ಆ್ಯಪ್ನಗರ

ಸಂಚಾರಿ ಅಶಿಸ್ತು ಸಿಸಿ ಕ್ಯಾಮೆರಾದಲ್ಲಿ ಸೆರೆ

ವಾಹನ ಸವಾರರೇ ಎಚ್ಚರ, ಸರ್ಕಲ್‌ನಲ್ಲಿ ಪೊಲೀಸರಿಲ್ಲ. ಕೆಂಪು ದೀಪ ಇದ್ದರೇನಂತೆ, ಸಿಗ್ನಲ್ ಜಂಪ್ ಮಾಡೋಣ ಎಂದೇನಾದರೂ ಸಂಚಾರಿ ಅಶಿಸ್ತು ಪ್ರದರ್ಶಿಸಿದರೆ- ದಂಡ ಕಟ್ಟಲೇ ಬೇಕಾಗುತ್ತದೆ !

Vijaya Karnataka Web 21 Apr 2016, 4:00 am
- ಪೊಲೀಸರೇ ನಿಮ್ಮನ್ನು ಗಮನಿಸಿ ದಂಡ ವಿಧಿಸಬೇಕು ಎಂದೇನಿಲ್ಲ - ಟ್ರಾಫಿಕ್ ಉಲ್ಲಂಘಿಸಿದರೆ ಮನೆ ಬಾಗಿಲಿಗೇ ಬರಲಿದೆ ದಂಡದ ನೋಟಿಸ್
Vijaya Karnataka Web cc camera traffic indiscipline
ಸಂಚಾರಿ ಅಶಿಸ್ತು ಸಿಸಿ ಕ್ಯಾಮೆರಾದಲ್ಲಿ ಸೆರೆ


ಹರೀಶ ಎಲ್.ತಲಕಾಡು, ಮೈಸೂರು
ವಾಹನ ಸವಾರರೇ ಎಚ್ಚರ, ಸರ್ಕಲ್‌ನಲ್ಲಿ ಪೊಲೀಸರಿಲ್ಲ. ಕೆಂಪು ದೀಪ ಇದ್ದರೇನಂತೆ, ಸಿಗ್ನಲ್ ಜಂಪ್ ಮಾಡೋಣ ಎಂದೇನಾದರೂ ಸಂಚಾರಿ ಅಶಿಸ್ತು ಪ್ರದರ್ಶಿಸಿದರೆ- ದಂಡ ಕಟ್ಟಲೇ ಬೇಕಾಗುತ್ತದೆ !

ಏಕೆಂದರೆ, ಪೊಲೀಸರು ಅಲ್ಲಿ ಇರದಿದ್ದರೇನಂತೆ- ಅವರು ಭದ್ರವಾಗಿ ಜೋಡಿಸಿರುವ ಸಿಸಿ ಕ್ಯಾಮೆರಾಗಳು ನಿಮ್ಮ ಚಲನ ವಲನಗಳನ್ನು ರೆಕಾರ್ಡ್ ಮಾಡುತ್ತಿರುತ್ತವೆ. ಹಾಗಾಗಿ, ನೀವು ಎಸಗಿದ ಸಂಚಾರಿ ಉಲ್ಲಂಘನೆ ಎಂಥಹದ್ದು, ಯಾವ ಹೊತ್ತಿಗೆ ನಡೆಯಿತು, ಅದರ ಸ್ವರೂಪವೇನು - ಎಂಬಿತ್ಯಾದಿ ದಾಖಲೆಯ ಮಾಹಿತಿಗಳನ್ನು ಒಳಗೊಂಡ ‘ದಂಡ ಚೀಟಿ’ ನಿಮ್ಮ ಮನೆಬಾಗಿಲಿಗೆ ಬಂದು ಸೇರುತ್ತದೆ. ಆಗ ನೀವೇ ಠಾಣೆ ಹುಡುಕಿಕೊಂಡು ಹೋಗಿ, ದಂಡ ಕಟ್ಟಬೇಕಾಗುತ್ತದೆ !

ಇದುವರೆಗೂ ರಸ್ತೆ ಬದಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಅಡ್ಡಗಟ್ಟಿ ದಂಡ ವಿಧಿಸುವುದು ಮತ್ತು ಡಿಜಿಟಲ್ ಕ್ಯಾಮೆರಾದ ಮೂಲಕ ಫೋಟೋ ತೆಗೆದು ದಂಡದ ನೋಟಿಸ್ ಕಳುಹಿಸುವುದು ಮಾಡುತ್ತಿದ್ದ ಸಂಚಾರಿ ಪೊಲೀಸರು, ಈಗ ದಂಡ ವಿಧಿಸಲು ಹೊಸ ಮಾರ್ಗೋಪಾಯ ಕಂಡುಕೊಂಡಿದ್ದಾರೆ.

ಅಪರಾಧ ಮತ್ತು ಅಪಘಾತಗಳ ನಿಯಂತ್ರಣ, ಪತ್ತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವ ಪೊಲೀಸರು, ಅವುಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಹಚ್ಚಿ, ನೋಟಿಸ್ ನೀಡುವ ಮೂಲಕ ದಂಡ ವಿಧಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಈ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ದಂಡದ ನೋಟಿಸ್ ನೀಡುತ್ತಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ: ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳಿಂದ ಸೆರೆಯಾಗುವ ದೃಶ್ಯಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಆಟೋಮೇಷನ್ ಕೇಂದ್ರದಲ್ಲಿ ಸಿಸಿ ಟಿವಿಯಲ್ಲಿ ವೀಕ್ಷಿಸುವ ಪೊಲೀಸ್ ಸಿಬ್ಬಂದಿ, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ತಮ್ಮಲ್ಲಿರುವ ಡಿಜಿಟಲ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯಲಿದ್ದಾರೆ. ಬಳಿಕ ಅದನ್ನು ದಾಖಲಿಸಿ, ವಾಹನ ನೋಂದಣಿ ಸಂಖ್ಯೆ ಮೂಲಕ ವಾಹನ ಸವಾರರ ವಿಳಾಸ ಪತ್ತೆ ಹಚ್ಚಿ ನೋಟಿಸ್ ನೀಡಲಾಗುತ್ತಿದೆ.

53 ಸಿಸಿ ಟಿವಿ ಕ್ಯಾಮೆರಾ: ನಗರದ ಹೃದಯ ಭಾಗ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಅಳವಡಿಸಿರುವ 53 ಸಿಸಿ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವ ವಿಡಿಯೋ ದೃಶ್ಯಗಳನ್ನು ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ಪತ್ತೆ ಹಚ್ಚಲಾಗುತ್ತಿದೆ.

ಹೊಸ ವ್ಯವಸ್ಥೆ: ಸದ್ಯಕ್ಕೆ ಸಿಸಿ ಟಿವಿಯಲ್ಲಿ ದಾಖಲಾಗುವ ದೃಶ್ಯಗಳನ್ನು ಪೊಲೀಸ್ ಸಿಬ್ಬಂದಿ, ತಮ್ಮಲ್ಲಿರುವ ಡಿಜಿಟಲ್ ಕ್ಯಾಮೆರಾ ಮೂಲಕ ಸೆರೆ ಹಿಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ದಾಖಲಾಗುವ ವಿಡಿಯೋ ದೃಶ್ಯಗಳನ್ನು ಸ್ಕ್ರೀನ್ ಶಾಟ್ ಮೂಲಕ ಸೆರೆ ಹಿಡಿದು, ಆರ್‌ಟಿಒ ನೀಡುವ ಮಾಹಿತಿ ಮೂಲಕ ವಾಹನ ಸವಾರರ ವಿಳಾಸಕ್ಕೆ ನೋಟಿಸ್ ಜಾರಿ ಮಾಡಲಾಗುತ್ತದೆ.

ದಂಡ ಕಟ್ಟಿಟ್ಟ ಬುತ್ತಿ: ಮನೆಗೆ ನೋಟಿಸ್ ಬಂದಿರುವುದು ಎಂದು ವಾಹನ ಸವಾರರು ನಿರ್ಲಕ್ಷ್ಯವಹಿಸಿದರೂ ಇಂದಲ್ಲ, ನಾಳೆ ದಂಡ ಕಟ್ಟಲೇ ಬೇಕು, ಅವರ ವಾಹನ ನೋಂದಣಿಯನ್ನು ಆಧರಿಸಿ, ಎಷ್ಟು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಪ್ರತಿಯೊಂದು ದಾಖಲಾಗಲಿದ್ದು, ದಂಡ ವಿಧಿಸುವ ಪೊಲೀಸರ ಬ್ಲಾಕ್ ಬೇರಿ ಮೊಬೈಲ್‌ನಲ್ಲಿಯೂ ಸಂಪೂರ್ಣ ಮಾಹಿತಿ ಅಪ್ ಲೋಡ್ ಆಗುತ್ತಿರುತ್ತದೆ. ಒಮ್ಮೆ ವಾಹನ ಸವಾರ ಪೊಲೀಸರಿಗೆ ಸಿಕ್ಕರೆ, ಆತನ ವಾಹನ ನೋಂದಣಿ ಸಂಖ್ಯೆಯನ್ನು ಪೊಲೀಸರು ತಮ್ಮ ಬ್ಲಾಕ್ ಬೇರಿ ಮೊಬೈಲ್‌ನಲ್ಲಿ ನಮೂದಿಸುತ್ತಿದ್ದಂತೆ ಹಿಂದೆ ಉಲ್ಲಂಘಿಸಿರುವ ಎಲ್ಲಾ ವಿವರ ಸಿಗಲಿದ್ದು, ಒಟ್ಟಾರೆ ದಂಡ ಕಟ್ಟುವುದು ಅನಿವಾರ್ಯವಾಗಿರುತ್ತದೆ.

ಮೈಸೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ದಂಡ ಪ್ರಯೋಗವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಕಳೆದ ಒಂದು ವಾರದಿಂದ ನಗರದೆಲ್ಲೆಡೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದ ಮೂಲಕ ಸೆರೆ ಹಿಡಿದು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ನೋಟಿಸ್ ನೀಡಲಾಗುತ್ತಿದೆ. -ಎನ್.ಡಿ.ಬಿರ್ಜೆ, ಡಿಸಿಪಿ, ಅಪರಾಧ ಮತ್ತು ಸಂಚಾರ.

ಈ ಎಲ್ಲ ತಪ್ಪುಗಳು ರೆಕಾರ್ಡ್ ಆಗುತ್ತಿರುತ್ತವೆ ! * ರೆಡ್ ಸಿಗ್ನಲ್ ಇದ್ದಾಗಲೂ ವಾಹನ ಓಡಿಸುವುದು * ವೃತ್ತಗಳಲ್ಲಿ ಝೀಬ್ರಾ ಕ್ರಾಸ್ ದಾಟಿ ವಾಹನ ನಿಲ್ಲಿಸುವುದು * ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡಿಂಗ್ ಮಾಡುವುದು * ಫ್ರೀ ಲೆಫ್ಟ್ ಇಲ್ಲದಿದ್ದರೂ ಚಲಿಸುವುದು. * ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವುದು. * ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುವುದು. * ಕಾರು ಸೇರಿದಂತೆ ನಾಲ್ಕು ಚಕ್ರ ವಾಹನಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುವುದು. * ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು. * ಒನ್ ವೇ(ಏಕ ಮುಖ ಸಂಚಾರ)ಗಳಲ್ಲಿ ಸಂಚರಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ