ಆ್ಯಪ್ನಗರ

ರೈತರು, ಬಡವರ ನೆರವಿಗೆ ಬಾರದ ಬಿಜೆಪಿ: ಆರೋಪ

ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಚುನಾವಣಾ ಸಮಯದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಮೋಸ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಆರೋಪಿಸಿದರು.

Vijaya Karnataka 4 Oct 2018, 5:00 am
ಕೃಷ್ಣರಾಜನಗರ : ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಚುನಾವಣಾ ಸಮಯದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಮೋಸ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಆರೋಪಿಸಿದರು.
Vijaya Karnataka Web farmers bjp not to help the poor charges
ರೈತರು, ಬಡವರ ನೆರವಿಗೆ ಬಾರದ ಬಿಜೆಪಿ: ಆರೋಪ


ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ನಡೆದ ಮೈಸೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಲೋಕ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

''ರೈತರು ಮತ್ತು ಬಡವರ ನೆರವಿಗೆ ಬಾರದ ಬಿಜೆಪಿಯವರು ಪುಕ್ಕಟೆ ಪ್ರಚಾರದಲ್ಲಿ ಕಾಲ ಕಳೆಯುತ್ತಿದ್ದು, ಇವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ '' ಎಂದು ಎಚ್ಚರಿಕೆ ನೀಡಿದರು.

''ದೇಶಕ್ಕಾಗಿ ತಮ್ಮ ಪ್ರಾಣವನ್ನು ನೀಡಲು ಸದಾ ಸಿದ್ಧರಾಗಿರುವ ವೀರ ಯೋಧರ ನಾಡು ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿ ಅಪಾರ ಪ್ರಮಾಣದ ನಷ್ಟ ಹಾಗೂ ಸಾವು ನೋವುಗಳು ಸಂಭವಿಸಿದಾಗ ಪ್ರಧಾನ ಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ನೊಂದ ಜನರ ಸಹಾಯಕ್ಕೆ ಬಾರದೆ ರಾಜ್ಯದ ಜನತೆಗೆ ಅಪಮಾನ ಮಾಡಿದ್ದು ಇದನ್ನು ಯಾರೂ ಕ್ಷ ಮಿಸುವುದಿಲ್ಲ'' ಎಂದರು.

'' ಈ ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆ ಹಾಗೂ ಚುನಾವಣೆಯ ಸಮಯದಲ್ಲಿ ಪಕ್ಷ ದ ಪ್ರಣಾಳಿಕೆಯಲ್ಲಿ ಹೇಳಿದ್ದ ಕೆಲಸಗಳನ್ನು ಚಾಚೂ ತಪ್ಪದೆ ಈಡೇರಿಸಿದ್ದಾರೆ. ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿರುವ ಡಿ.ರವಿಶಂಕರ್‌ ಅವರು ಮುಂದಿನ ಚುನಾವಣೆಯಲ್ಲಿ ಜಯದಾಖಲಿಸುವುದು ಶತಸಿದ್ಧ'' ಎಂದು ಭವಿಷ್ಯ ನುಡಿದರು.

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಮಾತನಾಡಿ, ''ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆದೇಶದಂತೆ ಇಂದಿನಿಂದ ಆರಂಭವಾಗಿರುವ ಕಾಂಗ್ರೆಸ್‌ ಪಕ್ಷ ದ ಲೋಕಸಂಪರ್ಕ ಅಭಿಯಾನ ಕಾರ್ಯಕ್ರಮ ನ.19 ರಂದು ನಡೆಯುವ ದಿ.ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯವರೆಗೂ ನಡೆಯಲಿದ್ದು, ಅಲ್ಲಿಯವರೆಗೆ ಬೂತ್‌ಮಟ್ಟದ ಕಾರ್ಯಕರ್ತರು ಮತದಾರರ ಮನೆಗಳಿಗೆ ತೆರಳಿ ಬಿಜೆಪಿಯ ದುರಾಡಳಿತದ ಬಗ್ಗೆ ತಿಳಿಸಲಿದ್ದಾರೆ ''ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿ.ಪಂ. ಪ್ರತಿಪಕ್ಷದ ನಾಯಕ ಡಿ.ರವಿಶಂಕರ್‌ ಮಾತನಾಡಿದರು.

ರಾಜ್ಯಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಕೆಪಿಸಿಸಿ ಕಾರ್ಯದರ್ಶಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅಶ್ವಿನ್‌ ಕುಮಾರ್‌ ರೈ ಅವರುಗಳನ್ನು ತಾಲೂಕು ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಲಾಯಿತು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆ.ಸಿ.ಪುಟ್ಟಸಿದ್ದಶೆಟ್ಟಿ, ತಾ.ಪಂ. ಅಧ್ಯಕ್ಷ ಎಚ್‌.ಟಿ.ಮಂಜುನಾಥ್‌, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಚಂದ್ರಶೇಖರ್‌, ಕೆಪಿಸಿಸಿ ಕಾರ್ಯದರ್ಶಿಗಳಾದ ಗುರುಪಾದಸ್ವಾಮಿ, ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸೇವಾದಳದ ಉಪಾಧ್ಯಕ್ಷ ರಾದ ಪ್ರಕಾಶ್‌ಕುಮಾರ್‌, ಹೆಡತಲೆ ಮಂಜುನಾಥ್‌, ಒಬಿಸಿ ಸಮಿತಿ ಅಧ್ಯಕ್ಷ ಎಚ್‌.ಎನ್‌.ಮಾರುತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾದ ಎಂ.ಎಸ್‌.ಮಹದೇವ್‌, ಉದಯಕುಮಾರ್‌, ರಾಘವೇಂದ್ರಸ್ವಾಮಿ, ವಕ್ತಾರ ಸೈಯದ್‌ಜಾಬೀರ್‌, ಕಾಂಗ್ರೆಸ್‌ ಮುಖಂಡರಾದ ಎಸ್‌.ಪಿ.ತಮ್ಮಯ್ಯ, ಜಿ.ಆರ್‌.ರಾಮೇಗೌಡ, ಜೆ.ಶಿವಣ್ಣ, ಕೋಳಿಪ್ರಕಾಶ್‌, ಶ್ರೀನಿವಾಸ್‌, ಗಂಧನಹಳ್ಳಿ ಹೇಮಂತ್‌, ಸುನಿತಾ, ವೀಣಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ