ಆ್ಯಪ್ನಗರ

ಸಾಲ ಮನ್ನಾಕ್ಕೆ ಬಿಜೆಪಿ ನಾಯಕರಿಂದ ಅಡ್ಡಿ: ಎಚ್‌ಡಿಕೆ

ಕೆಲವರು ಪಿತೂರಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅರೋಪ

Vijaya Karnataka 18 Oct 2018, 5:00 am
ಮಡಿಕೇರಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಆಗದಂತೆ ರಾಜ್ಯದ ಕೆಲವು ಬಿಜೆಪಿ ಮುಖಂಡರೇ ತಡೆಯೊಡ್ಡಿ ಪಿತೂರಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
Vijaya Karnataka Web bjp leader disrupts loan waiver hdk
ಸಾಲ ಮನ್ನಾಕ್ಕೆ ಬಿಜೆಪಿ ನಾಯಕರಿಂದ ಅಡ್ಡಿ: ಎಚ್‌ಡಿಕೆ


ನಗರದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

''ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಘೋಷಣೆ ಮಾಡಿದ್ದೇನೆ. ನ.1 ರಿಂದ ಇದು ಜಾರಿಗೆ ಬರಬೇಕಿದೆ. ಆದರೆ, ಎಷ್ಟು ಸಾಲ ಇದೆ ಎಂಬ ಮಾಹಿತಿ ನೀಡಿ ಎಂದು ಬ್ಯಾಂಕ್‌ಗಳನ್ನು ಕೋರಿ ಎರಡು ತಿಂಗಳಾದರೂ ಅವುಗಳಿಂದ ಉತ್ತರ ಬಂದಿಲ್ಲ. ನನ್ನ ವೇಗಕ್ಕೆ ಅವು ಸ್ಪಂದಿಸುತ್ತಿಲ್ಲ. ಸಾಲ ಮನ್ನಾಕ್ಕೆ ರಾಜ್ಯದ ಬಿಜೆಪಿ ನಾಯಕರೇ ಅಡ್ಡಿ ಪಡಿಸುತ್ತಿದ್ದಾರೆ. ಸಾಲ ಮನ್ನಾವಾದರೆ ರಾಜ್ಯ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ, ಮುಖ್ಯಮಂತ್ರಿ ಜನರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಎನ್ನುವ ಆತಂಕದಿಂದ ತಡೆಯೊಡ್ಡುತ್ತಿದ್ದಾರೆ,''ಎಂದು ಆಕ್ಷೇಪಿಸಿದರು.

ಮೆರಿಟ್‌ ಮೇಲೆ ವರ್ಗ: ''ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. ಆದರೆ, ನಮ್ಮ ಸರಕಾರ ಪೇಮೆಂಟ್‌ ಆಧಾರದಲ್ಲಿ ವರ್ಗಾವಣೆ ಮಾಡುತ್ತಿಲ್ಲ. ಮೆರಿಟ್‌ ಆಧಾರದಲ್ಲಿ ವರ್ಗಾವಣೆ ಮಾಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಬೆಂಗಳೂರು ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಮಹಾತ್ಮ ಗಾಂಧೀಜಿಯ 150ನೇ ವರ್ಷದ ಜಯಂತಿ ಸಂದರ್ಭ ಅವರ ಕನಸು ನನಸಾಗಬೇಕು. ಅದಕ್ಕೆ ನಮ್ಮ ಸರಕಾರ ಶ್ರಮಿಸುತ್ತಿದೆ,''ಎಂದು ಹೇಳಿದರು.

''ಟಿಪ್ಪು ಜಯಂತಿ ಕುರಿತು ಸರಕಾರ ಇಲ್ಲಿ ತನಕ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅದರ ಬಗ್ಗೆ ಚಿಂತನೆ ಕೂಡ ಮಾಡಲಿಲ್ಲ. ನಮಗೆ ಮಾಡಲು ಸಾಕಷ್ಟು ಕೆಲಸವಿದೆ,''ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಡೆಡ್‌ಲೈನ್‌ಗೆ ತಲೆಕೆಡಿಸಿಕೊಳ್ಳುವುದಿಲ್ಲ: ''ಭಾಗಮಂಡಲಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇಲ್ಲಿಗೆ ಈ ಹಿಂದೆ ಬಂದ ನಂತರ ನಾನು ಮುಖ್ಯಮಂತ್ರಿಯಾಗಿದ್ದೇನೆ. ದೇವರೇ ಈ ಹುದ್ದೆ ಕೊಟ್ಟಿದ್ದಾನೆ. ಎಷ್ಟು ದಿನ ಅನ್ನುವುದನ್ನು ಕೂಡ ನಿರ್ಧಾರ ಮಾಡಿದ್ದಾನೆ. ನನಗರ ಯಾವುದೇ ಆತಂಕ ಇಲ್ಲ. ನಾನು ಎಷ್ಟು ಗಟ್ಟಿಯಾಗಿದ್ದೇನೆ ಎನ್ನುವ ಪರೀಕ್ಷೆ ಮಾಡಿಬಿಡೋಣ. ಬಿ.ಎಸ್‌.ಯಡಿಯೂರಪ್ಪ ಅವರು ನೀಡುತ್ತಿರುವ ಡೆಡ್‌ಲೈನ್‌ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ,''ಎಂದು ತಿಳಿಸಿದರು.

ಸಂತ್ರಸ್ತರಿಗೆ ವಿಶೇಷ ನೆರವು: ''ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕೊಡಗಿನಲ್ಲಿ ಈ ರೀತಿಯ ಪರಿಹಾರ ನೀಡುತ್ತಿದ್ದೇವೆ. ಕೆಲವು ನಿಯಮಗಳಿಂದ ಕೊಡಗಿನ ಪರಿಹಾರಕ್ಕೆ ರಿಯಾಯಿತಿ ನೀಡಲಾಗಿದೆ. ಒಂದು ಕುಟುಂಬಕ್ಕೆ ಪುನರ್‌ವಸತಿಗೆ 8.50 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುವುದು. ಮನೆ ನಿರ್ಮಾಣಕ್ಕೆ 8-10 ತಿಂಗಳು ಅಗತ್ಯವಿದ್ದು, ಅಲ್ಲಿ ತನಕ ಮಾಸಿಕ 10 ಸಾವಿರ ರೂ. ಬಾಡಿಗೆ ನೀಡಲಾಗುವುದು,'' ಎಂದರು.

200 ಕೋಟಿ ರೂ. ಮೀಸಲು: ''ಕೊಡಗಿನ ಪುನರ್‌ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಲ್ಲಿ ತನಕ 75 ಕೋಟಿ ರೂ.ಗಳು ಬಂದಿವೆ. ರಾಜ್ಯ ಸರಕಾರಿ ನೌಕರರ ಒಂದು ದಿನದ ವೇತನ 105 ಕೋಟಿ ರೂ. ಬರಬೇಕಿದೆ. ಒಟ್ಟಾರೆಯಾಗಿ ಈ ನಿಧಿಗೆ 200 ಕೋಟಿ ರೂ. ಬರುವ ನಿರೀಕ್ಷೆ ಇದೆ. ಇದನ್ನು ಕೊಡಗಿನ ಪುನರ್‌ನಿರ್ಮಾಣಕ್ಕೆ ಮಾತ್ರ ಬಳಸಲಾಗುವುದು,''ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಸಣ್ಣ ನೀರಾವರಿ ಖಾತೆ ಸಚಿವ ಸಿ.ಎನ್‌.ಪುಟ್ಟರಾಜು, ಶಾಸಕರಾದ ಎಂ. ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ, ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಸುನೀಲ್‌ ಸುಬ್ರಹ್ಮಣಿ, ಬೋಜೇಗೌಡ, ಶ್ರೀಕಂಠೇಗೌಡ ಮುಂತಾದವರಿದ್ದರು. ಮಧ್ಯಾಹ್ನ ಸಂತ್ರಸ್ತರು ಹಾಗೂ ಜನಪ್ರತಿನಿಧಿಗಳೊಂದಿಗೆ ವೇದಿಕೆಯ ಬಳಿಯಲ್ಲಿಯೇ ಕುಮಾರಸ್ವಾಮಿ ಭೋಜನ ಸ್ವೀಕರಿಸಿದರು.
------------------
ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ ರಚನೆ

ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರವೊಂದನ್ನು ರಚಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

''ಶಾಶ್ವತವಾದ ಪರಿಹಾರ ಕೊಡಗಿನಲ್ಲಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಇದರ ಸದಸ್ಯರಾಗಿತ್ತಾರೆ. ಈಗಾಗಲೇ ಸುಮಾರು 800 ಮಂದಿಯನ್ನು ಗುರುತಿಸಲಾಗಿದ್ದು, ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಉಳಿದ ಪರಿಹಾರದ ಕುರಿತು ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ,''ಎಂದರು.

''ಕೊಡಗಿನಲ್ಲಿ ಸಂತ್ರಸ್ತರಾದ ಮಕ್ಕಳ ವಿದ್ಯಾಭ್ಯಾಸಕ್ಕೆ ಆಗುವ ಒಂದು ವರ್ಷದ ವೆಚ್ಚವನ್ನು ಸರಕಾರವೇ ಭರಿಸಲಿದೆ,'' ಎಂದು ಹೇಳಿದರು.

''ಕೊಡಗಿನ ಮಂದಿ ಧೈರ್ಯವಂತರು. ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬೇಡಿ. ನಿಮ್ಮ ಎಲ್ಲಾ ಸಂಕಷ್ಟವನ್ನು ನಿವಾರಿಸವುದೇ ನಮ್ಮ ಗುರಿ. ನಮ್ಮ ಮಾತಿಗೆ ನಾವು ಬದ್ಧರಾಗಿರುತ್ತೇವೆ,''ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ