ಆ್ಯಪ್ನಗರ

‘ದೀಪದ ಬಾಲೆ’ ಗೀತಾ ಕೃಷ್ಣಕಾಂತ್‌ ಉಪ್ಲೇಕರ್‌ ನಿಧನ

ಮೈಸೂರಿನ ಜಗನ್ಮೋಹನ ಅರಮನೆಯ ಶ್ರೀ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿರುವ 'ಗ್ಲೋ ಆಫ್‌ ಹೋಪ್‌' ಕಲಾಕೃತಿಯಲ್ಲಿರುವ ಬಾಲೆ ಗೀತಾ ಕೃಷ್ಣಕಾಂತ್‌ ಉಪ್ಲೇಕರ್‌ ತಮ್ಮ 102ನೇ ವಯಸ್ಸಿನಲ್ಲಿ ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು.

Vijaya Karnataka 4 Oct 2018, 5:00 am
ಮೈಸೂರು: ಮೈಸೂರಿನ ಜಗನ್ಮೋಹನ ಅರಮನೆಯ ಶ್ರೀ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿರುವ 'ಗ್ಲೋ ಆಫ್‌ ಹೋಪ್‌' ಕಲಾಕೃತಿಯಲ್ಲಿರುವ ಬಾಲೆ ಗೀತಾ ಕೃಷ್ಣಕಾಂತ್‌ ಉಪ್ಲೇಕರ್‌ ತಮ್ಮ 102ನೇ ವಯಸ್ಸಿನಲ್ಲಿ ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು.
Vijaya Karnataka Web geeta krishnankant uplekar died of light bale
‘ದೀಪದ ಬಾಲೆ’ ಗೀತಾ ಕೃಷ್ಣಕಾಂತ್‌ ಉಪ್ಲೇಕರ್‌ ನಿಧನ


ಗೀತಾ ಕೃಷ್ಣಕಾಂತ್‌ ಉಪ್ಲೇಕರ್‌ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಅಸ್ವಸ್ಥರಾಗಿದ್ದರು. ಗೀತಾ ಅವರು ಹಿಂದೂಸ್ತಾನಿ ಸಂಗೀತದ ಗಾಯಕಿಯೂ ಆಗಿದ್ದರು. ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿ ಹೆಸರಾಂತ ಕಲಾವಿದ ಎಸ್‌.ಎಲ್‌.ಹಲ್ದಂಕರ್‌ ರಚಿಸಿರುವ ಕಲಾಕೃತಿಯಲ್ಲಿ ದೀಪ ಹಿಡಿದಿರುವ ಬಾಲೆಯೇ ಗೀತಾ ಉಪ್ಲೇಕರ್‌.

'ಗ್ಲೋ ಆಫ್‌ ಹೋಪ್‌' ಎಂಬ ಹೆಸರಿನಲ್ಲಿ ಈ ಕಲಾಕೃತಿಯನ್ನು ರಚಿಸಲಾಗಿದೆ. ನಾಡಿನ ಕಲಾ ವಲಯದಲ್ಲೂ ಇದು ಜನಪ್ರಿಯ ಚಿತ್ರಕಲೆ. ಈ ಕಲಾಕೃತಿಯ ವಿಶೇಷವೆಂದರೆ ಕಲಾವಿದ ಹಲ್ದಂಕರ್‌ ಅವರು ತಮ್ಮ ಪುತ್ರಿ ಗೀತಾ ಉಪ್ಲೇಕರ್‌ ಅವರನ್ನೇ ಈ ಕಲಾಕೃತಿಯಲ್ಲಿ ಚಿತ್ರಿಸಿದ್ದಾರೆ. ಗೀತಾ ಅವರಿಗೆ 12 ವರ್ಷ ವಯಸ್ಸಾಗಿದ್ದಾಗ ಹಲ್ದಂಕರ್‌ ಈ ಕಲಾಕೃತಿ ರಚಿಸಿದ್ದಾರೆ.

ಹಲ್ದಂಕರ್‌ ಮಹಾರಾಷ್ಟ್ರದ ಸಾವಂತವಾಡಿ ಪ್ರದೇಶದವರು. ಅಂದು ದೀಪಾವಳಿಯ ದಿನದ ಸಂಜೆ. ಹಲ್ದಂಕರ್‌ ತಮ್ಮ ಮಗಳು ಗೀತಾ ಕಂಚಿನ ದೀಪವನ್ನು ಕೈಯಲ್ಲಿ ಹಿಡಿದು ಗಾಳಿಗೆ ಅದು ನಂದಿ ಹೋಗದಂತೆ ಕೈಯನ್ನು ಅಡ್ಡ ಹಿಡಿದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿದ್ದುದ್ದನ್ನು ಕಂಡರು. ತಕ್ಷ ಣವೇ ಅವರಲ್ಲಿದ್ದ ಕಲಾವಿದ ಜಾಗೃತಗೊಂಡ. ಇದನ್ನೇ ತಮ್ಮ ಚಿತ್ರಕಲೆಯಲ್ಲಿ ಮೂಡಿಸಿದರು. ಇದಕ್ಕಾಗಿ ಗೀತಾ ಮೂರು ತಾಸು ದೀಪವನ್ನು ಕೈಯಲ್ಲಿ ಹಿಡಿದು ನಿಂತಿದ್ದರು. ಈ ಕಲಾಕೃತಿಗೆ ಮೂರು ದಿನಗಳಲ್ಲಿ ಅಂತಿಮ ರೂಪ ನೀಡಿದ್ದರು.

ಕೆಲವು ದಿನಗಳ ನಂತರ ಮೈಸೂರು ಮಹಾರಾಜರ ಸಂಸ್ಥಾನದಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಚಿತ್ರಕಲಾ ವಸ್ತುಪ್ರದರ್ಶನದಲ್ಲಿ ಹಲ್ದಂಕರ್‌ ಕಲಾಕೃತಿಯನ್ನು ಪ್ರದರ್ಶಿಸಿದರು. ಈ ಕಲಾಕೃತಿ ಪ್ರಥಮ ಸ್ಥಾನ ಪಡೆಯಿತು. ಮೈಸೂರು ಮಹಾರಾಜರು ಈ ಕಲಾಕೃತಿಯನ್ನು ಖರೀದಿಸಿ, ಅರಮನೆಯಲ್ಲಿಟ್ಟರು. ಅನಂತರ ಈ ಕಲಾಕೃತಿಯು ಜಗನ್ಮೋಹನ ಅರಮನೆ ಆವರಣದಲ್ಲಿರುವ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿ ಸ್ಥಾನ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ