ಆ್ಯಪ್ನಗರ

ಅಮ್ಮನನ್ನು ಸ್ಕೂಟರ್‌ನಲ್ಲೇ ತೀರ್ಥಯಾತ್ರೆ ಮಾಡಿಸಿ 33 ತಿಂಗಳ ನಂತರ ಮೈಸೂರಿಗೆ ಮರಳಿದ ಕಲಿಯುಗದ ಶ್ರವಣಕುಮಾರ!

ತೀರಿ ಹೋದ ಅಪ್ಪನ 20 ವರ್ಷ ಹಳೆಯ ಸ್ಕೂಟರ್‌ನಲ್ಲೇ ತಾಯಿಯನ್ನು ರಾಷ್ಟ್ರದ ಹೆಚ್ಚಿನ ತೀರ್ಥಕ್ಷೇತ್ರಗಳಿಗೆ ಕರೆದುಕೊಂಡು ಹೋದ ಮೈಸೂರಿನ ಕೃಷ್ಣ ಕುಮಾರ್ ಮತ್ತೆ ಮರಳಿ ತಮ್ಮ ಗೂಡು ಸೇರಿದ್ದಾರೆ.

Vijaya Karnataka Web 19 Sep 2020, 8:16 am
ಮೈಸೂರು: ಶ್ರವಣ ಕುಮಾರ ಕಣ್ಣು ಕಾಣದ ವೃದ್ಧ ಹೆತ್ತವರನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಕರೆದೊಯ್ದು ಪಿತೃಭಕ್ತಿ ಮೆರೆದಿದ್ದ. ಇದೇ ರೀತಿ ಮೈಸೂರಿನ ಕೃಷ್ಣ ಕುಮಾರ್ ಎಂಬವರು ಸ್ಕೂಟರಿನಲ್ಲಿ ತನ್ನ 70 ವರ್ಷದ ತಾಯಿಯನ್ನು ಕುಳ್ಳಿರಿಸಿ ದೇಶ-ವಿದೇಶ ತೀರ್ಥಯಾತ್ರೆ ಮಾಡಿ ಬರೋಬ್ಬರಿ 2ವರ್ಷ 9ತಿಂಗಳ ಬಳಿಕ ಮರಳಿ ತನ್ನ ಊರು ಸೇರಿದ್ದಾರೆ.
Vijaya Karnataka Web shravana


ದೇಶ ಪರ್ಯಟನೆ ಮಾಡಬೇಕೆಂಬ ತಾಯಿಯ ಬಯಕೆ ಮತ್ತು ಮನೆ, ಮಕ್ಕಳಿಗಾಗಿ ಸದಾ ದುಡಿಯುವ ತಾಯಿಯ ಸೇವೆ ಮಾಡಬೇಕೆಂಬ ಸಲುವಾಗಿ ಬೆಂಗಳೂರಿನಲ್ಲಿದ್ದ ಒಳ್ಳೆಯ ಕೆಲಸವನ್ನು ತ್ಯಜಿಸಿ ಡಿ. ಕೃಷ್ಣ ಕುಮಾರ್ ಅವರು ತಮ್ಮ ತಂದೆಯ 20 ವರ್ಷದ ಹಳೆಯ ಸ್ಕೂಟರಿನಲ್ಲೇ ತಾಯಿಯನ್ನು ಇಡೀ ದೇಶ ಸುತ್ತಿಸಿದ್ದಾರೆ. 2001ರಲ್ಲಿ ತಂದೆ ದಕ್ಷಿಣ ಮೂರ್ತಿ ಅವರು ಕೃಷ್ಣ ಕುಮಾರ್ ಅವರಿಗೆ ಈ ಸ್ಕೂಟರ್ ಕೊಡಿಸಿದ್ದರು. 2015 ರಲ್ಲಿ ದಕ್ಷಿಣ ಮೂರ್ತಿ ನಿಧನರಾದರು. ತಮ್ಮ ಇಡೀ ಯಾತ್ರೆಯಲ್ಲಿ ಸ್ಕೂಟರ್ ಅನ್ನು ತಮ್ಮ ತಂದೆ ಎಂದೇ ಕೃಷ್ಣ ಕುಮಾರ್ ಭಾವಿಸಿದ್ದರು.

ಜನವರಿ 19, 2018 ರಲ್ಲಿ 42 ವರ್ಷದ ಕೃಷ್ಣ ಕುಮಾರ್ ಅವರು ಮೈಸೂರಿನಿಂದ "ಮಾತೃಸೇವಾ ಸಂಕಲ್ಪ ಯಾತ್ರೆ"ಯನ್ನು ಕೈಗೊಂಡಿದ್ದರು. ತಮ್ಮ ತಾಯಿ ಚೂಡಾರತ್ನ ಅವರ ಜೊತೆ ಸತತ 2 ವರ್ಷ, 9 ತಿಂಗಳ ಕಾಲ ಸ್ಕೂಟರ್‌ನಲ್ಲಿ 56,522 ಕಿ.ಮೀ. ಕ್ರಮಿಸಿ ಭಾರತ ಮಾತ್ರವಲ್ಲ ಇತರ ಮೂರು ದೇಶಗಳಲ್ಲಿ ತೀರ್ಥಯಾತ್ರೆ ಮುಗಿಸಿ ಬಂದಿದ್ದಾರೆ. ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ ಮೂಲಕ ದೇಶದ ಗಡಿ ದಾಟಿ ನೇಪಾಳ, ಭೂತಾನ್‌, ಮಯನ್ಮಾರ್‌ ದೇಶಗಳಿಗೂ ಹೋಗಿ ದೇವರ ದರುಶನ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಂಡಿದ್ದಾರೆ.



ಮಾತೃಸೇವಾ ಸಂಕಲ್ಪ ಯಾತ್ರೆ ಸಮಯದಲ್ಲಿ ದೇವಾಲಯ, ಮಠ, ಧರ್ಮಛತ್ರಗಳಲ್ಲಿ ತಂಗುತ್ತಿದ್ದರು. ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಲಾಕ್ ಡೌನ್ ಆದ ಸಮಯದಲ್ಲಿ ಭೂತಾನ್‌ನಲ್ಲಿ ಇದ್ದ ಅವರು ಒಂದೂವರೆ ತಿಂಗಳ ಕಾಲ ಅಲ್ಲೇ ತಂಗಿದ್ದರು. ಲಾಕ್ ಡೌನ್ ರಿಲೀಫ್ ಬಳಿಕ ಪಾಸ್ ಪಡೆದು ಮತ್ತೆ ಪ್ರಯಾಣ ಆರಂಭಿಸಿದ ಅವರು ಸೆಪ್ಟೆಂಬರ್ 16 ರಂದು ಮೈಸೂರಿನ ತಮ್ಮ ಮನೆಗೆ ಬಂದು ತಲುಪಿದ್ದಾರೆ. ಮಾತೃಸೇವಾ ಸಂಕಲ್ಪ ಯಾತ್ರೆಯನ್ನು ಮತ್ತೆ ಮುಂದುವರಿಸುವ ಇಂಗಿತವನ್ನು ತಾಯಿ-ಮಗ ಇಬ್ಬರೂ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ