ಆ್ಯಪ್ನಗರ

ಇಂಧನ ಕ್ಷೇತ್ರದಲ್ಲಿ 15.15 ಲಕ್ಷ ಉದ್ಯೋಗ ಸೃಷ್ಟಿ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2022 ರೊಳಗೆ 15.15 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ರಚನಾ ಎನರ್ಜಿ ಕೇರ್‌ ಫೌಂಡೇಶನ್‌ನ ಇಂಧನ ಸಲಹೆಗಾರ ಅನಿಲ್‌ ಕುಮಾರ್‌ ಹೇಳಿದರು.

Vijaya Karnataka 20 May 2018, 5:00 am
ಮೈಸೂರು : ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2022 ರೊಳಗೆ 15.15 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ರಚನಾ ಎನರ್ಜಿ ಕೇರ್‌ ಫೌಂಡೇಶನ್‌ನ ಇಂಧನ ಸಲಹೆಗಾರ ಅನಿಲ್‌ ಕುಮಾರ್‌ ಹೇಳಿದರು.
Vijaya Karnataka Web 15 15 lakh jobs in fuel sector
ಇಂಧನ ಕ್ಷೇತ್ರದಲ್ಲಿ 15.15 ಲಕ್ಷ ಉದ್ಯೋಗ ಸೃಷ್ಟಿ


ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ರೋಟರಿ ಮೈಸೂರು ಪಶ್ಚಿಮ ಸಂಸ್ಥೆಯ ಪಾಲ್‌ ಹ್ಯಾರಿಸ್‌ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಸಹಯೋಗದಲ್ಲಿ ಸರಸ್ವತಿಪುರಂನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ 'ದೇಶದಲ್ಲಿ ಸೋಲಾರ್‌ ಅವಶ್ಯಕತೆ ಹಾಗೂ ಸ್ವ ಉದ್ಯೋಗಾವಕಾಶಗಳು' ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

''2022 ರೊಳಗೆ ನವೀಕರಿಸಬಹುದಾದ ಇಂಧನದಿಂದ 175 ಗೀಗಾ ವ್ಯಾಟ್‌ ಇಂಧನ ತಯಾರಿಸುವ ಗುರಿ ಇದ್ದು, 4 ವರ್ಷಗಳಲ್ಲಿ 14 ಲಕ್ಷ ಕೋಟಿ ಬಂಡಾವಳ ಹೂಡಿಕೆಯಾಗಿದೆ. ಸೋಲಾರ್‌ ಮೇಲ್ಛಾಣಿಯಿಂದ 40 ಗೀಗಾ ವ್ಯಾಟ್‌ ತಯಾರಿಸಲು ಹಾಗೂ ವಿದ್ಯುತ್‌ ಉಳಿತಾಯ ಯೋಜನೆಯಡಿ 1.6 ಲಕ್ಷ ಕೋಟಿ ಹೂಡಿಕೆಯಾಗಿದೆ. ಇದರಲ್ಲಿ 2016-17 ಸಾಲಿನಲ್ಲಿ ಈ ಕ್ಷೇತ್ರದಲ್ಲಿ ಸೋಲಾರ್‌ನಿಂದಾಗಿ 165 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2022ರೊಳಗೆ ಸೋಲಾರ್‌ನಲ್ಲಿ 7 ಲಕ್ಷ , ಪವನ ಶಕ್ತಿ ಉತ್ಪಾದನೆಯಲ್ಲಿ 1.50 ಲಕ್ಷ ಉದ್ಯೋಗ, ಕಿರುಜಲ ವಿದ್ಯುತ್‌ ಉತ್ಪಾದನೆಯಲ್ಲಿ 1 ಲಕ್ಷ ಉದ್ಯೋಗ, ಸಣ್ಣ ಉದ್ಯಮಗಳಾದ ಸೋಲಾರ್‌ ತಯಾರಿಕೆ, ಅಳವಡಿಕೆ ಮತ್ತು ನಿರ್ವಹಣೆ, ದುರಸ್ತಿಯಲ್ಲಿ 5.65 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕಡಿಮೆ ಬಂಡವಾಳದಲ್ಲಿ ಸ್ವಯಂ ಉದ್ಯೋಗವನ್ನು ಸೃಷ್ಟಿ ಮಾಡಬಹುದಾಗಿದೆ,'' ಎಂದು ತಿಳಿಸಿದರು.

ಜಾಗತಿಕ ತಾಪಮಾನ: ''ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಯೋಜನಾ ಎಂಜಿನಿಯರ್‌ ಡಿ.ಕೆ.ದೀನೇಶ್‌ ಕುಮಾರ್‌ ಮಾತನಾಡಿ, ''ಒಂದು ಪೆಟ್ರೋಲ್‌ ಉರಿದಾಗ ಎರಡೂವರೆ ಪಟ್ಟಿನಷ್ಟು ತೂಕದ ಕಾರ್ಬನ್‌ ಡೈ ಆಕ್ಸೈಡ್‌ ಬಿಡುಗಡೆಯಾಗಿ ವಾಯುಮಾಲಿನ್ಯವಾಗುತ್ತದೆ. ಇನ್ನೂ ಕೈಗಾರಿಕೆಗಳಿಂದ ಹೊರ ಹೊಮ್ಮುವ ಕಾರ್ಬನ್‌ ಡೈ ಆಕ್ಸೈಡ್‌ ಎಷ್ಟು ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂಬುದನ್ನು ಮನಗಾಣಬೇಕಿದೆ. ಕೈಗಾರೀಕರಣದಿಂದ ಅಗೆದು ತೆಗೆಯುವ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ನೈಸರ್ಗಿಕ ಅನಿಲ, ಖನಿಜ ತೈಲಗಳಾದ ಪೆಟ್ರೋಲ್‌ ಡೇಸೆಲ್‌ ಉರಿದಾಗ ಬಿಡುಗಡೆಯಾಗುವ ಹಸಿರು ಮನೆ ಅನಿಲಗಳಾದ ಗ್ರೀನ್‌ ಹೌಸ್‌ ಗ್ಯಾಸ್‌, ಕಾರ್ಬನ್‌ ಡೈ ಆಕ್ಸೈಡ್‌, ಮಿಥೇನ್‌ ಮತ್ತು ಸಾರಜನಕ ಡೈ ಆಕ್ಸೈಡ್‌ನಿಂದಾಗಿ ಭೂಮಿ ಮೇಲಿನ ಉಷ್ಣತೆ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಹೆಚ್ಚಾಗಿರುವ ದೇಶಗಳಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಜಗತ್ತಿನಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿರುವ ಚೀನಾದಲ್ಲಿ ಶೇ.24.33 ರಷ್ಟು ಜಾಗತಿಕ ತಾಪಮಾನ ಇದೆ. ಇನ್ನೂ ಭಾರತದಲ್ಲಿ ಶೇ.5.78 ರಷ್ಟು ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ,'' ಎಂದು ಆತಂಕ ವ್ಯಕ್ತಪಡಿಸಿದರು.

''ಜಾಗತಿಕ ತಾಪಮಾನ ಕಡಿಮೆಗೊಳಿಸಲು ನವೀಕರಿಸಬಹುದಾದ ಇಂಧನ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವಾರು ಕಾರ‍್ಯಕ್ರಮಗಳನ್ನು ರೂಪಿಸಿದೆ. ಜತೆಗೆ ಸ್ವಯಂ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ,'' ಎಂದು ತಿಳಿಸಿದರು. ಇದಕ್ಕೂ ಮುನ್ನ ಕಾರ್ಯಾಗಾರಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್‌. ರಾಮಕೃಷ್ಣ ಗೌಡ ಅವರು ಚಾಲನೆ ನೀಡಿ ಮಾತನಾಡಿ, ''ಪ್ರಪಂಚದಲ್ಲಿ ಪಂಚಭೂತಗಳಲ್ಲಿ ನವೀಕರಿಸಬಹುದಾದ ಇಂಧನವಿದೆ. ಅವುಗಳನ್ನು ಹೇಗೆ ಸದ್ಯಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಅರಿಯಬೇಕಿದೆ. ಜತೆಗೆ ಇವು ಮುಗಿಯದ ನೈಸರ್ಗಿಕ ಸಂಪನ್ಮೂಲ ಬಳಕೆ ಮಾಡಿಕೊಂಡು ಇಂಧನ ಶಕ್ತಿ ಉತ್ಪಾದನೆ ಹೆಚ್ಚಿಸುವ ಕಡೆ ಗಮನಹರಿಸಬೇಕಿದೆ,'' ಎಂದರು

ರೋಟರಿ ಮೈಸೂರು ಪಶ್ಚಿಮ ಸಿ.ಎಸ್‌.ರವಿಶಂಕರ್‌, ಸಿಎಫ್‌ಟಿಆರ್‌ಐನ ವಿಜ್ಞಾನಿ ರಮೇಶ್‌ ಸೇರಿದಂತೆ ಮತ್ತಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ