ಆ್ಯಪ್ನಗರ

ಹೆಣ್ಣು ಹುಲಿ ಶಂಕಾಸ್ಪದ ಸಾವು

ತಾಲೂಕಿನ ಹಾರೋಹಳ್ಳಿ ಸಮೀಪದ ಚಿಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಸಂಶಯಾಸ್ಪದವಾಗಿ ಮೃತಪಟ್ಟಿದೆ.

Vijaya Karnataka 26 Sep 2018, 5:00 am
ಮೈಸೂರು: ತಾಲೂಕಿನ ಹಾರೋಹಳ್ಳಿ ಸಮೀಪದ ಚಿಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಸಂಶಯಾಸ್ಪದವಾಗಿ ಮೃತಪಟ್ಟಿದೆ.
Vijaya Karnataka Web female tiger suspicious death
ಹೆಣ್ಣು ಹುಲಿ ಶಂಕಾಸ್ಪದ ಸಾವು


ಸೋಮವಾರ ಮಧ್ಯಾಹ್ನ ಮೈಸೂರು ವಿಭಾಗದ ಚಿಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 5ರಿಂದ ಆರು ವರ್ಷದ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ಹುಲಿಯ ಮೈಮೇಲೆ ಯಾವುದೇ ಗಾಯದ ಗುರುತುಗಳಾಗಲಿ, ಹುಲಿಯ ಉಗುರನ್ನು ಕಿತ್ತು ಹಾಕಿರುವ ಪ್ರಯತ್ನವೂ ನಡೆದಿಲ್ಲ. ಆದರೆ, ಹುಲಿ ಇರುವ ಬಳಿಯಲ್ಲಿ ಟ್ರ್ಯಾಕ್ಟರ್‌ ಟೈರ್‌ನ ಗುರುತು ಕಂಡುಬಂದಿದ್ದು, ಯಾರೋ ಬೇರೆ ಸ್ಥಳದಿಂದ ಟ್ರ್ಯಾಕ್ಟರ್‌ನಲ್ಲಿ ತಂದು ಇಲ್ಲಿ ಹಾಕಿ ಹೋಗಿರುವ ಶಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ಮಂಗಳವಾರ ನಡೆಯಿತು.

''ಹುಲಿಗೆ ವಿಷ ಪ್ರಾಶನವಾಗಿರುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ಇದು ಸಹಜ ಸಾವೇ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಹುಲಿಯ ದೇಹದ ಕೆಲವು ಭಾಗಗಳ ಮಾದರಿಯನ್ನು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿ ಬಂದ ನಂತರವೇ ಈ ಕುರಿತು ಸತ್ಯ ತಿಳಿಯಲಿದೆ,'' ಎಂದು ಡಿಸಿಎಫ್‌ ಹನುಮಂತಪ್ಪ 'ವಿಜಯ ಕರ್ನಾಟಕ'ಕ್ಕ ತಿಳಿಸಿದರು.

''ಹುಲಿಯು ಮೂರು ದಿನಗಳ ಹಿಂದೆಯೇ ಮೃತಪಟ್ಟಿದೆ. ಹಾಗಾಗಿ ಹುಲಿಯ ದೇಹ ಕೊಳೆತ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ದೇಹದಲ್ಲಿ ಆಂತರಿಕವಾಗಿ ಯಾವುದೇ ಪೆಟ್ಟುಗಳಾಗಿರುವ ಗುರುತು ಹಾಗೂ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿಲ್ಲ. ಅಲ್ಲದೆ, ಕರುಳಿನ ಭಾಗದಲ್ಲಿಯೂ ವಿಷ ಕಂಡುಬಂದಿಲ್ಲ. ಹಾಗಾಗಿ ಮೇಲುನೋಟಕ್ಕೆ ಇದು ಸಹಜ ಸಾವಿನ ರೀತಿ ಕಂಡುಬರುತ್ತಿದೆ. ಆದರೂ, ಹುಲಿಯ ಹೃದಯ, ಕಿಡ್ನಿ, ಕರುಳಿನ ಭಾಗದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,'' ಎಂದು ಪಶುವೈದ್ಯ ನಾಗರಾಜ್‌ ತಿಳಿಸಿದರು.

-----------

ಹುಲಿಯ ಸಾವಿನ ಬಗ್ಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬೇರೆ ಸ್ಥಳದಿಂದ ತಂದು ಹಾಕಿರುವ ಗುರುತು ಪತ್ತೆಯಾಗಿದೆ. ಹುಲಿ ಸಹಜವಾಗಿಯೇ ಸತ್ತು ಹೋಗಿರುವುದನ್ನು ಗಮನಿಸಿದವರು ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಬರಬಹುದು ಎಂಬ ಭಯದಿಂದ ಈ ರೀತಿ ಮಾಡಿರಬಹುದು.
-ಹನುಮಂತಪ್ಪ, ಡಿಸಿಎಫ್‌, ಮೈಸೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ