ಆ್ಯಪ್ನಗರ

ತೆನೆ ಹೊತ್ತರಷ್ಟೇ ‘ಕೈ’ ಸಹಾಯ

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಮಂಡ್ಯ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ನಿಖಿಲ್‌ ಪರ ಹೇಗೆ ಕೆಲಸ ಮಾಡುತ್ತಾರೋ ಅದೇ ರೀತಿ ನಾವೂ ಕೂಡ ಮೈಸೂರು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ತಪ್ಪಿದಲ್ಲಿ ಇಲ್ಲಿನ ವ್ಯತಿರಿಕ್ತ ಪರಿಣಾಮ, ಮೈಸೂರು ಕ್ಷೇತ್ರದ ಮೇಲೂ ಬೀರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.

Vijaya Karnataka 16 Mar 2019, 5:00 am
ಮಂಡ್ಯದಲ್ಲಿ ಸಹಕರಿಸಿದರಷ್ಟೇ ಮೈಸೂರಿನಲ್ಲಿ ಸಹಕಾರ: ಕಾಂಗ್ರೆಸ್‌ಗೆ ಸಚಿವ ಸಾರಾ ಎಚ್ಚರಿಕೆ
Vijaya Karnataka Web cong help only who take thane
ತೆನೆ ಹೊತ್ತರಷ್ಟೇ ‘ಕೈ’ ಸಹಾಯ


ಕೃಷ್ಣರಾಜನಗರ (ಮೈಸೂರು): ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಮಂಡ್ಯ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ನಿಖಿಲ್‌ ಪರ ಹೇಗೆ ಕೆಲಸ ಮಾಡುತ್ತಾರೋ ಅದೇ ರೀತಿ ನಾವೂ ಕೂಡ ಮೈಸೂರು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ತಪ್ಪಿದಲ್ಲಿ ಇಲ್ಲಿನ ವ್ಯತಿರಿಕ್ತ ಪರಿಣಾಮ, ಮೈಸೂರು ಕ್ಷೇತ್ರದ ಮೇಲೂ ಬೀರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ''ನೀವು ನಮ್ಮನ್ನು ಮಂಡ್ಯದಲ್ಲಿ ಒಮ್ಮೆ ಅಪ್ಪಿಕೊಂಡರೆ, ಮೈಸೂರಿನಲ್ಲಿ ನಾವು ನಿಮ್ಮನ್ನು ಐದು ಬಾರಿ ಅಪ್ಪಿಕೊಳ್ಳುತ್ತೇವೆ,'' ಎಂದು ಹೇಳಿದರು.

''ಜೆಡಿಎಸ್‌ಅನ್ನು ಕುಟುಂಬದ ಪಕ್ಷ ಎನ್ನುವುದು ಸರಿಯಲ್ಲ. ಇಡೀ ಪಕ್ಷ ವೇ ಒಂದು ಕುಟುಂಬವಾಗಿದ್ದು, ಪಕ್ಷ ದ ಎಲ್ಲಾ ಕಾರ್ಯಕರ್ತರು ಇದರ ಸದಸ್ಯರಾಗಿದ್ದಾರೆ,''ಎಂದು ವ್ಯಾಖ್ಯಾನಿಸಿದ ಸಾರಾ, ''ಜೆಡಿಎಸ್‌ಅನ್ನು ಕುಟುಂಬದ ಪಕ್ಷ ಎಂದು ವಿರೋಧಿಗಳು ಜರಿಯುತ್ತಾರೆ. ಆದರೆ ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ?,'' ಎಂದು ಪ್ರಶ್ನಿಸಿದರು.

''ಸುಮಲತಾರಿಗೆ ನಿಖಿಲ್‌ ಬೇರೆಯಲ್ಲ, ಅಭಿಷೇಕ್‌ ಬೇರೆಯಲ್ಲ. ತಾಯಿ ಸ್ಥಾನದಲ್ಲಿ ನಿಂತು ನಿಖಿಲ್‌ರಿಗೆ ಆಶೀರ್ವಾದ ಮಾಡಬಹುದಿತ್ತು. ಆದರೆ ಆ ಕೆಲಸ ಆಗಿಲ್ಲ. ಮತದಾರರಾದ ನೀವು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರನ್ನು ಗುರುತಿಸಿ ಮತನೀಡಿ,'' ಎಂದು ಮನವಿ ಮಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್‌ ಮಾತನಾಡಿ, ''ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಬಂದಿಲ್ಲ. ನಾನು ಸ್ವಯಂಘೋಷಿತ ಅಭ್ಯರ್ಥಿ ಅಲ್ಲ. ಪಕ್ಷ ದ ಎಲ್ಲಾ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡ ಮೇಲೆ ನಾನು ಅಭ್ಯರ್ಥಿಯಾಗಿರುವುದು,''ಎಂದು ಹೇಳಿದರು.

ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ''ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಲು ಜನಸೇವೆಗಾಗಿ ನಿಖಿಲ್‌ ರಾಜಕೀಯಕ್ಕೆ ಬಂದಿದ್ದು, ಮಂಡ್ಯ ಜಿಲ್ಲೆಯ ಜನತೆಯ ದನಿಯಾಗಿ ಕೆಲಸ ಮಾಡಲಿದ್ದಾರೆ,''ಎಂದರು.

ಜಿ.ಪಂ.ಸದಸ್ಯ ಅಮಿತ್‌ ದೇವರಹಟ್ಟಿ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಬಸಂತ್‌ ನಂಜಪ್ಪ, ಜಿ.ಪಂ.ಮಾಜಿ ಸದಸ್ಯ ಎ.ಎಸ್‌.ಚನ್ನಬಸಪ್ಪ, ಸಿದ್ದಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಂಪಾಪುರ ಕುಮಾರ್‌, ಮುಡಾ ಅಧ್ಯಕ್ಷ ವಿಜಯಕುಮಾರ್‌, ಎಪಿಎಂಸಿ ಅಧ್ಯಕ್ಷ ಕುಪ್ಪಹಳ್ಳಿ ಸೋಮು, ಡಾ.ಎಂ.ಕೆ.ದೇವೇಂದ್ರಕುಮಾರ್‌, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ಹನಸೋಗೆ ನಾಗರಾಜ್‌, ಮೇಲೂರು ನಾರಾಯಣ, ಮೆಹಬೂಬ್‌ಖಾನ್‌, ಕೆ.ಎಸ್‌.ಮಲ್ಲಪ್ಪ, ವೈ.ಆರ್‌.ಪ್ರಕಾಶ್‌, ಜಾ.ದಳ ಅಧ್ಯಕ್ಷ ಚಂದ್ರಶೇಖರ್‌, ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ