Please enable javascript.ಎರಡು ಉಪನಗರ, ಮತ್ತೊಂದು ವಲಯ ಕಚೇರಿ: ಮುಡಾ ಬಜೆಟ್ ಘೋಷಣೆ - ಮುಡಾ, ಬಜೆಟ್, ಶಾಸಕರು, ಆಯುಕ್ತ, ಡಿಸಿ, Muda, budget, MLA, Commissioner, DC, - Vijay Karnataka

ಎರಡು ಉಪನಗರ, ಮತ್ತೊಂದು ವಲಯ ಕಚೇರಿ: ಮುಡಾ ಬಜೆಟ್ ಘೋಷಣೆ

ವಿಕ ಸುದ್ದಿಲೋಕ 23 Feb 2014, 9:36 pm
Subscribe

ಎರಡು ಉಪನಗರಗಳ ಅಭಿವೃದ್ಧಿ, ವಿಕೇಂದ್ರೀಕೃತ ಅಶುದ್ಧ ನೀರಿನ ಶುದ್ಧೀಕರಣ ಘಟಕ(ಡೆವ್ಯಾಟ್ಸ್), ಬಹುಮಹಡಿ ಕಟ್ಟಡಗಳ ಯೋಜನೆ, 7ನೇ ವಲಯ ಕಚೇರಿ ಸ್ಥಾಪನೆ...

 muda budget mla commissioner dc
ಎರಡು ಉಪನಗರ, ಮತ್ತೊಂದು ವಲಯ ಕಚೇರಿ: ಮುಡಾ ಬಜೆಟ್ ಘೋಷಣೆ
ಮೈಸೂರು: ಎರಡು ಉಪನಗರಗಳ ಅಭಿವೃದ್ಧಿ, ವಿಕೇಂದ್ರೀಕೃತ ಅಶುದ್ಧ ನೀರಿನ ಶುದ್ಧೀಕರಣ ಘಟಕ(ಡೆವ್ಯಾಟ್ಸ್), ಬಹುಮಹಡಿ ಕಟ್ಟಡಗಳ ಯೋಜನೆ, 7ನೇ ವಲಯ ಕಚೇರಿ ಸ್ಥಾಪನೆ...

ಹೀಗೆ ಹೊಸ ಯೋಜನೆಗಳೊಂದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ 2014-15ನೇ ಬಜೆಟ್ ಅನ್ನು ಮಂಡಿಸಿದೆ. ಹಿಂದಿನ ಆರ್ಥಿಕ ಲೆಕ್ಕಕ್ಕೆ ಹೋಲಿಸಿದರೆ 55 ಕೋಟಿ ರೂ. ಕಡಿಮೆ ಮೊತ್ತದ ಬಜೆಟ್ ಇದು. 486.70 ಕೋಟಿ ರೂ. ಆದಾಯ ಹಾಗೂ 484.38 ಕೋಟಿ ರೂ. ಗಳ ಖರ್ಚಿನ ಹಾಗೂ 2.32 ಕೋಟಿ ರೂ. ಉಳಿತಾಯದ ಬಜೆಟ್‌ನ ಲೆಕ್ಕಾಚಾರವಿದು.

ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಿ.ಶಿಖಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಯುಕ್ತ ಎಸ್.ಪಾಲಯ್ಯ ಬಜೆಟ್ ಮಂಡಿಸಿದರು. ಹೊಸದಾಗಿ ಬಡಾವಣೆ ರೂಪಿಸಿ ನಿವೇಶನ ನೀಡುವ ಬದಲು ಈಗಾಗಲೇ ಇರುವ ಮೂಲೆ ಹಾಗೂ ಖಾಲಿ ನಿವೇಶನಗಳ ಇ-ಹರಾಜಿನಿಂದಲೇ ಬಹುತೇಕ ಆದಾಯವನ್ನು ಮುಡಾ ನಿರೀಕ್ಷಿಸಿದೆ.

‘ಪ್ರಾಧಿಕಾರವು ಉಪನಗರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇದರಡಿ ಬೋಗಾದಿ ರಸ್ತೆಯ ಬಲ್ಲಹಳ್ಳಿಯಲ್ಲಿ 485 ಎಕರೆ ಹಾಗೂ ನಂಜನಗೂಡು ರಸ್ತೆಯ ಕೋಚನಹಳ್ಳಿ ಉಪನಗರವನ್ನು 500 ಎಕರೆ ಭೂಮಿಯಲ್ಲಿ ಉಪನಗರ ರೂಪಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಕೋಚನಹಳ್ಳಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಅಲ್ಲಿ ವಸತಿ ವಲಯವನ್ನಾಗಿ ರೂಪಿಸಲಾಗುತ್ತಿದೆ. ಇಲ್ಲಿ ಅಚ್ಚುಕಟ್ಟಾದ ಹಾಗೂ ಸಮರ್ಪಕವಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈಗಾಗಲೇ ಕೃಷ್ಣರಾಜ ಒಡೆಯರ್ ನಗರ, ಸ್ವರ್ಣಜಯಂತಿನಗರ, ಲಾಲ್‌ಬಹದ್ದೂರು ಶಾಸ್ತ್ರಿ ನಗರ 2ನೇ ಹಂತ, ಆರ್‌ಟಿ ನಗರ 2ನೇ ಹಂತ ಹಾಗೂ ಶಾಂತವೇರಿ ಗೋಪಾಲಗೌಡ 2ನೇ ಹಂತರದ ಬಡಾವಣೆಗಳಿಂದ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿಯೇ 21.09 ಕೋಟಿ ರೂ. ಕಾಯ್ದಿರಿಸಲಾಗುತ್ತಿದೆ. ಪ್ರಾಧಿಕಾರ ವ್ಯಾಪ್ತಿಯ ಬಡಾವಣೆಗಳ ವಿಶೇಷ ಅಭಿವೃದ್ಧಿ ಕಾಮಗಾರಿಗೆ 140 ಕೋಟಿ ರೂ. ಮೀಸಲಿಡಲಾಗಿದೆ’ ಎಂದು ಆಯುಕ್ತರು ವಿವರಿಸಿದರು.

ಬಡಾವಣೆಗಳಲ್ಲಿಯೇ ಮಲಿನ ನೀರು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸುವ ಕಾರ್ಯಕ್ರಮವಿದು. ವಿಕೇಂದ್ರೀಕೃತ ಅಶುದ್ಧ ನೀರಿನ ಶುದ್ಧೀಕರಣ ವಿಧಾನವನ್ನು ವಸಂತನಗರ ಬಡಾವಣೆಯಲ್ಲಿ ಅಳವಡಿಸಲಾಗುತ್ತಿದೆ. ಶುದ್ಧೀಕರಿಸಿದ ನೀರನ್ನು ಸಮೀಪದ ಬಡಾವಣೆಗಳ ಉದ್ಯಾನಗಳಿಗೆ ಬಳಕೆ ಮಾಡಬಹುದು. ಸಿಡಿಡಿ ಎನ್ನುವ ಸಂಸ್ಥೆಯ ಸಹಯೋಗದಲ್ಲಿ ಪ್ರಾಯೋಗಿಕವಾಗಿ 1 ಕೋಟಿ ರೂ. ವೆಚ್ಚದಲ್ಲಿ ಇದನ್ನು ರೂಪಿಸಲಾಗುತ್ತಿದೆ.

ಈಗಾಗಲೇ ಆರು ವಲಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ದಟ್ಟಗಳ್ಳಿ 2ನೇ ಹಂತದ ಬಡಾವಣೆಯಲ್ಲಿ 7ನೇ ವಲಯ ಕಚೇರಿ ನಿರ್ಮಿಸಲು ಉದ್ದೇಶಿಸಿದ್ದು ಇದಕ್ಕೆ 1 ಕೋಟಿ ರೂ. ಮೀಸಲಿಡಲಾಗಿದೆ.

ಪ್ರಾಧಿಕಾರದ ಕಚೇರಿಯ ಚಾವಣಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿ ಉತ್ಪತ್ತಿಯಾದ ವಿದ್ಯುತ್ ಅನ್ನು ಇಡೀ ಕಚೇರಿಗೆ ಬಳಸುವುದು ಸೇರಿದೆ. 75 ಕಿಲೋ ವ್ಯಾಟ್‌ನ ಘಟಕದ ಅಂದಾಜು ವೆಚ್ಚ 2 ಕೋಟಿ ರೂ. ಇದರಲ್ಲಿ 38.25 ಲಕ್ಷ ರೂ. ಸಬ್ಸಿಡಿ ರೂಪದಲ್ಲಿ ಬಂದರೆ, 89.25 ಲಕ್ಷ ರೂ.ಗಳನ್ನು ಪ್ರಾಧಿಕಾರ ಭರಿಸಲಿದೆ. ಪಾಲಿಕೆ ನೋಡೆಲ್ ಏಜೆನ್ಸಿ ಆಗಿರಲಿದೆ.
ಹೊರ ವರ್ತುಲ ರಸ್ತೆಯ ಮುಖ್ಯವಾದ ಬೆಂಗಳೂರು-ಮೈಸೂರು, ಮೈಸೂರು-ಕೆಆರ್‌ಎಸ್, ಮೈಸೂರು-ಹುಣಸೂರುನ ಮೂರು ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್ ಹಾಗೂ ಜೆಎಸ್‌ಎಸ್ ಕಾಲೇಜು ಹತ್ತಿರ, ಮೈಸೂರು ಹಾಗೂ ನಂಜನಗೂಡು ರಸ್ತೆಯಲ್ಲಿ ಒಂದು ಗ್ರೇಡ್ ಸಪರೇಟರ್ ಅಳವಡಿಸಿದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು. ಈಗಾಗಲೇ ದಿಲ್ಲಿಯಲ್ಲಿ ನಡೆದ ಸಿಎಸ್‌ಎಂಸಿ ಸಭೆಯಲ್ಲಿ ಒಪ್ಪಿಗೆಯೂ ದೊರೆತಿದೆ. ಇದಕ್ಕಾಗಿ 6 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಹೊರ ವರ್ತುಲ ರಸ್ತೆಯಲ್ಲಿ ಬರುವ ನಾಲ್ಕು ರೈಲ್ವೆ ಮೇಲ್ಸೆತುವೆಗಳ ಅಗಲೀಕರಣಕ್ಕೂ 8 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಮೈಸೂರು-ಬೆಂಗಳೂರು ಹಳಿ, ಆರ್‌ಬಿಐ ಸಮೀಪದ ಹಳಿ, ಮೈಸೂರು-ಅರಸೀಕೆರೆ ಹಳಿ ಹಾಗೂ ಮೈಸೂರು-ನಂಜನಗೂಡು ರೈಲ್ವೆ ಹಳಿ ಇದರಲ್ಲಿ ಸೇರಿದೆ.

ಜಮೀನುಗಳ ಲಭ್ಯತೆ ಕಷ್ಟ ಎನ್ನುವ ಕಾರಣಕ್ಕೆ 1ರಿಂದ ಮೂರು ಬೆಡ್‌ರೂಂಗಳ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ. 500 ಮನೆಗಳ ನಿರ್ಮಾಣವನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು 1 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ವಿಮಾನ ನಿಲ್ದಾಣ ಭೂಮಿ ಡಿನೋಟಿಫೈ?: ಮಂಡಕಳ್ಳಿ ವಿಮಾನ ನಿಲ್ದಾಣದ 2ನೇ ಹಂತದ ವಿಸ್ತರಣೆಗೆ ಮೀಸಲಿಡಲಾಗಿದ್ದ 347 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆಯೇ ಎಂದು ಶಾಸಕ ತನ್ವೀರ್‌ಸೇಠ್ ಮುಡಾ ಬಜೆಟ್ ಸಭೆಯಲ್ಲಿ ಪ್ರಶ್ನಿಸಿದರು.ಈಗಾಗಲೇ ನಿಲ್ದಾಣದ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿತ್ತು. ಅದು ಆರಂಭವಾಗಿಲ್ಲ.
ಭೂಮಿಯನ್ನೂ ಡಿನೋಟಿಫೈ ಮಾಡಲಾಗಿದೆಯೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ಸಿಗಲಿಲ್ಲ.

ಮುಡಾದಿಂದ ಬಾಕಿ ಕೊಡಿ: ವಿಜಯಕರ್ನಾಟಕದಲ್ಲಿ ಕಳೆದ ವಾರ ಪ್ರಕಟವಾದ ಪಾಲಿಕೆ ನೀರಿನ ತೆರಿಗೆ ಬಾಕಿ ಅಭಿಯಾನ ವಿಚಾರವನ್ನು ಶಾಸಕ ವಾಸು ಪರೋಕ್ಷವಾಗಿ ಪ್ರಸ್ತಾಪಿಸಿದರು. ‘‘ನಗರದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು ನೀರಿನ ಬಾಕಿ ಉಳಿಸಿಕೊಂಡಿವೆ. ಕಾಲೇಜುಗಳು ತೆರಿಗೆಯನ್ನು ಪಾವತಿಸಲು ಆಗುವುದಿಲ್ಲ. ಇದನ್ನು ಮುಡಾದಿಂದ ಭರಿಸಬೇಕು. ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಡಬೇಕಾಗಿತ್ತು ’’ ಎಂದು ಸಲಹೆ ನೀಡಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ