ಆ್ಯಪ್ನಗರ

ಅತಿ ಆಸೆಯಿಂದ ನೆಮ್ಮದಿ ಹಾಳು: ಪೇಜಾವರ ಶ್ರೀ

ಹುಟ್ಟಿದ ನಂತರ ಅನೇಕ ಸುಖ, ದುಃಖಗಳನ್ನು ಅನುಭವಿಸುತ್ತೇವೆ. ಆದರೆ, ಬದುಕಿನ ಅಂತ್ಯಕಾಲದಲ್ಲಿ ಸಂತೋಷದಿಂದ ಸಾಯಬೇಕು. ನಮ್ಮ ಸಾವು ನೋಡಿ ಇತರರು ದುಃಖಿಸಬೇಕು, ಆ ರೀತಿಯಲ್ಲಿ ನಾವು ಬದುಕುಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.

Vijaya Karnataka 4 Aug 2019, 5:00 am
ಮೈಸೂರು: ಹುಟ್ಟಿದ ನಂತರ ಅನೇಕ ಸುಖ, ದುಃಖಗಳನ್ನು ಅನುಭವಿಸುತ್ತೇವೆ. ಆದರೆ, ಬದುಕಿನ ಅಂತ್ಯಕಾಲದಲ್ಲಿ ಸಂತೋಷದಿಂದ ಸಾಯಬೇಕು. ನಮ್ಮ ಸಾವು ನೋಡಿ ಇತರರು ದುಃಖಿಸಬೇಕು, ಆ ರೀತಿಯಲ್ಲಿ ನಾವು ಬದುಕುಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
Vijaya Karnataka Web frustrated by the wish pejawara shree
ಅತಿ ಆಸೆಯಿಂದ ನೆಮ್ಮದಿ ಹಾಳು: ಪೇಜಾವರ ಶ್ರೀ


ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಹಿರಿಯ, ಕಿರಿಯ ಶ್ರೀಗಳ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಶನಿವಾರ ಸಾಂಸ್ಕೃತಿಕ ಕಾರ‍್ಯಕ್ರಮದ ಬಳಿಕ ಅವರು ಪ್ರವಚನ ನೀಡಿದರು.

''ಜೀವನದಲ್ಲಿ ಸಾಧನೆಯ ಮೆಟ್ಟಿಲನ್ನು ಹಂತ, ಹಂತವಾಗಿ ಏರಬೇಕು. ಪ್ರಾಮಾಣಿಕವಾಗಿ ಧನ, ಸಂಪತ್ತುಗಳಿಸಬೇಕು. ಹಾಗೇ ಗಳಿಸಿದರೆ ಮಾತ್ರವೇ ನಮ್ಮಲ್ಲಿ ತೃಪ್ತಿಯಿರುತ್ತದೆ. ಇಲ್ಲವಾದರೆ, ಯಾವ ಸಮಯದಲ್ಲಿ ಏನಾಗುವುದೋ ಎಂದು ನೆಮ್ಮದಿ ಹಾಳಾಗುತ್ತದೆ. ಅತಿ ಆಸೆ ಪಡದೇ, ದೇವರು ಕೊಟ್ಟಿದ್ದಷ್ಟನ್ನು ಸ್ವೀಕರಿಸಿ ನೆಮ್ಮದಿಯಿಂದ ಜೀವನ ಸಾಗಿಸಬೇಕು,''ಎಂದು ತಿಳಿಸಿದರು.

ಬೆಂಗಳೂರಿನ ವಿದ್ವಾನ್‌ ಬ್ರಹ್ಮಣ್ಯಾಚಾರ್ಯ ಅವರು ದಾಸ ವೈಭವ ಪುರಂದರದಾಸರು ವಿಷಯ ಕುರಿತು ಮಾತನಾಡಿದರು. ''ಕೃಷ್ಣ ದೈತ್ಯರ ಸಂಹಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಲು ಅವತರಿಸುತ್ತಾನೆ. ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಅದೆಂತಹ ಕಠಿಣ ಪರಿಸ್ಥಿತಿ ಎದುರಾದರೂ ಆತ ಭಕ್ತರನ್ನು ರಕ್ಷಿಸುತ್ತಾನೆ,''ಎಂದರು.

''ಜ್ಞಾನ, ಧನ ಹೀಗೆ ಲಕ್ಷ್ಮಿಯಲ್ಲಿ ಎರಡು ಮುಖವಿದೆ. ಕೇವಲ ಧನಲಕ್ಷ್ಮಿಯ ಆಗಮನವನ್ನು ಮಾತ್ರವೇ ಬಯಸದೇ, ಜ್ಞಾನ ಲಕ್ಷ್ಮಿಯನ್ನೂ ಬರಮಾಡಿಕೊಳ್ಳಬೇಕು. ಸಂಪತ್ತುಗಳಿಸುವುದು ಎಷ್ಟು ಕಷ್ಟವೋ, ಅದನ್ನು ಉಳಿಸುವುದು ಅಷ್ಟೇ ಕಷ್ಟ. ಹಾಗಾಗಿ, ಭಗವಂತನನ್ನು ನಂಬಿ ಪ್ರಾಮಾಣಿಕವಾದ ಜೀವನವನ್ನು ಸಾಗಿಸಬೇಕು. ಇದರಿಂದ ಆನಂದ, ಪರಮಾನಂದ ನಮ್ಮನ್ನು ಆವರಿಸುವುದು,''ಎಂದು ತಿಳಿಸಿದರು.

ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ನಮ್ಮೊಳಗಿನ ಅರಿಷಡ್ವರ್ಗಗಳನ್ನು ನಿಗ್ರಹಿಸುವುದು ಬಹಳ ಕಷ್ಟ. ಹಾಗಾಗಿಯೂ, ಎಚ್ಚರ ತಪ್ಪಿದರೆ ಅದರಿಂದ ಅನಾಹುತ ಖಂಡಿತ. ಧ್ಯಾನ, ಪೂಜೆಯ ಮೂಲಕ ಸಜ್ಜನರ ಸಂಗದೊಂದಿಗೆ ಭಗವಂತನ ಮೊರೆ ಹೋಗಬೇಕು,'' ಎಂದು ತಿಳಿಸಿದರು.

ವಿದುಷಿ ಬೆಂಗಳೂರಿನ ಸಂಗೀತಾ ಖಾಕಂಡಗಿ ಅವರು ಲಕ್ಷ್ಮಿಬಾರಮ್ಮ, ಭಾಗ್ಯಲಕ್ಷ್ಮಿ ಬಾರಮ್ಮ ಸೇರಿದಂತೆ ಪುರಂದರದಾಸರ ಅನೇಕ ಕೀರ್ತನೆಗಳನ್ನು ಸುಮಧುರವಾಗಿ ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ