ಆ್ಯಪ್ನಗರ

ಕೊನೆಗೂ ಸಿಕ್ಕರು ಡ್ಯಾನ್ಸ್‌ ಮಾಡಿದ ರೈತ!

ನಾನು ಡ್ಯಾನ್ಸ್‌ ಮಾಡಿದ್ದನ್ನು ಸಿಎಂ ಸಿದ್ದರಾಮಯ್ಯ ಅಂತ ತಪ್ಪಾಗಿ ಭಾವಿಸಿ ಅವರನ್ನು ಟೀಕಿಸಿದ್ದು ಯಾವ ನ್ಯಾಯ ಸ್ವಾಮಿ?

Vijaya Karnataka 14 Mar 2018, 7:58 am
ಮೈಸೂರು: ‘ನಾನು ಡ್ಯಾನ್ಸ್‌ ಮಾಡಿದ್ದನ್ನು ಸಿಎಂ ಸಿದ್ದರಾಮಯ್ಯ ಅಂತ ತಪ್ಪಾಗಿ ಭಾವಿಸಿ ಅವರನ್ನು ಟೀಕಿಸಿದ್ದು ಯಾವ ನ್ಯಾಯ ಸ್ವಾಮಿ? ಅಷ್ಟಕ್ಕೂ ಸಭ್ಯತೆಯಿಂದ ಡ್ಯಾನ್ಸ್‌ ಮಾಡಿದರೆ ತಪ್ಪೇನು? ನಂಗೆ ಈ ಸೋಷಿಯಲ್‌ ಮೀಡಿಯಾ ಇವೆಲ್ಲಾ ಗೊತ್ತಾಗಲ್ಲ. ಆ ಪಾಟಿ ಸಿದ್ರಾಮಣ್ಣನ ಟೀಕೆ ಮಾಡಾವ್ರಂತಲ್ಲ ಇದು ಸರೀನಾ...?
Vijaya Karnataka Web farmer dance become viarl as cm dance in karnataka
ಕೊನೆಗೂ ಸಿಕ್ಕರು ಡ್ಯಾನ್ಸ್‌ ಮಾಡಿದ ರೈತ!


ಹೀಗೆ ಪ್ರಶ್ನೆ ಮಾಡಿದವರು ಬೇರೆ ಯಾರೂ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮುಖಚರ್ಯೆಯಲ್ಲಿ ಹೋಲುವ 55 ವರ್ಷದ ಚನ್ನಮಾಯಿಗೌಡ. ಇವರು ತಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ವ್ಯಾಪ್ತಿಯ ಮಾಕನಹಳ್ಳಿ ಗ್ರಾಮದವರು. ರೈತ ಕುಟುಂಬ. ಸಾವಯವ ಕೃಷಿಕರು. ಎಂಟು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪತ್ನಿ, ಪುತ್ರ, ಪುತ್ರಿಯೊಂದಿಗೆ ವಾಸವಾಗಿದ್ದಾರೆ.

‘ಬೆಂಗಳೂರು ಸಮೀಪ ಕೊಟ್ಟಿಗೆಹಳ್ಳಿಯ ಸ್ಥಳವೊಂದರಲ್ಲಿ ಈ ಡ್ಯಾನ್ಸ್‌ ನಡೆಯಿತು. ಅಲ್ಲಿ ಅಧಿಕಾರಿಗಳು, ರೈತರು, ಒಳ್ಳೆಯ ಜನರಿದ್ದರು. ಯಾರಾದರೂ ಪದ ಹಾಡ್ತೀರಾ, ಡ್ಯಾನ್ಸ್‌ ಮಾಡ್ತೀರಾ ಅಂತ ಕೇಳಿದ್ರು. ನಾನು ಡ್ಯಾನ್ಸ್‌ ಮಾಡ್ತೀನಿ ಅಂತ ಕುಣಿದೆ. ಆ ಹಾಡಿನಲ್ಲಿ ಒಳ್ಳೆಯ ಅರ್ಥವಿದೆ. ಆದರೆ, ಅದನ್ನು ನಾವು ಹೇಗೆ ನೋಡ್ತೀವಿ ಅನ್ನೋದು ಮುಖ್ಯ. ಎಲ್ಲವೂ ದೇವರ ಚಿತ್ತ ಎಂಬ ಅರ್ಥದಲ್ಲಿ ಆ ಹಾಡನ್ನು ಅರ್ಥಮಾಡಿಕೊಂಡಿದ್ದೀನಿ’ ಎನ್ನುತ್ತಾರೆ ಮಂಗಳವಾರ ‘ವಿಜಯ ಕರ್ನಾಟಕ’ ಜತೆ ಮಾತನಾಡಿದ ಚನ್ನಮಾಯಿಗೌಡ.

ಸಿದ್ದು ವಿರುದ್ಧವೇ ಸ್ಪರ್ಧೆ:

ಅಷ್ಟಕ್ಕೂ ಚನ್ನಮಾಯಿಗೌಡ ಅವರು ಸಿದ್ದರಾಮಯ್ಯ ಅವರ ಅಭಿಮಾನಿ ಏನೂ ಅಲ್ಲ. ಹಾಗೇ ನೋಡಿದರೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧವೇ ವರುಣಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರ ಗುರುತು ಕ್ಯಾರೆಟ್‌. ಚನ್ನಮಾಯಿಗೌಡ ಅವರಿಗೆ ಬಿದ್ದ ವೋಟು ಬರೋಬ್ಬರಿ 392.

‘ಜನಸೇವೆ ಮಾಡ್ಬೇಕು ಅಂತ ಎಲೆಕ್ಷನ್‌ನಲ್ಲಿ ನಿಂತಿದ್ದೆ. ಜನ ಅವಕಾಶ ಕೊಟ್ಟರೆ ಜನಸೇವೆ ಮಾಡ್ತೀನಿ’ ಅಂತಾರೆ. ಈ ಬಾರಿಯೂ ಅವರು ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆಯೋ ಅಲ್ಲಿಯೇ ಪಕ್ಷೇತರನಾಗಿ ಸ್ಪರ್ಧಿಸುತ್ತಾರಂತೆ! ಸಿದ್ದರಾಮಯ್ಯ ಅವರೇನಾದರೂ ಆಹ್ವಾನಿಸಿದರೆ ಆಗ ಸ್ಪರ್ಧಿಸದೇ ಅವರ ಪರ ಪ್ರಚಾರ ಮಾಡುತ್ತಾರಂತೆ. ಈ ಹಿಂದೆ ಕಾಂಗ್ರೆಸ್‌ನಲ್ಲಿಯೂ ಇದ್ದರಂತೆ.

ಚನ್ನಮಾಯಿಗೌಡರು ಈವರೆಗೂ ಸಿದ್ದರಾಮಯ್ಯ ಜೊತೆ ಮಾತಾಡಿಲ್ಲ. ‘ಎದುರಿಗೆ ಸಿಕ್ಕಾಗ ಕೈಮುಗಿದು ‘ನಮಸ್ಕಾರ’ ಎಂದಿದ್ದೇನೆ. ಅವರು ‘ಓಹೋ’ ಎನ್ನುತ್ತಾ ಕೈಮುಗಿದು ಮುಂದೆ ಸಾಗಿದ್ದಾರೆ’ ಎನ್ನುತ್ತಾರೆ ಚನ್ನಮಾಯಿಗೌಡ. ‘‘ಸಿದ್ದರಾಮಯ್ಯ ಅವರೇ ಡ್ಯಾನ್ಸ್‌ ಮಾಡಿದ್ದಾರೆಂದು ನನ್ನ ಬಗ್ಗೆ ಜನರಿಗೆ ಗೊತ್ತಾಯಿತಲ್ಲಾ ಅದೇ ಸಂತೋಷ’’ ಎಂದು ಮುಗುಳ್ನಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ