ಆ್ಯಪ್ನಗರ

ಚುನಾವಣಾ ನೀತಿ ಸಂಹಿತೆ: ದಸರೆಗೆ ವಿನಾಯಿತಿ ನೀಡಿದ ಆಯೋಗ

ನಾಡಹಬ್ಬ ಮೈಸೂರು ದಸರಾ ಉತ್ಸವದ ಆಚರಣೆಗೆ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡಲು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಮ್ಮತಿಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಸೇರಿದಂತೆ ಸಚಿವರು, ಶಾಸಕರು ಬುಧವಾರ ಮೈಸೂರಿನಲ್ಲಿ ಆರಂಭವಾಗುವ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಸಿರು ನಿಶಾನೆ ದೊರೆತಿದೆ.

Vijaya Karnataka 10 Oct 2018, 5:00 am
ಜನಪ್ರತಿನಿಧಿಗಳು ನಿರಾಳ
Vijaya Karnataka Web election code of conduct the commission give exemption to dasara
ಚುನಾವಣಾ ನೀತಿ ಸಂಹಿತೆ: ದಸರೆಗೆ ವಿನಾಯಿತಿ ನೀಡಿದ ಆಯೋಗ


ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಆಚರಣೆಗೆ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡಲು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಮ್ಮತಿಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಸೇರಿದಂತೆ ಸಚಿವರು, ಶಾಸಕರು ಬುಧವಾರ ಮೈಸೂರಿನಲ್ಲಿ ಆರಂಭವಾಗುವ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಸಿರು ನಿಶಾನೆ ದೊರೆತಿದೆ.

ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಬಿ.ಸಿ.ಪಾತ್ರ ಅವರು ಈ ಕುರಿತು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ಮಂಗಳವಾರ ಪತ್ರ ಬರೆದು ಆಯೋಗದ ಈ ನಿರ್ಧಾರವನ್ನು ತಿಳಿಸಿದ್ದಾರೆ. ದಸರಾ ಕಾರ್ಯಕ್ರಮಗಳ ವಿಚಾರದಲ್ಲಿ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಯಿಂದ ಮೈಸೂರು ಜಿಲ್ಲೆಗೆ ವಿನಾಯಿತಿ ನೀಡಲಾಗಿದೆ.

ದಸರಾ ಉತ್ಸವದ ಪ್ರಚಾರ ಸಾಮಗ್ರಿಗಳು (ಬ್ಯಾನರ್‌ಗಳು, ಹೋರ್ಡಿಂಗ್‌, ಜಾಹೀರಾತು) ಹಾಗೂ ಗ್ರಾಮೀಣ ದಸರಾಗೆ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೈಸೂರು ಜಿಲ್ಲೆಯ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಸರಾ ಉತ್ಸವದ ಪ್ರಚಾರ ಸಾಮಗ್ರಿಗಳಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳ ಭಾವಚಿತ್ರಗಳು ಇರುವಂತಿಲ್ಲ. ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಮೈಸೂರು ಜಿಲ್ಲೆಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಭಾಷಣಗಳಲ್ಲಿ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಆಯೋಗ ಸೂಚಿಸಿದೆ.

ಕೇಂದ್ರ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಬಂದ ಬೆನ್ನಲ್ಲೇ ಮೂರು ದಿನಗಳಿಂದ ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಂಗಳವಾರ ರಾತ್ರಿ ಅರಮನೆಗೆ ಭೇಟಿ ನೀಡಿ ದಸರಾ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಈ ಮಧ್ಯೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರು ದಸರಾ ಕಾರ್ಯಕ್ರಮಗಳಲ್ಲಿ ಚುನಾಯಿತ ಪ್ರತಿನಿಧಿಗಳ ಜತೆ ವೇದಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಚುನಾವಣಾ ಆಯೋಗ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಹೀಗಾಗಿ, ಅಭಿರಾಂ ಜಿ.ಶಂಕರ್‌ ದಸರಾ ವೇದಿಕೆ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದಾರೆ.

''ನಾನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದು, ದಸರಾ ವಿಶೇಷಾಧಿಕಾರಿಯೂ ಹೌದು. ಹೀಗಾಗಿ, ದಸರಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಬಹುದೇ ಎಂಬ ಬಗ್ಗೆ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೋರಿದ್ದೆ. ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಸ್ಪಷ್ಟೀಕರಣ ಬರುವವರೆಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವ ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಆದರೆ, ದಸರಾ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸುತ್ತೇನೆ'' ಎಂದು ಅಭಿರಾಂ ಮಂಗಳವಾರ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ನಾಡಹಬ್ಬ ಮೈಸೂರು ದಸರಾಗೆ ಮಂಡ್ಯ ಲೋಕಸಭಾ ಉಪ ಚುನಾವಣೆ ನೀತಿ ಸಂಹಿತೆಯ ಬಿಸಿ ತಟ್ಟಿತ್ತು. ಹೀಗಾಗಿ, ಕಳೆದ 3 ದಿನಗಳಿಂದ ಸಚಿವರು, ಶಾಸಕರು ದಸರಾ ಕಾರ್ಯಕ್ರಮಗಳಿಂದಲೇ ದೂರ ಉಳಿದಿದ್ದರು. ಚುನಾಯಿತ ಪ್ರತಿನಿಧಿಗಳು ದಸರಾದಲ್ಲಿ ಭಾಗವಹಿಸಲು ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಸೋಮವಾರ ಪತ್ರ ಬರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ