ಆ್ಯಪ್ನಗರ

ಮೈಸೂರಿನಲ್ಲಿ ಟೋಲ್‌ ದರ ಏರಿಕೆ ಹೊರೆ - ರೈತರಿಗೆ ಬರೆ, ಬೃಹತ್ ಪ್ರತಿಭಟನೆಗೆ ತೀರ್ಮಾನ

ಪ್ರವಾಹ, ಬೆಳೆ ನಾಶ ಸೇರಿದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ಟೋಲ್‌ ಹಾಗೂ 5 ರೂ ತನಕ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಏರಿಕೆ ಮಾಡಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ರೈತರು ಸಿದ್ಧತೆ ನಡೆಸುತ್ತಿದ್ದಾರೆ.

Vijaya Karnataka Web 11 Dec 2019, 4:56 pm
ಐತಿಚಂಡ ರಮೇಶ್‌ ಉತ್ತಪ್ಪ
Vijaya Karnataka Web toll karnataka

ಮೈಸೂರು: ಪ್ರವಾಹ, ಬೆಳೆ ನಾಶ ಸೇರಿದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ಟೋಲ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ನಂಜನಗೂಡು, ತಿ.ನರಸೀಪುರ ರಸ್ತೆಯ ಯಡದೊರೆಯಲ್ಲಿಈಗಾಗಲೇ ಟೋಲ್‌ ಸಂಗ್ರಹ ಆರಂಭವಾದರೆ, ಚಾಮರಾಜನಗರ ಜಿಲ್ಲೆಯ ಕನ್ನೇಗಾಲದಲ್ಲಿಒಂದೆರಡು ದಿನಗಳಲ್ಲಿ ಶುರುವಾಗಲಿದೆ. ಇದರ ವಿರುದ್ಧ ಬೀದಿಗಿಳಿಯಲು ರೈತರು ಸಿದ್ಧತೆ ನಡೆಸುತ್ತಿದ್ದಾರೆ.

ಮೈಸೂರು, ನಂಜನಗೂಡು, ಗುಂಡ್ಲುಪೇಟೆ ಮಾರ್ಗ ಹಾಗೂ ಮೈಸೂರು- ತಿ.ನರಸೀಪುರ ಮಾರ್ಗದಲ್ಲಿ ರೈತರೇ ಹೆಚ್ಚಾಗಿದ್ದು, ಹಲವು ಕಾರಣ ಗಳಿಂದಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭ ಟೋಲ್‌ ಹಾಗೂ ಬಸ್‌ ಪ್ರಯಾಣ ದರ ಏರಿಕೆ ವಿರುದ್ಧ ತಿರುಗಿಬಿದ್ದಿದ್ದಾರೆ. ರೈತರ ಟ್ರ್ಯಾಕ್ಟರ್‌ಗೆ ಕೂಡ ದರ ವಸೂಲಿ ಮಾಡು ತ್ತಿರುವ ಹಿನ್ನೆಲೆಯಲ್ಲಿ ಬೃಹತ್‌ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದೆ.

ಟೋಲ್‌ ಕಾಮಗಾರಿ ಆರಂಭಕ್ಕೆ ವಿರೋಧ

ಟ್ರ್ಯಾಕ್ಟರ್‌ಗೂ ಶುಲ್ಕ: ಹೆದ್ದಾರಿಯ ಎರಡೂ ಬದಿಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿಯನ್ನೇ ರೈತರು ನಂಬಿದ್ದಾರೆ. ಕೃಷಿ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ನಿತ್ಯ ಟ್ರ್ಯಾಕ್ಟರ್‌, ಆಟೋ ಟಿಪ್ಪರ್‌ ಸೇರಿದಂತೆ ಹಲವು ವಾಹನ ಗಳನ್ನು ರೈತರು ಬಳಸುತ್ತಿದ್ದಾರೆ. ಈ ಎಲ್ಲಾ ವಾಹನಗಳಿಗೆ ಟೋಲ್‌ ಸಂಗ್ರಹಿಸಲಾಗುತ್ತಿದೆ. ಇವುಗಳಿಗೆ 40 ರೂ. ನಿಗದಿಪಡಿಸಲಾಗಿದೆ. ಇದರ ವಿರುದ್ಧ ರೈತರು ತಿರುಗಿ ಬಿದ್ದಾಗ ಚೌಕಾಸಿ ಮಾಡಲಾಗುತ್ತಿದ್ದು, 25 ರೂ.ಗಳನ್ನು ನೀಡುವಂತೆ ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ ನುಗ್ಗಿಸಲು ಯತ್ನಿಸಿದಾಗ ಸಿಬ್ಬಂದಿ ಮಾತಿನ ಚಕಮಕಿ ನಡೆಸಿದ್ದಾರೆ.

ಟೋಲ್‌ ಸಂಗ್ರಹಣೆಗೆ ವಿರೋಧ

ಕೆಎಸ್‌ಆರ್‌ಟಿಸಿ ಬಿಸಿ:
ಮಂಗಳವಾರದಿಂದ ಗ್ರಾಮಾಂತರ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಮೈಸೂರು-ಕಡಕೊಳ-ನಂಜನಗೂಡು-ಗುಂಡ್ಲುಪೇಟೆ ಮಾರ್ಗದಲ್ಲಿ 4 ರೂ. ಹಾಗೂ ತಿ.ನರಸೀಪುರ ಮಾರ್ಗದಲ್ಲಿ 5 ರೂ. ಹೆಚ್ಚಿಸಲಾಗಿದೆ. ನಿರಂತರ ಬರದ ಬಳಿಕ ಈ ವರ್ಷ ಪ್ರವಾಹದಿಂದಾಗಿ ರೈತರು ಕಂಗೆಟ್ಟಿದ್ದಾರೆ. ಬೆಳೆ ನಾಶವಾಗಿದೆ. ಇರುವ ಫಸಲಿಗೆ ಸೂಕ್ತ ದರ ಸಿಗುತ್ತಿಲ್ಲ. ಸಾಲ ಕೂಡ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ ಇಂತಹ ಸ್ಥಿತಿಯಲ್ಲಿಟೋಲ್‌ ದರದೊಂದಿಗೆ ಬಸ್‌ ಪ್ರಯಾಣ ದರವನ್ನೂ ಹೆಚ್ಚಿಸುವುದುರು ನಮ್ಮನ್ನು ಇನ್ನಷ್ಟು ತೊಂದರೆಗೆ ದೂಡಲಿದೆ ಎಂದು ರೈತ ಮುಖಂಡ ರಾಜುಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾರ್ಥೇನಿಯಂ ಮಧ್ಯ ಟೋಲ್‌ ಟಾಯ್ಲೆಟ್‌

ಕನ್ನೇಗಾಲದಲ್ಲಿ ಶೀಘ್ರ ಟೋಲ್‌ ಸಂಗ್ರಹ:
ಮೈಸೂರು-ನಂಜನಗೂಡು ರಸ್ತೆಯಲ್ಲಿಈಗಾಗಲೇ ಟೋಲ್‌ ಸಂಗ್ರಹ ಶುರುವಾಗಿದ್ದು, ಶೀಘ್ರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕನ್ನೇಗಾಲದಲ್ಲಿಯೂ ಆರಂಭವಾಗಲಿದೆ. ಸ್ಥಳೀಯರ ವಿರೋಧದ ನಡುವೆಯೂ ಅಲ್ಲಿ ಸಿದ್ಧತೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಮಂಗಳವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆ ನಡೆಸಿದ್ದಾರೆ. ಫಾಸ್ಟ್‌ಟ್ಯಾಗ್‌ ಕುರಿತು ಸ್ಥಳದಲ್ಲಿಯೇ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಮಾಹಿತಿ ನೀಡುವಂತೆ ಸೂಚನೆ ನಿಡಿದ್ದಾರೆ. ಟೋಲ್‌ ಸಂಗ್ರಹಿಸುವ ಸಂಸ್ಥೆಯ ಸಿಬ್ಬಂದಿ ಟೋಲ್‌ ಕೇಂದ್ರದಲ್ಲಿ ತಾಂತ್ರಿಕ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಾಹನ ಚಾಲಕರಿಗೆ ಬಿತ್ತಿ ಪತ್ರ ನೀಡುತ್ತಿದ್ದಾರೆ.

ಟೋಲ್‌ ಸಂಗ್ರಹ ತಾತ್ಕಾಲಿಕ ಮುಂದೂಡಿಕೆ

ನಂಜನಗೂಡು ಮಾರ್ಗ ಶುಲ್ಕ
ಕಾರು, ಜೀಪ್‌ ಸೇರಿದಂತೆ ಲಘುವಾಹನ- 45 ರೂ, ರಿಟರ್ನ್‌ ಜರ್ನಿ 70 ರೂ., ಮಾಸಿಕ 1,550
ಮಿನಿ ಬಸ್‌, ಎಲ್‌ಸಿವಿ ಒನ್‌ ವೇ- 75 ರೂ, ರಿಟನ್‌-155, ಮಾಸಿಕ-2,500 ರೂ.
ಟ್ರಕ್‌, ಬಸ್‌ ಒನ್‌ ವೇ - 155 ರೂ, ರಿಟರ್ನ್‌ ಜರ್ನಿ 270, ಮಾಸಿಕ 5,240

ಡಿಸೆಂಬರ್ 15ರ ಒಳಗೆ ಬೇಕೇ ಬೇಕು ಫಾಸ್ಟ್‌ ಟ್ಯಾಗ್! ಹೆದ್ದಾರಿ ಟೋಲ್‌ಗಳಲ್ಲಿ ಸರತಿ ಸಾಲಲ್ಲಿ ನಿಂತ ಸವಾರರು

ಟೋಲ್‌ ಹೆದ್ದಾರಿ ದೂರ:
ಮೈಸೂರು-ತಿ.ನರಸೀಪುರ 30 ಕಿ.ಮೀ.
ಮೈಸೂರು-ತಮಿಳುನಾಡು ಮೆಟ್ಟೂರು ಗಡಿ 150 ಕಿ.ಮೀ
ಮೈಸೂರು-ನಂಜನಗೂಡು-ಗುಂಡ್ಲುಪೇಟೆ, ಕೇರಳ ಕೋಯಿಕೋಡು ಗಡಿ 155 ಕಿ.ಮೀ

ಸರ್ವಿಸ್ ರಸ್ತೆಯೇ ಇಲ್ಲ:
ಮೈಸೂರು ನಂಜನಗೂಡು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಯೇ ಇಲ್ಲ. ನಿಯಮದ ಪ್ರಕಾರ ಸರ್ವಿಸ್ ರಸ್ತೆ ಇಲ್ಲದ ಕಡೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎನ್ನಲಾಗಿದೆ. ಈ ಹಿಂದೆ ಆರ್.ಧ್ರುವನಾರಾಯಣ್ ಅವರು ಸಂಸದರಾಗಿದ್ದಾಗ ಸರ್ವಿಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದರು. ಅಧಿಕಾರಿಗಳು ಸರ್ವೇ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಟಪಕ್ಷ ತಾಂಡವಪುರದಿಂದ ನಂಜನಗೂಡುವರೆಗೆ ಸರ್ವಿಸ್ ರಸ್ತೆ ನಿರ್ಮಿಸಿ ಎಂದು ಸ್ಥಳೀಯರುಒತ್ತಾಯಿಸುತ್ತಿದ್ದಾರೆ. ಸರ್ವಿಸ್ ರಸ್ತೆಗೆ ಆಗ್ರಹಿಸಿ ಈ ಹಿಂದೆ ನಂಜನಗೂಡ್ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು. ಸರ್ವಿಸ್ ರಸ್ತೆ ಇಲ್ಲದಿರುವ ಕುರಿತು ಶಾಸಕ ಹರ್ಷವರ್ಧನ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣ ಟೋಲ್ ರದ್ದುಪಡಿಸಬೇಕು ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದಿದ್ದಾರೆ.

ಗ್ರಾಮಗಳಿಂದ ದೂರ ಇರುವ ಹೆದ್ದಾರಿಯಲ್ಲಿಸಂಗ್ರಹ ಮಾಡಲಿ. ಆದರೆ, ನಂಜನಗೂಡು ರಸ್ತೆಯಲ್ಲಿ ಟೋಲ್‌ ಸಂಗ್ರಹ ಮಾಡುವುದು ಅವೈಜ್ಞಾನಿಕ. ಇದು ರೈತರ ಮೇಲಿನ ಹೊಡೆತ. ತಕ್ಷಣ ಈ ರಸ್ತೆಯಲ್ಲಿ ಶುಲ್ಕ ಸಂಗ್ರಹ ನಿಲ್ಲಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರು, ರೈತರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಅವರಿಗೆ ಎಲ್ಲಾ ಸಹಕಾರ ನೀಡುತ್ತೇನೆ.
-ಹರ್ಷವರ್ಧನ, ನಂಜನಗೂಡು ಶಾಸಕರು.


ಟೋಲ್‌ ಸಂಗ್ರಹದ ವಿರುದ್ಧ ಡಿ.14ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಈ ರಸ್ತೆಯೇ ಸಂಚಾರಕ್ಕೆ ಅಯೋಗ್ಯವಾಗಿದೆ. ಅದರಲ್ಲಿಯೂ ರೈತರ ಮೇಲೆ ಭಾರೀ ಹೊರೆಯಾಗಲಿದೆ. ಕೃಷಿ ಸಾಮಗ್ರಿ ಸಾಗಿಸಲು ಕೂಡ ಟೋಲ್‌ ನೀಡಬೇಕಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ.
-ಆರ್‌.ವಿದ್ಯಾಸಾಗರ್‌, ಹಿಮ್ಮಾವು ರಘು, ರೈತ ಮುಖಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ