಇಬ್ಬರು ಸ್ನೇಹಿತರು ಎಸ್‌ಯುವಿ ಕಾರು ಮಾರಿ ರೋಗಿಗಳಿಗೆ ಉಚಿತ್‌ ಆಕ್ಸಿಜನ್‌ ಸಿಲಿಂಡರ್ ಪೂರೈಸುತ್ತಿದ್ದಾರೆ. ಇದರೊಂದಿಗೆ ಮಾನವೀಯತೆಗೆ ಈ ಗೆಳೆಯರು ಆಕ್ಸಿಜನ್‌ ನೀಡಿದಂತಾಗಿದೆ.

Agencies 24 Jun 2020, 10:20 pm
ಮುಂಬಯಿ: ಕೊರೊನಾ ವೈರಸ್‌ ರುದ್ರ ತಾಂಡವಕ್ಕೆ ಇಡೀ ವಿಶ್ವ ತಲ್ಲಣಿಸಿದೆ. ಭಾರತದಲ್ಲಿ, ಅದರಲ್ಲೂ ಮಹಾರಾಷ್ಟ್ರ ಕೊರೊನಾ ಮರಣ ಮೃದಂಗಕ್ಕೆ ತತ್ತರಿಸಿದೆ. ಆದರೆ ಈ ಸಂಕಷ್ಟ ಪರಿಸ್ಥಿತಿಯು ಕೆಲವರ ಜೀವನ, ಚಿಂತನೆಯ ದಿಕ್ಕನ್ನೇ ಬದಲಿಸಿದೆ. ಮಾನವೀಯತೆಯನ್ನು ಅರಳಿಸಿದೆ. ಜೀವ ಮತ್ತು ಜೀವನದ ನಿಜವಾದ ಮೌಲ್ಯವನ್ನು ಅರ್ಥ ಮಾಡಿಸಿದೆ. ಮುಂಬಯಿನ ಶಹನವಾಜ್‌ ಹುಸ್ಸೇನ್‌ ಮತ್ತು ಅಬ್ಬಾಸ್‌ ರಿಜ್ವಿ ಎಂಬ ಇಬ್ಬರು ಸ್ನೇಹಿತರ ಜೀವನಪ್ರೇಮ ಇದಕ್ಕೆ ಮತ್ತೊಂದು ಉದಾಹರಣೆ.
Vijaya Karnataka Web Hussain Mumbai


ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಾವಿಗೆ ಅಂಕುಶ ಹಾಕಲು ಯುವಕರಿಬ್ಬರು ಟೊಂಕ ಕಟ್ಟಿ ನಿಂತಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕೊರೊನಾ ಹಾಗೂ ಇತರೆ ರೋಗಿಗಳಿಗೆ ಜೀವವಾಯುವೆನಿಸಿದ ಆಮ್ಲಜನಕವನ್ನು ಉಚಿತವಾಗಿ ಪೂರೈಸುತ್ತಿದ್ದಾರೆ. ವಿಶೇಷವೆಂದರೆ ಇವರು ಇದಕ್ಕಾಗಿ ನೆಚ್ಚಿನ ಎಸ್‌ಯುವಿ ಕಾರನ್ನೂ ಮಾರಿದ್ದಾರೆ!

ಇದುವರೆಗೂ ಇಬ್ಬರೂ ಸ್ನೇಹಿತರು ಸುಮಾರು 300 ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಕೆ ಮಾಡಿದ್ದಾರೆ. ಒಂದು ಸಿಲಿಂಡರ್‌ ಅನ್ನು ಸೋಂಕಿತರೊಬ್ಬರು 48 ಗಂಟೆಗಳವರೆಗೆ ಉಚಿತವಾಗಿ ಬಳಸಬಹುದಾಗಿದೆ. ರಾತ್ರಿ ಹೊತ್ತೇ ಹೆಚ್ಚು ಸಿಲಿಂಡರ್‌ಗಳಿಗೆ ಬೇಡಿಕೆ ಬರುತ್ತದೆ. ದಿನಕ್ಕೆ ಸುಮಾರು 15-20 ಸಿಲಿಂಡರ್‌ ಒದಗಿಸುತ್ತೇವೆ ಎನ್ನುತ್ತಾರೆ ರಿಜ್ವಿ.

ಗರ್ಭಿಣಿ ಸಾವಿನ ಬಳಿಕ

ಆಕ್ಸಿಜನ್‌ ಪೂರೈಕೆ ಸಂಕಲ್ಪದ ಹಿಂದೆ ಒಂದು ನೋವಿನ ಕತೆಯಿದೆ. ರಿಜ್ವಿ ಅವರ ಸಂಬಂಧಿ, ಆರು ತಿಂಗಳ ಗರ್ಭಿಣಿ ಇತ್ತೀಚೆಗೆ ಸಕಾಲಕ್ಕೆ ಆಕ್ಸಿಜನ್‌ ಸಿಗದೆ ಕೊನೆಯುಸಿರೆಳೆದಿದ್ದರು. ಐದು ಆಸ್ಪತ್ರೆ ಸುತ್ತಿದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರಿಂದ ತೀವ್ರ ಘಾಸಿಗೊಂಡಿದ್ದ ರಿಜ್ವಿ ಸಾಧ್ಯವಾದಷ್ಟು ಸೋಂಕಿತರಿಗೆ ಆಮ್ಲಜನಕ ಸಿಲಿಂಡರ್‌ ಪೂರೈಸಿ ಅವರ ಜೀವ ಉಳಿಸುವ ಸಂಕಲ್ಪ ಮಾಡಿದರು. ಇದಕ್ಕೆ ಗೆಳೆಯ ಹುಸೇನ್‌ ಸಾಥ್‌ ನೀಡಿದರು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಆಕ್ಸಿಜನ್‌ ಬೇಡಿಕೆಯೂ ಹೆಚ್ಚಿತು. ಆದರೆ, ಹೆಚ್ಚು ಸಿಲಿಂಡರ್‌ ಖರೀದಿಗೆ ಹಣ ಸಾಲದಾದಾಗ ತಮ್ಮ ಬಳಿಯಿದ್ದ ಎಸ್‌ಯುವಿ ಕಾರನ್ನೇ ಹುಸೇನ್‌ ಮಾರಾಟ ಮಾಡಿದರು.

ಆ್ಯಂಬುಲೆನ್ಸ್‌ ಆದ ನೆಚ್ಚಿನ ಕಾರ್‌

ಹುಸೇನ್‌ ಅವರಿಗೆ ಮೊದಲಿನಿಂದಲೂ ಕಾರ್‌ ಕ್ರೇಜ್‌. 2011ರಲ್ಲಿ ಸುಮಾರು 30 ಲಕ್ಷ ರೂ. ಕೊಟ್ಟು ಬ್ರಾಂಡ್‌ ನ್ಯೂ ಫೋರ್ಡ್‌ ಎಂಡೋವರ್‌ ಕಾರು ಖರೀದಿಸಿದ್ದರು. 007 ಸಂಖ್ಯೆಯ ಫ್ಯಾನ್ಸಿ ನಂಬರ್‌ ಪ್ಲೇಟ್‌, ಡೆಕೊರೇಷನ್‌, ಮ್ಯೂಸಿಕ್‌ ಸಿಸ್ಟಂಗಾಗಿ ಮತ್ತಷ್ಟು ಹಣ ಖರ್ಚು ಮಾಡಿದ್ದರು. ಆದರೆ, ಕೊರೊನಾ ಸೋಂಕು ಹೆಚ್ಚಿದ ಬಳಿಕ ಅವರು ತಮ್ಮ ನೆಚ್ಚಿನ ಕಾರನ್ನು ತಾತ್ಕಾಲಿಕ ಆಂಬ್ಯುಲೆನ್ಸ್‌ ಆಗಿ ಮಾಡಿದ್ದರು. ಈಗ ಅದನ್ನೂ ಮಾರಿದ್ದಾರೆ.

‘‘ಧರ್ಮದ ಭೇದವಿಲ್ಲದೆ, ಅಂತಸ್ತಿನ ಭೇದವಿಲ್ಲದೆ ತುರ್ತು ಅಗತ್ಯ ಇರುವವರಿಗೆ ಉಚಿತವಾಗಿ ಆಮ್ಲಜನಕದ ವ್ಯವಸ್ಥೆ ಮಾಡುತ್ತಿದ್ದೇವೆ. ವೈದ್ಯರ ಲಿಖಿತ ಪತ್ರವಿದ್ದರೆ ಮುಂಬಯಿನ ಯಾವುದೇ ಪ್ರದೇಶಕ್ಕೆ ಸಿಲಿಂಡರ್‌ ಕಳುಹಿಸುತ್ತಿದ್ದೇವೆ," ಎನ್ನುತ್ತಾರೆ ಹುಸೇನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ